ಬಳ್ಳಾರಿ / ಎಮ್ಮಿಗನೂರ : ಬೇಸಿಗೆ ರಜೆಯ ಸಮಯದ ಸದುಪಯೋಗ ಪಡಿಸಿಕೊಳ್ಳಲು ಮಕ್ಕಳಿಗೆ ತರಬೇತಿ ಶಿಬಿರವು ಸಹಾಯಕವಾಗುತ್ತದೆ ಎಂದು ಪಿಡಿಒ ಲಕ್ಷ್ಮಣ್ ತರುಣಾಯಕ್ ತಿಳಿಸಿದರು.
ಗ್ರಾಮದ ಗ್ರಾಮ ಪಂಚಾಯಿತಿ ವತಿಯಿಂದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 15 ದಿನಗಳ ಬೇಸಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ ಮಕ್ಕಳು ರಜೆಯಲ್ಲಿ ಎಲ್ಲೆಂದರಲ್ಲಿ ಓಡಾಡಿ ಆರೋಗ್ಯ ಕಳೆದುಕೊಳ್ಳುವುದಕ್ಕಿಂತ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಈ ತರಬೇತಿ ಶಿಬಿರಗಳು ಸಹಾಯಕವಾಗುತ್ತವೆ ಎಂದರು.
ನಂತರ ಸ್ವಯಂ ಸೇವಕ ಶಿವನೇಗೌಡರ ರಾಮಪ್ಪ ಮಾತನಾಡಿ ಸರ್ಕಾರ ಮುಂದಿನ ದಿನಮಾನಗಳಲ್ಲಿ ಹೆಚ್ಚಿನ ದಿನಗಳ ಕಾಲ ತರಬೇತಿ ಶಿಬಿರವನ್ನು ನಡೆಸಲು ಅನುವು ಮಾಡಿಕೊಡುವುದರ ಜೊತೆಗೆ ಇನ್ನಷ್ಟು ಸಂಪನ್ಮೂಲ ವ್ಯಕ್ತಿಗಳನ್ನು ತೊಡಗಿಸಿಕೊಳ್ಳಲು ಸಹಕಾರ ನೀಡಬೇಕು ಎಂದರು.
ಈ ವೇಳೆ ಸುಮಾರು 30 ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ದೊಡ್ಡಬಸಪ್ಪ, ಶಿಕ್ಷಕ ಎಸ್. ರಾಮು, ದಂತಪಾಲಕ ಉಮೇಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
