ಬಳ್ಳಾರಿ / ಕಂಪ್ಲಿ : ರಾಜ್ಯದ ಪ್ರತಿಯೊಂದು ಇಲಾಖೆಯ ಯೋಜನೆಗಳನ್ನು ಸಕಾಲದಲ್ಲಿ ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಪಾತ್ರ ಅತಿ ಮುಖ್ಯವಾಗಿದೆ. ಆದರೆ, ಕೆಲವರ ನಿರ್ಲಕ್ಷ್ಯ ಮತ್ತು ಕಳಪೆ ಮಟ್ಟದ ಕಾಮಗಾರಿಗಳಿಗೆ ಕಾರಣೀಬೂತರಾಗುವವರಿಗೆ ಶಿಸ್ತುಕ್ರಮ ಕೈಗೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ದಿಶಾ ಸಮಿತಿಯ ರಾಜ್ಯ ಸದಸ್ಯ ಡಾ.ಎ.ಸಿ.ದಾನಪ್ಪ ಹೇಳಿದರು.
ಅವರು ಶನಿವಾರ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 42 ಇಲಾಖೆಗೆ 67 ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ದಿಶಾ ಸಮಿತಿಯು ಪ್ರಮುಖ ಪಾತ್ರವಹಿಸುತ್ತದೆ. ದೂರಿನ ಮೇಲೆ ಇಲಾಖೆಯ ದಾಖಲೆಗಳನ್ನು ಪರಿಶೀಲಿಸುವ ಜವಾಬ್ದಾರಿಯಾಗಿದೆ. ಕಳಪೆ ಮತ್ತು ಭ್ರಷ್ಟಾಚಾರ ಕಂಡು ಬಂದಲ್ಲಿ ಕಾನೂನು ಕ್ರಮಕ್ಕೆ ದಿಶಾ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು. ಎರಡನೇ ಹಂತದಲ್ಲಿ ಕೇಂದ್ರದ ಪಿಎಂಗೆ ದೂರು ನೀಡಬಹುದಾಗಿದೆ. ಕೇಂದ್ರದಿಂದ ಬರುವಂತಹ ಎಲ್ಲಾ ಅನುದಾನಗಳನ್ನು ಆಯಾ ಯೋಜನೆಗಳಿಗೆ ಬಳಕೆ ಮಾಡಬೇಕು. ಅದರ ದುರುಪಯೋಗ, ಕಳಪೆ ಕಾಮಗಾರಿ ಮಾಡಿದರೆ, ದಿಶಾ ಸಮಿತಿ ಸದಸ್ಯರಾದ ನಾವು ಇಲಾಖೆಯನ್ನು ವಶಕ್ಕೆ ಪಡೆದು, ಕ್ರಿಯಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ಮಾಡಿ, ಪಾರದರ್ಶಕವಾದಲ್ಲಿ ಪಾರದರ್ಶಕ ಅಥವಾ ಕಳಪೆಯಾದಲ್ಲಿ ಅವರ ಮೇಲೆ ಶಿಸ್ತುಕ್ರಮಕ್ಕಾಗಿ ಸಮಿತಿಯ ಅಧ್ಯಕ್ಷರಾದ ಸಿಎಂ ಸಿದ್ದರಾಮಯ್ಯ ಇವರಿಗೆ ದೂರಿನ ವರದಿ ಸಲ್ಲಿಸಲಾಗುವುದು. ಆಶಾ ಕಾರ್ಯಕರ್ತೆಯಿಂದ ಹಿಡಿದು, ಬಿಸಿ ಊಟವರೆಗೆ ಹಾಗೂ ಅಂಗನವಾಡಿ ಕೇಂದ್ರದಿಂದ ಹಿಡಿದು, ಸಿಎಂ ಪದವಿವರೆಗೂ ಹುಟ್ಟಿಕೊಂಡಿರುವ ಇಲಾಖೆವರೆಗೂ ಕಾರ್ಯವ್ಯಾಪ್ತಿ ಹಬ್ಬಿಕೊಂಡಿದೆ. ಮತ್ತು ರೈಲ್ವೆ ಇಲಾಖೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಕಳಪೆ ಕಂಡು ಬಂದಲ್ಲಿ ಸಹ ದೂರು ಸಲ್ಲಿಸಬಹುದಾಗಿದೆ. ಟೆಲಿಫೋನ್ ಆಫೀಸ್‌ನಲ್ಲಿ ಗ್ರಹಕರಿಗೆ ತೊಂದರೆಯಾದಲ್ಲಿ ಇದರ ಬಗ್ಗೆ ಧ್ವನಿ ಎತ್ತಬಹುದಾಗಿದೆ. ವೃದ್ಯಾಪ್ಯ ವೇತನ, ವಿಧವಾ ವೇತನಕ್ಕಾಗಿ ಅಲೆದಾಡಿಸಿದರೆ, ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಗ್ರಹಿಸಲಾಗುವುದು. ಮೇ.14ರಂದು ಬೆಂಗಳೂರಿನಲ್ಲಿ ನಡೆದ ದಿಶಾ ಸಮಿತಿಯ ರಾಜ್ಯ ಮಟ್ಟದ ಸಭೆಯಲ್ಲಿ ಸಿ. ಎಂ. ಅವರು ಒಂದು ಬೇಡಿಕೆ ಇಟ್ಟರು. ಕೇಂದ್ರದ ಅನುದಾನದ ಕೊರತೆ ಇದ್ದು, ತರುವಂತೆ ತಿಳಿಸಿದ್ದಾರೆ. ಮುಂದಿನ ದಿನದಲ್ಲಿ ಆಯಾ ಇಲಾಖೆಗೆ ಭೇಟಿ ನೀಡಿ, ಲೋಪದೋಷಗಳು ಕಂಡು ಬಂದಲ್ಲಿ ಶಿಸ್ತುಕ್ರಮಕ್ಕಾಗಿ ಸಮಿತಿ ಅಧ್ಯಕ್ಷರ ಗಮನಕ್ಕೆ ತರಲಾಗುವುದು. ಅತಿ ಶೀಘ್ರದಲ್ಲೇ ಕಂಪ್ಲಿಯಲ್ಲಿ ದಿಶಾ ಸಮಿತಿ ಕಚೇರಿ ಆರಂಭಿಸಲಾಗುವುದು ಎಂದರು.
ವರದಿ : ಜಿಲಾನಸಾಬ್ ಬಡಿಗೇರ್
