ಕೊಪ್ಪಳ / ಹುಲಿಗಿ : ತರಹೇವಾರಿ ಬಣ್ಣಗಳ ಹೂಗಳಿಂದ ದೇವಿಯ ಮೂರ್ತಿಯ ಝಗಮಗಿಸುವ ಅಲಂಕಾರ, ಕಣ್ಣು ಹಾಯಿಸಿದಷ್ಟೂ ದೂರ ಜನವೋ ಜನ, ಹಣೆಗೆ ಭಂಡಾರ ಹಚ್ಚಿಕೊಂಡು ಭಕ್ತಿಯಿಂದ ಕೈ ಮುಗಿದು ಮೊಳಗಿಸುತ್ತಿದ್ದ ಉಧೋ ಉಧೋ ಘೋಷಣೆ, ಇನ್ನೊಂದೆಡೆ ನಿರಂತರ ಮಳೆ, ಮಳೆಯ ನಡುವೆಯೂ ಜನರ ಸಂಭ್ರಮ…
ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿ. ಜಾತ್ರೆಯ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಬಂದಿದ್ದರು. ಇವರ ಸಮ್ಮುಖದಲ್ಲಿ ರಥೋತ್ಸವ ಸಂಭ್ರಮದಿಂದ ನೆರವೇರಿತು.
ದಿನಪೂರ್ತಿ ಕಾಡಿದ ಮಳೆಯಿಂದಾಗಿ ಹುಲಿಗಿಯ ದೇವಸ್ಥಾನ ಹಾಗೂ ಸುತ್ತಮುತ್ತಲಿನ ವಾತಾವರಣ ತಂಪುಮಯವಾಗಿತ್ತು. ಮಹಾದಾಸೋಹಕ್ಕಾಗಿ ಮೊದಲ ಬಾರಿಗೆ ಜರ್ಮನಿ ಟೆಂಟ್‌ನಲ್ಲಿ ಪ್ರಸಾದದ ವ್ಯವಸ್ಥೆ ಮಾಡಿದ್ದರಿಂದ ಜನರಿಗೆ ಊಟ ಮಾಡಲು ಮಳೆ ಸಮಸ್ಯೆಯಾಗಿ ಕಾಡಲಿಲ್ಲ. ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರವೇಶ ದ್ವಾರದಿಂದ ಆರಂಭವಾದ ರಥದ ಮೆರವಣಿಗೆ ಪಾದಗಟ್ಟಿ ತನಕ ಸಾಗಿತು. ಆಗ ಭಕ್ತರಿಂದ ಉದೋ ಉದೋ ಹುಲಿಗೆಮ್ಮ ಎನ್ನುವ ಘೋಷಣೆಗಳು ಮೊಳಗಿದವು. ರಥ ಪಾದಗಟ್ಟೆ ತಲುಪಿ ಸ್ವಸ್ಥಾನಕ್ಕೆ ಮರಳಿದಾಗ ಭಕ್ತರು ಚಪ್ಪಾಳೆ ಹೊಡೆದು ಖುಷಿ ವ್ಯಕ್ತಪಡಿಸಿದರು.
ಜೋಗತಿಯರ ಬಳಿ ಗಂಗಾಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ದೀಡ್ ನಮಸ್ಕಾರ ಹಾಕುತ್ತಾ ದೇವಿಯ ಸನ್ನಿಧಾನಕ್ಕೆ ಬಂದು ಭಕ್ತಿ ಸಮರ್ಪಿಸಿದರು.
ಮಳೆಯ ನಡುವೆಯೂ ಜೋಗತಿಯರು ತುಂಗಭದ್ರಾ ನದಿಯ ದಂಡೆಯಲ್ಲಿ ಗಂಗಾ ಪೂಜೆ ನೆರವೇರಿಸಿದರು. ಭಕ್ತರು ಜೋಳದ ರೊಟ್ಟಿ, ಚಪಾತಿ, ಅನ್ನ, ಕಡುಬು, ಹೋಳಿಗೆ ಹೀಗೆ ಅನೇಕ ತಿನಿಸು ಸಮರ್ಪಿಸಿದರು. ಹೀಗೆ ಭಕ್ತಿ ಸಮರ್ಪಿಸಿದ ಭಕ್ತರಿಗೆ ಜೋಗತಿಯರು ದೇವಿಯ ಹೆಸರಿನಲ್ಲಿ ಜೋಗ ಹಾಕಿ ಕುಟುಂಬದ ಶ್ರೇಯೋಭಿವೃದ್ದಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕುಂಕುಮ, ಭಂಡಾರ, ಹಸಿರು ಬಳಿ, ಕಾಯಿ, ಸೀರೆ, ಹೂ ಮಾರಾಟ ಜೋರಾಗಿತ್ತು.
ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್, ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶರಾವ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
