ಬಳ್ಳಾರಿ / ಕಂಪ್ಲಿ: ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಪರಸ್ಪರ ಸೌಹಾರ್ದ, ಸಾಮರಸ್ಯ ಹಾಗೂ ಸಮಾನತೆಯಿಂದ ಜೀವನ ನಡೆಸಬೇಕು ಎಂದು ಕುರುಗೋಡು ಪೊಲೀಸ್ ಠಾಣೆಯ ಮುಖ್ಯ ಪೇದೆ ಎ.ವಿಜಯಕುಮಾರ್ ತಿಳಿಸಿದರು.
ಅವರು ಕಂಪ್ಲಿ ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ಅಪರಾಧ ಕೃತ್ಯಗಳು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರೂ ಹೇಗೆ ಜೀವಿಸಬೇಕೆನ್ನುವ ಬಗ್ಗೆ ಸಾರ್ವಜನಿಕರಲ್ಲಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮಕ್ಕೆ ಯಾರಾದರೂ ಅನಾಮಿಕ ವ್ಯಕ್ತಿಗಳು ಬಂದಲ್ಲಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಗ್ರಾಮದಲ್ಲಿ ಬಾಲ್ಯ ವಿವಾಹಗಳು, ಬಾಲಕಾರ್ಮಿಕ ಪದ್ದತಿಗಳು ಕಂಡು ಬಂದಲ್ಲಿ, ಮಾಹಿತಿ ನೀಡಬೇಕು. ಗ್ರಾಮದಲ್ಲಿ ಯಾರಾದರೂ ಕುಟುಂಬ ಸಮೇತ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಪಕ್ಕದ ಮನೆಯವರಿಗೆ, ಪೊಲೀಸರಿಗೆ ಸೂಕ್ತವಾದ ಮಾಹಿತಿಯನ್ನು ನೀಡಬೇಕು. ಕುಟುಂಬಸ್ಥರು ನಗದು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿ ಸುರಕ್ಷಿತವಾಗಿಡಬೇಕೆಂದರು. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕೆಂದರಲ್ಲದೆ, ಯಾವುದೇ ಅಹಿತಕರ ಘಟನೆಗಳ ಬಗ್ಗೆ, ಅನಾಮಿಕ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರು, ಗ್ರಾಮದ ಮುಖಂಡರು, ಯುವಕರು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
