ಬಳ್ಳಾರಿ / ಕಂಪ್ಲಿ : ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ 178ನೇ ಮಹಾಮನೆ ಕಾರ್ಯಕ್ರಮ ನಡೆಯಿತು.
ಹೊಸಯಲ್ಲಾಪುರದ ಪುರಾಣ ಪ್ರವಚಕ ಬಿ. ಬಾಬು ‘ಶರಣರ ದೃಷ್ಟಿಯಲ್ಲಿ ಕಾಯಕ’ ಕುರಿತು ಉಪನ್ಯಾಸ ನೀಡಿ, ಶರಣರ ದೃಷ್ಟಿಯಲ್ಲಿ ಭಕ್ತಿ, ಜ್ಞಾನ, ವೈರಾಗ್ಯಗಳು ಎಷ್ಟು ಮುಖ್ಯವೋ ದಿನನಿತ್ಯದ ನಿರ್ವಹಣೆಗಾಗಿ ಕಾಯಕವು ಅಷ್ಟೇ ಮುಖ್ಯ ‘ಬಸವಣ್ಣನವರು ನೀಡಿರುವ ಕಾಯಕ ತತ್ವ ಇಡೀ ಜಗತ್ತಿಗೆ ಆದರ್ಶ. ಪ್ರತಿಯೊಬ್ಬ ವ್ಯಕ್ತಿಯೂ ಕಾಯಕ ಮಾಡಬೇಕು, ಶರಣರ ಸಮಾಜದಲ್ಲಿ ಸೋಮಾರಿಗಳಿಗೆ ಸ್ಥಾನವೇ ಇರಲಿಲ್ಲ. ಸತ್ಯ, ಶುದ್ಧವಾದ ದುಡಿಮೆಯ ಶ್ರಮ ಸಂಸ್ಕೃತಿಯೇ ಶರಣರ ಆದರ್ಶವಾಗಿತ್ತು. ದುಡಿಯುವವರೇ ಬೇರೆ, ಅವರ ದುಡಿತದ ಫಲವನ್ನು ಅನುಭವಿಸುವವರೇ ಬೇರೆಯಾಗಿದ್ದ ಕಾಲದಲ್ಲಿ ಬೆವರು ಸುರಿಸಿ ದುಡಿಯುವವರೇ ನಿಜವಾದ ಶರಣರು ವ್ಯಾಖ್ಯಾನಿಸುವ ಮೂಲಕ ದುಡಿದು ಉಣ್ಣುವುದನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಕಾಯಕ ಕಡ್ಡಾಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ’ ಎಂದರು.
ಕಾಯಕದಿಂದ ಬಂದ ಪ್ರತಿಫಲವನ್ನು ದಾಸೋಹ ಮಾಡಬೇಕು. ದಾಸೋಹದ ಸಮಯದಲ್ಲಿ ಎಲ್ಲರೂ ಸಮಾನವಾಗಿ ಕುಳಿತು ಸಹಭೋಜನ ಮಾಡಿದ್ದರಿಂದ ಸಮಾನತೆಯನ್ನು ಸಾಧಿಸಲು ಸಾಧ್ಯವಾಯಿತು. ಬಸವಣ್ಣ ಈ ಆಧುನಿಕ ಯುಗಕ್ಕೆ ಬೇಕಾದ ಶಸ್ತ್ರಚಿಕಿತ್ಸಕ ವೈದ್ಯ. ಇಂದಿನ ಸಮಾಜದಲ್ಲಿರುವ ಭಯೋತ್ಪಾದನೆ, ಜಾತೀಯತೆ, ಅಸ್ಪೃಶ್ಯತೆ, ಭ್ರಷ್ಟಾಚಾರ, ಹಿಂಸಾಚಾರ ಹಾಗೂ ದಬ್ಬಾಳಿಕೆ ಎಂಬ ರೋಗವನ್ನು ಹೊಡೆದೊಡಿಸಲು ‘ಬಸವತತ್ವ’ ಎಂಬ ಔಷಧವನ್ನು ನೀಡಬೇಕು’ ಎಂದು ಹೇಳಿದರು.
ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಶಿಕ್ಷಕರಾದ ಎಚ್ ಮಲ್ಲೇಶ, ಅಶೋಕ್ ಕುಕನೂರು ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಎಸ್.ಡಿ.ಬಸವರಾಜ, ಬಿ.ಎಂ.ರುದ್ರಯ್ಯ, ಪಾಮಯ್ಯ ಶರಣರು, ಚಂದ್ರಯ್ಯ ಸೊಪ್ಪಿಮಠ, ಎಸ್.ರಾಮಪ್ಪ, ಕೆ.ಯಂಕಾರೆಡ್ಡಿ, H. ನಾಗರಾಜ, ಬಡಿಗೇರ್ ಜಿಲಾನಸಾಬ್, H ಪಂಪಾಪತಿ, ಹುಲುಗಪ್ಪ, ಬಸವರಾಜ, ಪಾಂಡುರಂಗಪ್ಪ, ಬೆಳಗೋಡ ಶರಣಪ್ಪ, ಚನ್ನಪ್ಪ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
