ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೇ 18 ರಿಂದ 20ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಹೇಳಿದರು.
ಅವರು ನೌಕರರ ಸಂಘದ ಸಭಾಂಗಣದಲ್ಲಿ ಕ್ರೀಡಾಕೂಟದ ಲಾಂಛನ, ಕ್ರೀಡಾ ಸಮವಸ್ತ್ರ ಹಾಗೂ ಟ್ರೋಫಿ ಬಿಡುಗಡೆಗೊಳಿಸಿ, ಪತ್ರಿಕಾ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಾ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಈಗಾಗಲೇ ಸಕಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಎಲ್ಲಾ 15,000 ನೌಕರ ಕ್ರೀಡಾಪಟುಗಳಿಗೆ ಟ್ರಾಕ್ ಸೂಟನ್ನು ನೋಂದಣಿ ಸಂದರ್ಭದಲ್ಲಿಯೇ ನೀಡಲಾಗುವುದು. ಸ್ಪರ್ಧೆಯಲ್ಲಿ ಎಲ್ಲಾ ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿಯನ್ನು ಕೊಡಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಅತ್ಯಂತ ಆಕರ್ಷಕವಾದ ಟ್ರೋಫಿಯನ್ನು ಕ್ರೀಡಾಪಟುಗಳಿಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ವಿಜೇತ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ, ಟ್ರೋಫಿಯ ಜೊತೆಗೆ ಸಫಾರಿ ಕಂಪನಿಯ ಟ್ರಾಲಿ ಬ್ಯಾಗನ್ನು ಕೂಡಾ ನೀಡಲಾಗುತ್ತಿದೆ ಎಂದು ಹೇಳಿದರು
ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ನಗರಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ನಾಲ್ಕು ಗಂಟೆಗೆ ಸಮಾರಂಭಕ್ಕೆ ಆಗಮಿಸಲಿದ್ದು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ. ಉಪಮುಖ್ಯಮಂತ್ರಿಗಳು ಕೂಡಾ ರಸ್ತೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಶಾಸಕರು ಹಾಗೂ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ನಂತರ ಇದೇ ಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷನಾದ ನಂತರ ನಾಲ್ಕು ಬಾರಿ ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಒಂದು ವಿಶೇಷವಾಗಿದೆ ಎಂದ ಅವರು, ಮೇ 19ರಂದು ಸಂಜೆ ನೆಹರೂ ಕ್ರೀಡಾಂಗಣದಲ್ಲಿ ಜನಪದ ದಿಬ್ಬಣ ಕಾರ್ಯಕ್ರಮ ನಡೆಯಲಿದ್ದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಜಗದೀಶ್ ಹಾಗೂ ಶಿವಮೊಗ್ಗ ಕೇಂದ್ರ ವಲಯ ಸಂಪರ್ಕ ಮತ್ತು ಕಟ್ಟಡದ ಮುಖ್ಯ ಇಂಜಿನಿಯರ್ ಬಿವಿ ಜಗದೀಶ್ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಮುಖ್ಯ ಅತಿಥಿಗಳಾಗಿ ಸಿದ್ದಲಿಂಗರೆಡ್ಡಿ ಶಾಹಿ ಎಕ್ಸ್ಪೋರ್ಟ್ ನ ವ್ಯವಸ್ಥಾಪಕ ಲಕ್ಷ್ಮಣ್, ಸೂಡಾ ಆಯುಕ್ತ ವಿಶ್ವನಾಥ್ ಅವರು ಆಗಮಿಸಲಿದ್ದಾರೆ ಎಂದರು.
ಮೇ 20ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಾಗೂ ಮಾಜಿ ಶಾಸಕರುಗಳಾದ ಆರ್ ಮಂಜುನಾಥ್ ನೆರವೇರಿಸಲಿದ್ದಾರೆ ಇವರೊಂದಿಗೆ ಬಿಸಿಬಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ ಕಾಂಗ್ರೆಸ್ ಮುಖಂಡ ಎಂ ಶ್ರೀಕಾಂತ್ ಸೇರಿದಂತೆ ಅನೇಕ ಮುಖಂಡರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು
ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಎಲ್ಲಾ ನೌಕರ ಬಂಧುಗಳಿಗೆ ಊಟ, ವಸತಿ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಲಾಗಿದೆ ಎಲ್ಲರಿಗೂ ಕೂಡ ಅವರ ವಾಟ್ಸಪ್ ಗಳಿಗೆ ಕ್ಯೂಆರ್ ಕೋಡ್ ನ್ನು ಹಾಕಲಾಗುತ್ತಿದೆ ಅದರಲ್ಲಿ ಎಲ್ಲ ಸಮಗ್ರ ಮಾಹಿತಿ ದೊರೆಲಿದೆ ಯಾರಿಗೂ ಕೂಡಾ ಗೊಂದಲ ಆಗದಂತೆ ಮತ್ತು ಎಲ್ಲಿಯೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು
ಕ್ರೀಡಾಪಟುಗಳು ತಂಗುವ ಮತ್ತು ಕ್ರೀಡಾಕೂಟದ ಸ್ಥಳಕ್ಕೆ ಸಂಚರಿಸಲು ಅನುಕೂಲವಾಗುವಂತೆ 40 ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್, ಕಾರ್ಯದರ್ಶಿ ಪಾಪಣ್ಣ, ಸಿದ್ಬಸಪ್ಪ, ದಿನೇಶ್, ರಂಗನಾಥ್, ಆರ್.ಮಾರುತಿ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ
