ಚಾಮರಾಜನಗರ/ ಹನೂರು: ಶಾಸಕ ಎಂ. ಆರ್. ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣದಲ್ಲಿ ಶನಿವಾರ ಜರುಗಿತು.
ವಿವಿಧ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು, ನರೇಗಾ ಮತ್ತು 15 ನೇ ಹಣಕಾಸು ಕಾಮಗಾರಿಗಳು ಪಾರದರ್ಶಕ ಹಾಗೂ ಗುಣಮಟ್ಟದಿಂದ ನಡೆಯದೇ ಇರುವ ಬಗ್ಗೆ 15 ನೇ ಹಣಕಾಸನ್ನು ಸದಸ್ಯರುಗಳು ಹಂಚಿಕೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಅದೇ ಅನುದಾನವನ್ನು ಯಾವುದಾದರೂ ಒಂದೊಳ್ಳೆಯ ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು ಸಲಹೆ ನೀಡಿದರು. ಸಮರ್ಪಕವಾಗಿ ಕಂದಾಯ ವಸೂಲು ಆಗದೇ ಇರುವುದರಿಂದ ಅಭಿವೃದ್ಧಿಗೆ ಕುಂಠಿತವಾಗುವುದರಿಂದ ಗ್ರಾ.ಪಂ. ಯವರು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು. ರಾಮಾಪುರ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೆ ತೊಂದರೆ ಉಂಟಾಗುವ ಮುನ್ನ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಳ್ಳಬೇಕು ಎಂದರು. ಪಶು ವೈದ್ಯಕೀಯ ತಾಲೂಕು ಇಲಾಖೆ ಅಧಿಕಾರಿ ಸಿದ್ದರಾಜು ಮೇವಿನ ಕೊರತೆ ಸದ್ಯ ಇಲ್ಲ ಎಂದು ತಿಳಿಸಿದರು. ಇದಕ್ಕೆ ಶಾಸಕರು ಉತ್ತಮ ಮಳೆಯಾದರೆ ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು. ಮಾನ್ಸೂನ್ ಪ್ರಾರಂಭವಾಗುವುದರಿಂದ ಮಳೆಯಾಗುವ ಹಿನ್ನಲೆಯಲ್ಲಿ ವಿದ್ಯುತ್ ಸೌಕರ್ಯಕ್ಕೆ ತೊಂದರೆಯಾಗಬಾರದು ಹಾಗೂ ವಿದ್ಯುತ್ ಅವಘಡಗಳು ಸಂಭವಿಸದಂತೆ ವಿದ್ಯುತ್ ತಂತಿಗಳ ಹತ್ತಿರದ ರೆಂಬೆ ಕೊಂಬೆಗಳನ್ನು ತೆರವು ಕಾರ್ಯ ಕೈಗೊಳ್ಳಲು ಸೆಸ್ಕ್ ಇಲಾಖೆಯವರು ಕ್ರಮ ವಹಿಸಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಪ್ರಕಾಶ್ ಮಾತನಾಡಿ, ಹನೂರು ಸಮುದಾಯ ಆಸ್ಪತ್ರೆ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ. ಒಡೆಯರ ಪಾಳ್ಯದಲ್ಲಿನ ಮೊಬೈಲ್ ಯೂನಿಟನ್ನು ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಹಾಗೂ ಪಿ. ಜಿ. ಪಾಳ್ಯ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿರುವ ಬಗ್ಗೆ ಮಾಹಿತಿ ನೀಡಿದರು.
ಒಳ್ಳೆಯ ಕೆಲಸ ಮಾಡಿ ಪುಣ್ಯಕಟ್ಟಿಕೊಳ್ಳಿ:
ಇಂದಿಗೂ ನಮ್ಮ ಸುತ್ತಮುತ್ತ ಅಸಹಾಯಕ, ಮುಗ್ಧ, ಬಡ ಜನತೆಯನ್ನು ಕಾಣಬಹುದು ಅಂತಹವರನ್ನು ನೋಡಿಯಾದರೂ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗುವ ಮೂಲಕ ಪುಣ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ಶಾಸಕ ಎಂ. ಆರ್. ಮಂಜುನಾಥ್ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯಲ್ಲಿ ನೀತಿ ಪಾಠ ಹೇಳಿದ ಪ್ರಸಂಗ ಜರುಗಿತು.
ಗ್ರಾ. ಪಂ. ಮನರೇಗಾ ಕಾಮಗಾರಿ ಹಾಗೂ 15 ನೇ ಹಣಕಾಸು ಬಳಕೆ ಸಂಬಂಧ ಚರ್ಚಿಸುವ ಸಂದರ್ಭದಲ್ಲಿ ಅತ್ಯಂತ ಮಾರ್ಮಿಕ ಮತ್ತು ಮೌಲ್ಯಯುತ ವಿಷಯಗಳನ್ನು ತಿಳಿಸಿದರು. ನಿಮ್ಮ ತಂದೆ ತಾಯಿಗಳು ನಿಮಗೆ ಒಂದು ಡಿಗ್ರಿ ಕೊಡಿಸಿ ಸರ್ಕಾರಿ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ. ನೀವು ಮುಂದೆ ಯಾವುದೇ ಡಿಗ್ರಿ ಮಾಡುವ ಅವಕಾಶವಿಲ್ಲ ಎಂಬುದು ನನ್ನ ಭಾವನೆ ನಿಮಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಗಮನಹರಿಸಿ. ನೀವು ಮಾಡಿದ ಪುಣ್ಯದ ಕೆಲಸ ನಿಮ್ಮ ಮಕ್ಕಳಿಗೆ ಲಭಿಸುತ್ತದೆ. ನಿಮಗೆ ತಿಳಿಯದೇ ಹೋದರೂ ಕೂಡಾ ನಿಮ್ಮ ಒಳ್ಳೆ ಮತ್ತು ಕೆಟ್ಟ ಕೆಲಸಗಳು ನಿಮ್ಮ ಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ತಿಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಪ್ರಸಾದ್, ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ಉಮೇಶ್, ಎ. ಡಿ ರಾಧಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಉಸ್ಮಾನ್ ಖಾನ್
