
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ನಾಗರಿಕರ ಸಹಕಾರ ಅವಶ್ಯ – ವ್ಯಸನ ಮುಕ್ತ ಯುವ ಪೀಳಿಗೆ ಸಶಕ್ತರಾಗಲು ದೊಡ್ಡಮನಿ ಕರೆ
ಯಾದಗಿರಿ/ ಗುರುಮಠಕಲ್ : ಅಹಿತಕರ ಘಟನೆಗಳು ನಡೆಯದಂತೆ ಮೊಹರಂ ಹಬ್ಬವನ್ನು ಆಚರಿಸಬೇಕು ಎಂದು ಪಿಐ ವೀರಣ್ಣ ದೊಡ್ಡಮನಿ ಸಲಹೆ ನೀಡಿದ ನಂತರ ಕಳೆದ ಬಾರಿ ಶಾಂತಿ ಸುವ್ಯವಸ್ಥೆ ಕಾಪಾಡದ ಮೂರು ಗ್ರಾಮಗಳಲ್ಲಿ ಈ ಬಾರಿ ಮೊಹರಂ ನಿಷೇಧ ಹೇರಲು ಚಿಂತನೆ ನಡೆದಿದೆ ಎಂದು ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಶಾಂತಿ ಸಭೆ ಹಾಗೂ ಅಂತರ್ ರಾಷ್ಟ್ರೀಯ ಮಾದಕ ವ್ಯಸನ ನಿವಾರಣಾ ದಿನದ ಅಂಗವಾಗಿ ಅವರು ಮಾತನಾಡಿ ನಮ್ಮ ದೇಶದಲ್ಲಿ ಹಬ್ಬಗಳು ಭಾವೈಕ್ಯತೆಯ ಸಂಕೇತವಾಗಿವೆ. ಈ ಹಬ್ಬವನ್ನು ಸರ್ವಧರ್ಮೀಯರು ಸಮಸ್ಯೆಯಾಗದಂತೆ ಹಳೆಯ ವೈಷಮ್ಯಗಳನ್ನು ಹಬ್ಬದ ನೆಪದಲ್ಲಿ ಕಲಹಕ್ಕೆ ಕಾರಣವಾಗದಂತೆ ಆಚರಿಸಬೇಕು. ಹಬ್ಬಗಳು ಜೀವನದಲ್ಲಿ ಖುಷಿ ಮೂಡಿಸುವಂತಾಗಬೇಕು ವಿನಃ ವಿಕೋಪಕ್ಕೆ ದಾರಿ ಮಾಡಬಾರದು ಎಂದು ಹೇಳಿದರು.
ಅಂತರರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನ ಹಾಗೂ ಮುಂಬರುವ ಮೊಹರಂ ಹಬ್ಬದ ಕುರಿತು ಇಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಭೆ ಕರೆಯಲಾಗಿತ್ತು.
ಮಾದಕ ವ್ಯಸನದಿಂದ ಯುವ ಪೀಳಿಗೆ ತನ್ನ ಸ್ವಾಸ್ಥ್ಯವನ್ನು ಹಾಳು ಮಾಡುಕೊಳ್ಳುತ್ತಿದೆ, ದುಷ್ಪರಿಣಾಮಗಳ ಬಗ್ಗೆ ಯುವಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗಾಂಜಾ ಬೆಳೆಯುತ್ತಿರುವ ಮಾಹಿತಿ ಇದೆ ಹಂತ ಹಂತವಾಗಿ ದಾಳಿ ಮಾಡಲಾಗುವುದು ಪ್ರಯುಕ್ತ ಸಾರ್ವಜನಿಕರು ಇಲಾಖೆಗೆ ಮಾಹಿತಿ ತಿಳಿದಿದ್ದಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.
ಇದೇ ಸಂಧರ್ಭದಲ್ಲಿ ಆರೋಗ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಮೈತ್ರಿ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಮಾದಕ ವಸ್ತುಗಳ ಅಪಾಯಗಳ ಬಗ್ಗೆ ತಿಳಿವಳಿಕೆ ನೀಡಬೇಕು. ಅವರಲ್ಲಿ ಮಾನಸಿಕ ಸ್ಥೆರ್ಯ ಮತ್ತು ಒತ್ತಡ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಬೇಕು. ಆಲ್ಕೋಹಾಲ್, ಕೆಫೀನ್, ಗಾಂಜಾ, ಓಪಿಯಾಯ್ಡ್‌ಗಳು, ತಂಬಾಕು, ಇನ್ಹಲೇಂಟ್‌ಗಳು, ಭ್ರಮೆಕಾರಕಗಳು, ಓವರ್ ದಿ ಕೌಂಟರ್ ಡ್ರಗ್‌ಗಳು, ಕೋರೆಕ್ಸ ಮುಂತಾದ ಹಾನಿಕಾರಕ ಮಾದಕ ವಸ್ತುಗಳ ಬಳಕೆ ನಿಲ್ಲಿಸಬೇಕು. ವ್ಯಸನಕ್ಕೆ ಬಲಿಯಾದವರನ್ನು ತಿರಸ್ಕರಿಸುವ ಬದಲು ಅವರಿಗೆ ಬೆಂಬಲ ನೀಡಿ ಚಿಕಿತ್ಸೆ ಪಡೆಯಲು ಸಹಾಯವಾಗಬೇಕು. ಯುವಕರು ಕ್ರೀಡೆ, ಕಲೆ, ಸಂಗೀತದಂತಹ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಕೆಟ್ಟ ಹವ್ಯಾಸಗಳಿಂದ ದೂರವಿಡಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ನಿರೂಪಣೆ ಮಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದ ನರೇಂದ್ರ ರೆಡ್ಡಿ ಅವರು ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡಲು ಸಾರ್ವಜನಿಕರು ಸಹ ಒಟ್ಟಾಗಿ ಸೇರಿ ಈ ಪಿಡುಗಿನ ವಿರುದ್ದ ಕೈ ಜೋಡಿಸಬೇಕು, ಕುಡಿದು ವಾಹನ ಚಾಲನೆ ಮಾಡಿ ಆಗುವ ಅನಾಹುತಗಳಿಂದ ಬಲಿಯಾಗಬೇಡಿ ಎಂದು ಹೇಳಿದರು.
ಈ ವೇಳೆ ಊರಿನ ಪ್ರಮುಖರಾದ ಅಕ್ಬರ್, ಆಶಣ್ಣ ಬುದ್ಧ, ಜಗದೀಶ್ ಮೆಂಗಜಿ, ಭೀಮಶಪ್ಪ ಗುಡ್ಸೆ, ಬಾಬಾ ಮೊಹರಂ ಹಬ್ಬ ಹಾಗೂ ಮಾದಕ ವ್ಯಸನ ನಿರ್ಮೂಲನೆ ಕುರಿತಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ ಪಾಂಡುರಂಗ ಮೇಧಾ, ಪುರಸಭೆ ಸದಸ್ಯ ನವಾಜರೆಡ್ಡಿ ಪೋ. ಪಾಟೀಲ್, ಮುಖಂಡರುಗಳಾದ ಸಾಯಬಣ್ಣ ಅಜಲಾಪುರ, ಶಿವಾಜಿ ಬಡಿಗೇರ್, ಸಾಬಲಪ್ಪ ತಲಾರಿ, ಬಾನುಪ್ರಕಾಶ್ ಮೇಧಾ, ಲಾಲಪ್ಪ ತಲಾರಿ, ಅಶೋಕ, ಹಣಮಂತು ಶನಿವಾರಂ, ನರಸಪ್ಪ ಬೋಯ, ಲಕ್ಷ್ಮಪ್ಪ ಲಿಕ್ಕಿ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಚಂದ್ರ ರೆಡ್ಡಿ, ಶಿವರಾಮರೆಡ್ಡಿ, ರಾಜು ಕಲಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















