
ಬಳ್ಳಾರಿ / ಕಂಪ್ಲಿ : ಡೆಂಗಿ ಜ್ವರವು ಸಾಂಕ್ರಾಮಿಕ ರೋಗವಾಗಿದ್ದು, ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತ ಒಳಾಂಗಣದಲ್ಲಿ ಮತ್ತು ಹೊರಾಂಗಣದಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ವೈದ್ಯಾಧಿಕಾರಿ ಡಾ. ರವೀಂದ್ರ ಕನಿಕೇರಿ ಹೇಳಿದರು.
ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ತ್ರೀಯ ಡೆಂಗ್ಯೂ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವ ವಯೋವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಡೆಂಗಿ ತಡೆಗೆ ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು, ಸೊಳ್ಳೆಗಳು ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸಬೇಕು, ಸೊಳ್ಳೆ ಬತ್ತಿ ಮತ್ತು ಮುಲಾಮು ದ್ರಾವಣ ಉಪಯೋಗಿಸಬೇಕು, ಸೊಳ್ಳೆಯ ಕಡಿತದಿಂದ ಒಬ್ಬರಿಂದ ಇನ್ನೊಬ್ಬರಿಗೆ ಡೆಂಗಿ ಜ್ವರ ಹರಡುತ್ತದೆ, ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ.
ಡೆಂಗಿ ತಡೆಗೆ ಬನ್ನಿ ಎಲ್ಲರೂ ಕೈಜೋಡಿಸೋಣ ಎಂಬ ಘೋಷ ವಾಕ್ಯದೊಂದಿಗೆ ಡೆಂಗಿ ಮುಕ್ತಗೊಳಿಸಬೇಕು. ಸೊಳ್ಳೆಯಿಂದ ಡೆಂಗಿ, ಚಿಕೂನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ, ಆನೆಕಾಲು ರೋಗವು ಹರಡುತ್ತದೆ. ಈ ರೋಗಗಳ ನಿಯಂತ್ರಣಕ್ಕೆ ಸಮುದಾಯ ಸಹಭಾಗಿತ್ವ ಅತಿ ಮುಖ್ಯ’ ಎಂದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಮಲ್ಲೇಶಪ್ಪ, ಡಾ.ವಿರೇಶ, ಡಾ. ಪ್ರಕಾಶಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶೋಭಾ, ತಾಲೂಕು ಆರೋಗ್ಯ ನಿರೀಕ್ಷಕ ಬಸವರಾಜ, ಸಿಬ್ಬಂದಿಗಳಾದ ಚನ್ನಬಸವರಾಜ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.
ಮನೆ ಮನೆಗೆ ಜಾಗೃತಿ :
ಇಲ್ಲಿನ ವಾರ್ಡ್ಗಳಲ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಚನ್ನಬಸವರಾಜ ಇವರು ಅಲ್ಲಿನ ವಾರ್ಡಿನ ಜನತೆಗೆ ಡೆಂಗ್ಯೂ ಜ್ವರದ ಜಾಗೃತಿ ಮೂಡಿಸುವ ಜತೆಗೆ ರೋಗ ತಡೆಯುವ ಬಗ್ಗೆ ಸಲಹೆ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್
