ಬಾಗಲಕೋಟೆ : ಅಮೃತ ಭಾರತ ರೈಲು ನಿಲ್ದಾಣ ಯೋಜನೆಯಡಿ ನೈಋುತ್ಯ ರೈಲ್ವೆ ವಿಭಾಗದ ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಿಲ್ದಾಣಗಳು ನವೀಕರಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಹಾಗೂ ಜನಪ್ರತಿನಿಗಳು ಭಾಗವಹಿಸಿದ್ದರು.
ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ `ಕೇಂದ್ರ ಸರಕಾರ ರೈಲ್ವೆ ವಲಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ರಕ್ಷಣಾ ವ್ಯಾಪ್ತಿಯ ನಂತರ ಅತಿ ಹೆಚ್ಚು ಅನುದಾನ ರೈಲ್ವೆಗೆ ಮೀಸಲಿರಿಸಲಾಗಿದೆ. 2 ಲಕ್ಷ 65 ಸಾವಿರ ಕೋಟಿ ರೂ. ಅನುದಾನದಲ್ಲಿ ದೇಶಾದ್ಯಂತ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇಂದು 141 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 5 ನವೀಕೃತ ನಿಲ್ದಾಣಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ನಮ್ಮ ಸರಕಾರ 10 ವರ್ಷದಲ್ಲಿ 7 ಲಕ್ಷ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ 44 ಸಾವಿರ ಕಿ.ಮೀ. ಹೊಸ ಹಳಿ ಅಳವಡಿಸಿದೆ. ಯುಪಿಎ ಸರಕಾರದ ಅವಯಲ್ಲಿ ಡಬ್ಲಿಂಗ್ ಹಳಿ ಅಳವಡಿಸಲು 11,500 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ನಮ್ಮ ಸರಕಾರದ ಅವಧಿಯಲ್ಲಿ 70 ಸಾವಿರ ಕೋಟಿ ರೂ. ವ್ಯಯಿಸಲಾಗಿದೆ. ಈ ಮೊದಲು ರಾಜಕೀಯ ಕಾರಣಕ್ಕಾಗಿ ರೈಲ್ವೆ ವಲಯ ಬಳಕೆಯಾಗುತ್ತಿತ್ತು. ನಮ್ಮ ಸರಕಾರ ವಿಕಸಿತ ಭಾರತದ ಧ್ಯೇಯ ಹೊಂದಿದೆ” ಎಂದು ಸಮರ್ಥಿಸಿಕೊಂಡರು.
ವರದಿ : ಜಿಲಾನಸಾಬ್ ಬಡಿಗೇರ್
