ಬೆಂಗಳೂರು: ವೃಷಭಾವತಿ ಏತ ನೀರಾವರಿ ಯೋಜನೆಯಿಂದ ಧಾರ್ಮಿಕ ಆಚರಣೆಗೂ ಕಂಟಕ
ಹೊಯ್ಸಳರ ಕಾಲದ ಧಾರ್ಮಿಕ ಆಚರಣೆಗೆ ಪೂರ್ಣವಿರಾಮ
ಕೊಳಚೆ ನೀರಿನಲ್ಲಿ ತೆಪ್ಪೋತ್ಸವ ಮಾಡುವುದಿಲ್ಲ ಎಂದ ಭಕ್ತ ಸಮೂಹ | ವೃಷಭಾವತಿ ವಿಷ ವಿಷ ವಿಷ
ಹೊಯ್ಸಳರ ಕಾಲದ ಇತಿಹಾಸದ ಹಿನ್ನಲೆಯುಳ್ಳ ತೆಪ್ಪದ ಬೇಗೂರು ಇಂದಿನ ಟಿ. ಬೇಗೂರು ಗ್ರಾಮದಲ್ಲಿ ಎರಡು ಕೆರೆಗಳಿದ್ದು ಚಿಕ್ಕಕೆರೆ ಮತ್ತು ದೊಡ್ಡಕೆರೆ ಎರಡೂ ಸಹ ರೈತರ ಜೀವನಾಡಿಯಾಗಿದೆ ಚಿಕ್ಕ ಕೆರೆಯು ಟಿ. ಬೇಗೂರಿನ ಗ್ರಾಮವೊಂದಕ್ಕೆ ಜೀವನಾಡಿಯಾದರೆ ದೊಡ್ಡಕೆರೆಯು ಟಿ.ಬೇಗೂರು ಸೇರಿದಂತೆ ಮಾರೋಹಳ್ಳಿ, ಯರಮಂಚನಹಳ್ಳಿ, ತೊಣಚಿನಕುಪ್ಪೆ,ಬೈರನಹಳ್ಳಿ,ಅಗಸರಹಳ್ಳಿ ಗ್ರಾಮಗಳ ಜನರಿಗೆ ವರದಾನವಾಗಿದೆ ಆದರೆ ರಸ್ತೆ ಪಕ್ಕದಲ್ಲಯೇ ಇರುವ ಚಿಕ್ಕಕೆರೆಯು ಈಗಾಗಲೇ ಹತ್ತಾರು ಗುಂಡಿಗಳಿಂದ ಹದಗೆಟ್ಟಿದ್ದು ಅಂಗಡಿ-ಮುಂಗಟ್ಟುಗಳ ತ್ಯಾಜ್ಯದಿಂದ ಸಂಪೂರ್ಣ ವಿನಾಶದ ಅಂಚಿಗೆ ಸೇರಿದರೆ ಮಳೆ ನೀರಿನಿಂದ ಸುಭೀಕ್ಷವಾಗಿ ಉಳಿದ ದೊಡ್ಡಕೆರೆಗೆ ಇದೀಗ ವೃಷ(ವಿಷ)ಭಾವತಿ ಏತ ನೀರಾವರಿ ಯೋಜನೆಯ ನೀರು ಹರಿಯುವುದರಿಂದ ಲಕ್ಷಾಂತರ ಹಿಂದೂ ಭಕ್ತರ ಧಾರ್ಮಿಕ ಭಾವನೆಗೂ ಸಹ ಕಂಟಕವಾಗಿ ಪರಿಣಮಿಸಿದೆ.
ತಾಲ್ಲೂಕಿನಲ್ಲಿಯೇ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಶ್ರೀ ಕರಿತಿಮ್ಮರಾಯ ಸ್ವಾಮಿ ದೇವಾಲಯವು ಹೊಯ್ಸಳ ರಾಜ ವಿಷ್ಣುವರ್ಧನನ ಕಾಲದಲ್ಲಿ ಜೀರ್ಣೋದ್ಧಾರ ಕಂಡ ದೇವಾಲಯ, ಅದಷ್ಟೇ ಅಲ್ಲದೇ ಪುರಾಣದಲ್ಲಿ ಗಜೇಂದ್ರನಿಗೆ ಮೋಕ್ಷ ಸಿಕ್ಕ ಸ್ಥಳವೆಂಬ ಇತಿಹಾಸ ಹಿನ್ನಲೆಯುಳ್ಳ ಗ್ರಾಮದ ಶ್ರೀ ಕರಿತಿಮ್ಮರಾಯ ಸ್ವಾಮಿಯನ್ನು ಗ್ರಾಮದ ಎರಡು ಕೆರೆಗಳಲ್ಲಿ ಯಾವ ಕೆರೆ ತುಂಬಿದರೂ ಸಹ ಕೆರೆಗೆ ಬಾಗಿನ ಅರ್ಪಿಸಿ ಬಿದಿರಿನ ತೆಪ್ಪ ಕಟ್ಟಿ ಕರೆಯಲ್ಲಿ ತೆಪ್ಪೋತ್ಸವ ಮಾಡುವ ಪದ್ದತಿಯು ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಿದೆ ಆದರೆ ಸರ್ಕಾರದ ಈ ವೃಷಭಾವರಿ ಏತ ನೀರಾವರಿ ಯೋಜನೆಯ ಕಲುಷಿತ ಹಾಗೂ ಮಲಿನವಾದ ನೀರು ನಮ್ಮೂರ ಕೆರೆಗೂ ಸಹ ಬರುವುದರಿಂದ ತಲೆಮಾರುಗಳಿಂದ ಆಚರಿಸಿಕೊಂಡು ಬಂದ ಕರಿತಿಮ್ಮರಾಯ ಸ್ವಾಮಿಯ ತೆಪ್ಪೋತ್ಸವ ಸೇವೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳುವುದರ ಜೊತೆಗೆ ಲಕ್ಷಾಂತರ ಭಕ್ತ ಸಮೂಹಕ್ಕೆ ಹಾಗೂ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವುದಲ್ಲದೇ ಗತಕಾಲದಿಂದಲೂ ಆಚರಿಸಿಕೊಂಡು ಬಂದ ಸನಾತನ ಹಿಂದೂ ಧರ್ಮದ ಪ್ರಮುಖ ಆಚರಣೆಯೊಂದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ ಎಂದು ಅರ್ಚಕರಾದ ಬಿ.ಟಿ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.
- ಕರುನಾಡ ಕಂದ
