ರಾಯಚೂರು/ಸಿಂಧನೂರು :ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮಲ್ಲದಗುಡ್ಡ ಗ್ರಾಮದ ಸದಸ್ಯ ತ್ರಿನಾಥ್ ತಂದೆ ಸತ್ಯನಾರಾಯಣರ ಅಕಾಲಿಕ ಮರಣದಿಂದ ಖಾಲಿಯಾದ ಸ್ಥಾನಕ್ಕೆ ಮೇ 25 ರಂದು ಬೆಳಗ್ಗೆ 7:00 ಯಿಂದ ಆರಂಭವಾದ ಮತದಾನ ಸಂಜೆ 5:00ಗೆ ಶಾಂತಿಯುತವಾಗಿ ಮುಕ್ತಾಯವಾಯಿತು ಎಂದು ತಹಶೀಲ್ದಾರ್ ಕೆ. ಶೃತಿ ತಿಳಿಸಿದರು.
ಅವರು ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿರುಪಾಪುರ ಗ್ರಾಮ ಪಂಚಾಯತಿಯ ಮಲ್ಲದಗುಡ್ಡ ಗ್ರಾಮದ ಮತಗಟ್ಟೆಯಲ್ಲಿ 550-ಪುರುಷರು, 609-ಮಹಿಳಾ ಮತದಾರರು ಹಾಗೂ ಓರ್ವ ತೃತೀಯ ಲಿಂಗ ಮತದಾರ ಸೇರಿ ಒಟ್ಟು 1160 ಜನ ಮತದಾರರು ನೋಂದಣಿ ಮಾಡಿಕೊಂಡಿದ್ದರು.
ಈ ಪೈಕಿ ಇಂದು ನಡೆದ ಚುನಾವಣೆಯಲ್ಲಿ 232-ಪುರುಷರು,
247-ಮಹಿಳಾ ಮತದಾರರು ಮತದಾರ ಸೇರಿ ಒಟ್ಟು 479 ಜನ ಮತದಾರರು ಮತ ಚಲಾಯಿಸುವ ಮೂಲಕ ಶೇ. 41.29ರಷ್ಟು ಮತಗಳನ್ನು ದಾಖಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ವೀರೇಶ ಗೋನವಾರ ತಿಳಿಸಿದರು.
ಭೇಟಿ: ಉಪ ಚುನಾವಣೆ ನಡೆಯುತ್ತಿರುವ ಗ್ರಾಮದ ಮತಗಟ್ಟೆಗೆ ತಾಲೂಕ ದಂಡಾಧಿಕಾರಿಗಳು ಹಾಗೂ ತಹಸೀಲ್ದಾರರಾದ ಕೆ.ಶೃತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಭೇಟಿ ನೀಡಿದರು.
ಬಂದೋಬಸ್ತ್: ಬೆಳಗಿನಿಂದ ಆರಂಭವಾದ ಚುನಾವಣೆಗೆ ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಪೊಲೀಸ್ ಬಂದೋಬಸ್ತ್ ಅನ್ನು ನೀಡಲಾಗಿತ್ತು.
ಭದ್ರತೆ: ಚಲಾವಣೆಗೊಂಡ ಮತಗಳ ಮತಪಟ್ಟಿಗೆಯನ್ನು ನಗರದ ಉಪಖಜನಾಧಿಕಾರಿಗಳ ಕಚೇರಿಯಲ್ಲಿರುವ ಸ್ಟ್ರಾಂಗ್ ರೂಮ್ ನಲ್ಲಿ ತಹಶೀಲ್ದಾರರು, ಖಜಾನೆಯ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಪೊಲೀಸ್ ಇಲಾಖೆಯ ಹಾಗೂ ಅಭ್ಯರ್ಥಿಗಳ ಸಮಕ್ಷಮದಲ್ಲಿ ಡಿಪಾಸಿಟ್ ಮಾಡಲಾಯಿತು.
ಮತ ಎಣಿಕೆ: ಇಂದು ನಡೆದ ಚುನಾವಣೆಗೆ ಮೇ – 28ರಂದು ಬುಧವಾರ ಬೆಳಗ್ಗೆ 8:00 ಯಿಂದ ನಗರದ ತಹಸೀಲ್ದಾರರ ಕಾರ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ರಾಮದಾಸ ತಿಳಿಸಿದರು.
- ಕರುನಾಡ ಕಂದ
