ಬಾಗಲಕೋಟೆ: ಸಜ್ಜನ, ಪ್ರಾಮಾಣಿಕ, ಪರೋಪಕಾರದ ದೂರದೃಷ್ಟಿ ಇರುವಂತಹ ಮಾಜಿ ಸಚಿವ ಎಸ್.ಆರ್.ಪಾಟೀಲ ಸಾವಿರಾರು ಕುಟುಂಬಗಳಿಗೆ ಊಟ,ಆಶ್ರಯ ನೀಡಿದಂತವರು, ಕಲಾವಿದರನ್ನು ಪ್ರೊತ್ಸಾಹಿಸುವಲ್ಲಿಯೂ ತಮ್ಮ ಹೃದಯ ವೈಶಾಲ್ಯತೆ ತೋರಿದವರು ಎಂದು ರಂಗಭೂಮಿ ಕಲಾವಿದ, ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳಿದರು.
ಜಿಲ್ಲೆಯ ಬೀಳಗಿ ಪಟ್ಟಣದ ಸ್ವಾಮಿ ವಿವೇಕಾನಂದ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ‘ಅಮರ ಮಧುರ ಪ್ರೇಮ’ ಹಾಸ್ಯಭರಿತ ಕೌಟುಂಬಿಕ ನಾಟಕದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೃಷ್ಣಾ, ಘಟಪ್ರಭಾ ನದಿಗಳ ಮಧ್ಯದಲ್ಲಿರುವ ಬೀಳಗಿಯ ಪವಿತ್ರ ನೆಲದಲ್ಲಿ ಜನ್ಮವೆತ್ತಿದ ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರಾಜ್ಯಮಟ್ಟದಲ್ಲಿ ತನ್ನ ಅಂಗ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಹಲವಾರು ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದೆ ಎಂದು ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಸಾಲ ಕೊಟ್ಟಿದ್ದೇವೆ, ಸಾಲ ವಸೂಲಿ ಮಾಡಿದ್ದೇವೆ, ಹಲವಾರು ಜನ ಸಿಬ್ಬಂದಿಗೆ ಕೆಲಸ ಕೊಟ್ಟದ್ದೆವೆ ,ಗ್ರಾಹಕರಿಗೆ ಪ್ರತಿಶತ ಲಾಭಾಂಶ ವಿತರಿಸಿದ್ದೇವೆ ಎಂದು ರಾಜಾರೋಷವಾಗಿ ಹೇಳುವ ಬ್ಯಾಂಕುಗಳ ಸಾಲಿನಲ್ಲಿ ಅಪರೂಪವಾಗಿ ಕಾಣುವ ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ಹಲವಾರು ವಿದಾಯಕ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುವ ಮೂಲಕ ತನ್ನ ಪ್ರಾವೀಣ್ಯತೆ ಮೆರೆದಿದೆ ಎಂದು ಹೇಳಿದರು.
ಸರ್ವಜನಾಂಗದ ಮಹಿಳೆಯರು, ಮಕ್ಕಳು, ರೈತರು, ಕ್ರೀಡಾಪಟುಗಳು, ಸಾಹಿತಿಗಳು, ಕಲಾವಿದರು, ವ್ಯಾಪಾರಸ್ಥರು ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್. ಬಿ. ಕುರ್ತಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷ ಸತ್ಯಪ್ಪ ಮೆಲ್ನಾಡ, ನಿರ್ದೇಶಕ ಎಮ್ ಎನ್ ಪಾಟೀಲ, ಕಲಾವಿದ ಸುಂದರ ಭಾಗವಹಿಸಿದ್ದರು. ಗೌರಮ್ಮ ಕೆಂಗಲಗುತ್ತಿ ಸ್ವಾಗತಿಸಿ, ನಿರೂಪಿಸಿದರು.
- ಕರುನಾಡ ಕಂದ
