ಅಹಮದಾಬಾದ್: ಕ್ರೀಡಾ ಜಗತ್ತಿಗೆ ನಿಷ್ಠೆ, ತಾಳ್ಮೆ ಮತ್ತು ಬದ್ಧತೆಯ ಪಾಠ ಮಾಡಿರುವ ಕನ್ನಡಿಗರ ಮನೆಮಗ ವಿರಾಟ್ ಕೊಹ್ಲಿ, ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಈ ಸುದೀರ್ಘ ವರ್ಷದಲ್ಲಿ ಅವರು ಎದುರಿಸಿದ ಟೀಕೆಗಳು, ಅಭಿಮಾನಿಗಳಿಂದ ಸ್ವೀಕರಿಸಿದ ಪ್ರೀತಿ ಯಾವುದಕ್ಕೂ ಲೆಕ್ಕವಿಲ್ಲ. ಹಾಗೆಯೇ ವಿರಾಟ್ ಕೊಹ್ಲಿ ಕೂಡಾ ಆರ್‌ಸಿಬಿ ಮೇಲಿಟ್ಟಿರುವ ಪ್ರೀತಿಗೆ ಸರಿಸಾಟಿ ಇಲ್ಲ.
ಇದಕ್ಕೆ ಸಾಕ್ಷಿ ಎಂಬಂತೆ ಐಪಿಎಲ್ 2025 ಫೈನಲ್ ಪಂದ್ಯದ ಬಳಿಕ ಚುಟುಕು ಸಂದರ್ಶನ ನೀಡಿರುವ ವಿರಾಟ್ ಕೊಹ್ಲಿ, ನನ್ನ ಹೃದಯ ಬೆಂಗಳೂರಿನಲ್ಲಿದೆ, ನನ್ನ ಆತ್ಮ ಬೆಂಗಳೂರಿನಲ್ಲಿದೆ, ನಾನು ಆರ್‌ಸಿಬಿಗಾಗಿ, ಆರ್‌ಸಿಬಿ ನನಗಾಗಿ” ಎಂದು ಭಾವುಕರಾಗಿ ಹೇಳಿದ್ದಾರೆ.
ಹೌದು, 2025ರ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಆರು ರನ್‌ಗಳಿಂದ ಸೋಲಿಸಿದಾಗ, ವಿರಾಟ್ ಕೊಹ್ಲಿ ಅವರಿಗೆ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಳೆದ 18 ವರ್ಷಗಳಿಂದ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಆಡುತ್ತಿದ್ದು, ಕೊನೆಗೂ ತಂಡಕ್ಕೆ ಐಪಿಎಲ್ ಟ್ರೋಫಿ ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಆರ್‌ಸಿಬಿ ತಂಡಕ್ಕೆ ಕೊಡುಗೆ ನೀಡಿದ ಮಾಜಿ ಆಟಗಾರರನ್ನು ಸ್ಮರಿಸಿದ ವಿರಾಟ್ ಕೊಹ್ಲಿ, “ಎಬಿಡಿ, ಕ್ರಿಸ್ ಗೇಲ್ ಅವರಂತಹ ಆಟಗಾರರು ಈ ತಂಡವನ್ನು ಕಟ್ಟಿ ಬೆಳೆಸಿದ್ದಾರೆ. ಈ ಗೆಲುವು ಮಾಜಿ ಆಟಗಾರರದ್ದೂ ಹೌದು. ನಾನು ಅವರೊಂದಿಗೂ ಈ ಅವಿಸ್ಮರಣೀಯ ಗೆಲುವನ್ನು ಸಂಭ್ರಮಿಸಲು ಬಯಸುತ್ತೇನೆ” ಎಂದು ಸ್ಟಾರ್ ಬ್ಯಾಟರ್ ನುಡಿದರು.
ಒಟ್ಟಿನಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ತಂಡ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದು, ಈ ಐತಿಹಾಸಿಕ ಕ್ಷಣವನ್ನು ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಈ ಸಂಭ್ರಮಾಚರಣೆಯ ಕೇಂದ್ರಬಿಂದು ಎಂಬುದು ಅತಿಶೋಕ್ತಿಯಲ್ಲ.
ವರದಿ : ಜಿಲಾನಸಾಬ್ ಬಡಿಗೇರ್
