ಬಳ್ಳಾರಿ / ಕಂಪ್ಲಿ : ಕೃಷಿಯನ್ನು ನಂಬಿ ಬದುಕು
ಅದರಲೇ ದೇವರ ಹುಡುಕು
ಬಾಳಲಿ ಬರುವುದು ಬೆಳಕು,
ನಮ್ಮ ಬಾಳಲಿ ಬರುವುದು ಬೆಳಕು ಎನ್ನುವಂತೆ ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರ ನದಿಗೆ ನೀರು ಹರಿದು ಬರುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಮಾಗಿ ಹುಳಿಮೆಯ ನಂತರ ರೈತರು ಪೂರಕವಾಗಿ ಕೊಟ್ಟಿಗೆ ಗೊಬ್ಬರ ಬೆರೆಸಿ ಭೂಮಿಯನ್ನು ಬಿತ್ತನೆಗೆ ಹದ ಮಾಡಿದ್ದರು. ಈಗ ಬಿದ್ದಿರುವ ಮಳೆ, ತೊಗರಿ, ಹತ್ತಿ, ಸಜ್ಜೆ, ನವಣೆ ಮತ್ತು ಸೂರ್ಯಕಾಂತಿ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮನೆಗಳ ಮೂಲೆ ಸೇರಿದ್ದ ಕೃಷಿ ಪರಿಕರಗಳು ಹೊರ ಬಂದಿವೆ. ರೈತರು ಭೂಮಿಯಲ್ಲಿ ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಹದಮಳೆಯಾಗಿರುವುದರಿಂದ ಮಳೆಯಾಶ್ರಿತ ಭೂಮಿಗಳನ್ನು ರೈತರು ಸ್ವಚ್ಛಗೊಳಿಸಿ ಬೀಜ ಬಿತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೀರಾವರಿ ಜಮೀನು ಹೊಂದಿದ ರೈತರು ಭೂಮಿಯಲ್ಲಿ ಬೆಳೆದ ಗಿಡಗಂಟೆಗಳನ್ನು ಸ್ವಚ್ಛಗೊಳಿಸುವ, ಕೊಟ್ಟಿಗೆಗೊಬ್ಬರ ಬೆರಸುವುದು ಸೇರಿದಂತೆ ಭತ್ತ ನಾಟಿ ಕೃಷಿಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ರೈತರು ಭತ್ತ ಬೆಳೆಯುತ್ತಾರೆ.
ವರದಿ : ಜಿಲಾನಸಾಬ್ ಬಡಿಗೇರ್



















