ಕೊಪ್ಪಳ/ ಗಂಗಾವತಿ : ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಣೆ ಮಾಡಿದ್ದಕ್ಕೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಚೇತನ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಣೆಗೆ ಸಂಬಂಧಿಸಿದಂತೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಚ್. ಸತ್ಯಪ್ಪ ಮತ್ತು ಗಂಗಾವತಿ ಉಪವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಿ. ವಿಜಯಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಕಾರ್ಯಾದೇಶದ ಅನ್ವಯ ಒಟ್ಟು 90 ಸಾಮಗ್ರಿಗಳನ್ನು ಕಾಲೇಜಿಗೆ ಪೂರೈಸಬೇಕಿತ್ತು. ಆದರೆ, ಕೇವಲ 82 ಸಾಮಗ್ರಿಗಳನ್ನು ಮಾತ್ರ ನೀಡಲಾಗಿದೆ. ಪ್ರಯೋಗಾಲಯಗಳಿಗೆ ಒದಗಿಸಿದ 47 ಯಂತ್ರೋಪಕರಣಗಳಲ್ಲಿ 18 ಉಪಕರಣಗಳಲ್ಲಿ ನ್ಯೂನ್ಯತೆಗಳು ಕಂಡುಬಂದಿವೆ. ನಿಯಮಗಳಿಗೆ ಅನುಗುಣವಾಗಿ ಅವುಗಳನ್ನು ಅಳವಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಂಜಿನಿಯರಿಂಗ್ ಕಾಲೇಜ್ ಪ್ರಯೋಗಾಲಯದ ಉಪಕರಣಗಳು, ಡಿಜಿಟಲ್ ಗ್ರಂಥಾಲಯ, ವಾಚನಾಲಯಕ್ಕೆ ಪೀಠೋಪಕರಣಗಳು, ಐದು ಕಂಪ್ಯೂಟರ್ಗಳು, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಇತರ ಕಾಮಗಾರಿಗಳನ್ನು ಇಲಾಖೆ ವತಿಯಿಂದ ಮಾಡಲಾಗಿತ್ತು. ಈ ಎಲ್ಲಾ ಕಾಮಗಾರಿಗಳನ್ನು ₹68.40 ಲಕ್ಷ ವೆಚ್ಚದಲ್ಲಿ ನಿರ್ವಹಿಸಲು ಅನುಮೋದನೆ ನೀಡಲಾಗಿತ್ತು. ಇವುಗಳಲ್ಲಿ ಲೋಪದ ಜತೆಗೆ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು
ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಒಳಪಡಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಚೇತನ ಆದೇಶದಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















