ಬಳ್ಳಾರಿ / ಕಂಪ್ಲಿ: ಮಳೆ ಬಂದರೆ ಸಾಕು ರಸ್ತೆಗಳೆಲ್ಲಾ ಕಾಲುವೆಗಳಾಗುವಂತಾಗಿರುವುದು ಒಂದೆಡೆಯಾದರೆ, ಬೀದಿ ದೀಪಗಳಿಲ್ಲದೆ, ಚರಂಡಿಗಳಿಲ್ಲದೆ ಮೂಲಭುತ ಸೌಲಭ್ಯಗಳಿಂದ ವಂಚಿತವಾಗಿರುವುದು ಇನ್ನೊಂದೆಡೆಯಾಗಿದೆ. ಇವುಗಳ ಮಧ್ಯೆ ಕಂಪ್ಲಿ ಪುರಸಭೆಯ 8ನೇ ವಾರ್ಡಿನ ಸಾರ್ವಜನಿಕರ ಗೋಳನ್ನು ಕೇಳುವವರು ಇಲ್ಲದಂತಾಗಿದೆ.
ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿಯೇ ಅತೀ ಹೆಚ್ಚು ವಿಸ್ತೀರ್ಣವಿರುವ ವಾರ್ಡ್ ಇದಾಗಿದ್ದು, ಅತೀ ಹೆಚ್ಚು ತೆರಿಗೆ ಪಾವತಿಸುವ ವಾರ್ಡ್ ಸಹ ಇದೇ ಆಗಿದೆ. ಆದರೆ ಈ ವಾರ್ಡಿನ ಜನರಿಗೆ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ.
ವಾರ್ಡಿನಲ್ಲಿ ರಸ್ತೆ, ಚರಂಡಿ,ಬೀದಿ ದೀಪಗಳನ್ನು ಒದಗಿಸಿಕೊಡುವಲ್ಲಿ ಪುರಸಭೆಯವರು ವಿಫಲರಾಗಿದ್ದಾರೆ.ವಿಪರ್ಯಾಸವೆಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿ ಸಮರ್ಪಕವಾಗಿ ರಸ್ತೆ, ಚರಂಡಿಗಳಿಲ್ಲವೆನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ.
ಈ ಬಗ್ಗೆ ಸ್ಥಳೀಯ ವಾರ್ಡಿನ ಸದಸ್ಯರಾದ ಟಿ.ವಿ.ಸುದರ್ಶನರೆಡ್ಡಿಯವರು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಪತ್ರಗಳನ್ನು ನೀಡಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿದ್ದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳಿಗೆ 2024ರಲ್ಲಿ ಎರಡು ಸಲ, 2025ರಲ್ಲಿ ಒಂದು ಸಲ ರಸ್ತೆ,ಚರಂಡಿ ಹಾಗೂ ಬೀದಿ ದೀಪಗಳನ್ನು ಒದಗಿಸಿಕೊಡುವಂತೆ ಮನವಿ ನೀಡಲಾಗಿದೆ. ಜೊತೆಗೆ ಪುರಸಭೆಯ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೂ ಮನವಿಯನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡಿನಲ್ಲಿ ಸಮರ್ಪಕವಾದ ರಸ್ತೆಗಳು ಹಾಗೂ ಚರಂಡಿಗಳು ಇರುವುದರಿಂದ ಚರಂಡಿಯ ನೀರೆಲ್ಲಾ ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಇನ್ನು ಬೀದಿ ದೀಪಗಳಂತೂ ಕೇಳುವುದೇ ಬೇಡ. ಬೀದಿ ದೀಪಗಳಿಲ್ಲದೆ ನೀರು ನಿಂತಿರುವ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಇನ್ನು ಮಳೆಯಾದರಂತೂ ಮುಗಿದೇ ಹೋಯ್ತು, ರಸ್ತೆಗಳೆಲ್ಲಾ ಕಾಲುವೆಗಳಂತಾಗಿ ಪ್ರತಿದಿನ ಓಡಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು.
ವಾರ್ಡಿನಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪುರಸಭೆಯಲ್ಲಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳನ್ನು ವಿಚಾರಿಸಿದರೆ ಸೂಕ್ತವಾದ ಉತ್ತರವನ್ನೇ ನೀಡುತ್ತಿಲ್ಲವೆಂದು ವಾರ್ಡಿನ ಅನೇಕ ಜನರು ದೂರುತ್ತಿದ್ದಾರೆ. ನಮ್ಮ ವಾರ್ಡಿನ ಸದಸ್ಯರನ್ನು ವಿಚಾರಿಸಿದರೆ ನಾನು ಸಹಿತ ಪುರಸಭೆಯಲ್ಲಿ ಹಾಗೂ ಜಿಲ್ಲಾಧಿಕಾರಿಗಳಿಗೆ ಅನೇಕ ಸಲ ಮೂಲಭುತ ಸೌಕರ್ಯಗಳಿಗಾಗಿ ಮನವಿಯನ್ನು ಸಲ್ಲಿಸಿದ್ದೇನೆ ಎಂದು ತಿಳಿಸುತ್ತಾರೆ ಎಂದು ತಮ್ಮ ಅಸಮಧಾನವನ್ನು ತೋಡಿಕೊಳ್ಳುತ್ತಾರೆ.
ವರದಿ : ಜಿಲಾನಸಾಬ್ ಬಡಿಗೇರ್
