ಕಲಬುರಗಿ :ಕೆಂಬಾಳೆ ಖ್ಯಾತಿಯ ಕಮಲಾಪುರದ ಇಬ್ಬರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎಂಬುದನ್ನು ಈ ಮೂಲಕ ಸಾರಿ ಹೇಳಿದ್ದಾರೆ.
ಈಗಿನಿಂದಲೇ ಐಎಎಸ್ ಮತ್ತು ಕೆಎಎಸ್ ಆಗಲು ತಯಾರಿ ಮಾಡಬೇಕು, ಅಗತ್ಯ ಸಹಕಾರ ನೀಡಲು ನಾನು ಸಿದ್ದನಿದ್ದೇನೆ ಎಂದು ಕಮಲಾಪುರ ತಹಶೀಲ್ದಾರ್ ಮಹಮ್ಮದ್ ಮೊಹಸಿನ್ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಮೌಂಟ್ ವೇವ್ ಪ್ರೌಢಶಾಲೆಯಲ್ಲಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಹಮ್ಮಿಕೊಂಡ ಹತ್ತನೇ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಾಲಕರು ಮಕ್ಕಳ ಆಸಕ್ತಿಗೆ ಅನುಗುಣವಾದ ಕೊಸ್೯ಗೆ ದಾಖಲಾತಿ ಒದಗಿಸಬೇಕು, ಫಲಿತಾಂಶದಲ್ಲಿ ಕಲಬುರ್ಗಿ ಕೊನೆಯ ಸ್ಥಾನದಲ್ಲಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು, ಮೊಬೈಲ್ ಬಿಟ್ರೆ ಮಾತ್ರ ಅಂದುಕೊಂಡ ಸಾಧನೆ ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಕ. ಸಾ. ಪ ಗೌರವ ಕಾರ್ಯದರ್ಶಿ ಧಮ೯ಣ್ಣ ಧನ್ನಿ ಮಾತನಾಡಿ ಬಾಲಕರು ಅಭ್ಯಾಸದತ್ತ ಚಿತ್ತ ಹರಿಸದೆ ವಿವಿಧ ಚಟುವಟಿಕೆಗಳತ್ತ ಚಿತ್ತ ಹರಿಸುತ್ತಿರುವುದು ಒಳ್ಳೆಯದಲ್ಲ,
ಅಂಕಗಳಿಕೆ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳಬೇಕು, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳು ಅಳವಡಿಸಿಕೊಳ್ಳಬೇಕು, ಬಾಲಕಿಯರ ಸಾಧನೆ ಕಂಡಾಗ ಪ್ರಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಕಂಡ ಕನಸು ನನಸಾಗುತ್ತಿದೆ ಎಂದರು.
ಸಂಸ್ಥೆ ಅಧ್ಯಕ್ಷ ಶಾಂತಕುಮಾರ ಪುರದಾಳ ಮಾತನಾಡಿ ಹೆಚ್ಚು ಅಂಕ ಪಡೆದವರು ಮೈಮರೆಯದೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಪ್ರಯತ್ನಿಸಬೇಕು,
ಮುಂಬರುವ ದಿನಗಳಲ್ಲಿ 625 ಕ್ಕೆ 625 ಅಂಕ ಗಳಿಕೆಯತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.
ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಅನಂತಕುಮಾರ್ ಪಾಟೀಲ್ ಸ್ವಾಗತಿಸಿದರು, ಮಲ್ಲಿನಾಥ ಅಂಬಲಗಿ ನಿರೂಪಿಸಿದರು, ದಾಸಿಮಯ್ಯ ವಡ್ಡನಕೇರಿ ವಂದಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪದಾಧಿಕಾರಿ ಎಂ.ಎನ್.ಸುಗಂಧಿ, ಕಸಾಪ ತಾಲೂಕು ಗೌರವ ಕೋಶಾಧ್ಯಕ್ಷ ನಾಗಣ್ಣ ವಿಶ್ವಕಮ೯, ಮಹಾಗಾಂವ ಕ್ರಾಸ್ ಸರಕಾರಿ ಪ್ರಾಥಮಿಕ ಶಾಲೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗನ್ನಾಥ ಭಜಂತ್ರಿ, ಕಸಾಪ ಹಿಂದುಳಿದ ವರ್ಗದ ಪದಾಧಿಕಾರಿ ಸಂಜಯಕುಮಾರ್ ನಾಟಿಕರ್, ವೈಜನಾಥ್ ಜಮಾದಾರ, ಶಿಕ್ಷಕ ಪ್ರಸಾದ್ , ಶಿಕ್ಷಕಿ ಸಂತೋಷಿ, ಜ್ಯೋತಿ ಮೂಲಗೆ, ವಿಠ್ಠಲ್, ಶಿವಕುಮಾರ್ ಮೂಲಗೆ, ಕಿರಣ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ
