ಬಳ್ಳಾರಿ / ಕಂಪ್ಲಿ : ಆಧುನಿಕ ಜೀವನ ಶೈಲಿಂದಾಗಿ ನೈತಿಕತೆ ಕಣ್ಮರೆಯಾಗುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಸುನಿಲ್ ಮಾಲಿ ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅನುಭವ ಮಂಟಪದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ 179ನೇ ಮಹಾಮನೆ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ನೈತಿಕತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು ಮನೆಯಲ್ಲಿ ನೈತಿಕತೆ ಸಂಸ್ಕಾರ ಆಚಾರ ವಿಚಾರ ಸಂಸ್ಕೃತಿ ಕಲಿಯದ ಮಕ್ಕಳನ್ನು ಹೆದರಿಸಲು ತಂದೆ, ತಾಯಿ, ಪೋಷಕರು ಹಾಗೂ ಶಾಲೆ ಶಿಕ್ಷಕರು ಆಯುಧದಂತಾಗಿರುವುದು ವಿಪರ್ಯಾಸ. ಪ್ರಸ್ತುತ ದಿನಮಾನಗಳಲ್ಲಿ ಭಕ್ತಿ ಎಂಬುದು ಬಂಡವಾಳದ ವ್ಯವಹಾರವಾಗಿದೆ ಜಗತ್ತಿನಲ್ಲಿ ದಯೆ ದೂರವಾಗಿ ಮಾನವೀಯತೆ ಕುಂಠಿತಗೊಂಡಿದೆ ಇದರಿಂದಾಗಿ ಯುದ್ಧಗಳು ನಡೆಯುತ್ತಿವೆ ಎಂದು ತಿಳಿಸಿದರು.
ಸಂಗಾತ್ರಯ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯ ಘನಮಠದಯ್ಯ ಹಿರೇಮಠ್ ಮಾತನಾಡಿ ತಂದೆ, ತಾಯಿ, ಗುರು, ಹಿರಿಯರ ಮಾತನ್ನು ಪಾಲಿಸಿದರೆ ಮಾತ್ರ ಸಂಸ್ಕಾರವಂತನಾಗಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಪರಿಷತ್ ನ ತಾಲೂಕು ಅಧ್ಯಕ್ಷ ಜಿ. ಪ್ರಕಾಶ ಮಾತನಾಡಿ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಉಪನ್ಯಾಸ ಕಾರ್ಯಕ್ರಮವನ್ನು ತಮ್ಮ ಮನೆಗಳಲ್ಲಿ ಯಾರಾದರೂ ಆಸಕ್ತಿ ವಹಿಸಿದರೆ ಅಲ್ಲಿ ಬಂದು ಉಪನ್ಯಾಸವನ್ನು ಏರ್ಪಡಿಸಿ ಶರಣರ ವಚನಗಳ ಹಾಗೂ ವಚನಕಾರ್ತಿಯರ ಬಗ್ಗೆ ತಿಳಿಸಿ ಕೊಡಲಾಗುವುದು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷ ಮುಕುಂದ ಶಿವಗಂಗಮ್ಮ, ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ಕೆ. ವಿಷ್ಣು ವೇದಿಕೆ ಮೇಲಿದ್ದು ಮಾತನಾಡಿದರು,
ಈ ಸಂದರ್ಭದಲ್ಲಿ ಶರಣರಾದ ಅಶೋಕ ಕುಕುನೂರು, ಎಚ್ ನಾಗರಾಜ, ಬಿ.ಎಂ. ರುದ್ರಯ್ಯ, ಎಸ್. ಶಾಮಸುಂದರಾವ, ಬಿ.ಎಂ. ಪುಷ್ಪ, ಕಲ್ಗುಡಿ ನಾಗರತ್ನ, ಸಂತೋಷ್ ಕೊಟ್ರಪ್ಪ ಸೋಗಿ, ಮಡಿವಾಳರ ಹುಲಗಪ್ಪ, ಬಡಿಗೇರ್ ಜಿಲಾನಸಾಬ್, ಸಜ್ಜೆದ ವೀರಭದ್ರಪ್ಪ, ಕೆ. ಯಂಕಾರೆಡ್ಡಿ, ಉಗಾದಿ ಬಸವರಾಜ, ಚಂದ್ರಯ ಸೊಪ್ಪಿನ ಮಠ, ಸಂಗಮೇಶ್ ಕಂದಕೂರು ಸೇರಿದಂತೆ ಪಾಠಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಡಾಕ್ಟರ್ ಕೆ. ಸುನಿಲ್ ವಂದಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















