ಹನೂರು: ನೀರಾವರಿ ಇಲಾಖೆ ಅಧಿಕಾರಿಗಳ ಅವೈಜ್ಞಾನಿಕ ಯೋಜನೆ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ರಾಮನ ಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಕುಂಠಿತವಾಗಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಮಂಗಲ ಸಮೀಪ ರಾಮನಗುಡ್ಡೆ ಕೆರೆಗೆ ನೀರು ತುಂಬಿಸುವ ಯೋಜನೆ ಸಂಬಂಧ ಮತ್ತು ಕೆರೆ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕರೆದಿದ್ದ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹನೂರು ಕ್ಷೇತ್ರದಾದ್ಯಂತ ನೀರಾವರಿ ಯೋಜನೆ ಅಭಿವೃದ್ಧಿಗಾಗಿ ಸರ್ಕಾರ 52 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಆ ಪೈಕಿ ರಾಮನಗುಡ್ಡ ಕೆರೆ ಅಭಿವೃದ್ಧಿಗೆ 14.35 ಕೋಟಿ ರೂ. ಹಣವನ್ನು ನೀಡಿದ್ದೇನೆ.
ಉಳಿದ ಅನುದಾನವನ್ನು ಕ್ಷೇತ್ರದ ಉಬ್ಬೇಹುಣಸೆ ಡ್ಯಾಂ ಸೇರಿದಂತೆ ಇನ್ನಿತರೆ ಕೆರೆಗಳ ಅಭಿವೃದ್ಧಿಗೆ ಬಳಸಲಾಗುವುದು. ಇನ್ನೂ ಒಂದು ತಿಂಗಳೊಳಗೆ ಟೆಂಡರ್ ಕರೆದು ಕೆಲಸ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದಲ್ಲಿ ರಸ್ತೆ, ವಿದ್ಯುತ್ ಮತ್ತು ನೀರು ಸುಧಾರಣೆಯಾದರೆ ರೈತರ ಬದುಕು ಸುಧಾರಣೆಯಾಗುತ್ತದೆ. ಆ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ಜನತೆಯ ಸೇವೆ ಮಾಡಲು ನನಗೆ ನೀಡಿರುವ ಅವಕಾಶಕ್ಕಾಗಿ ನನ್ನ ಶಕ್ತಿ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಇಂಜಿನಿಯರ್ ಗಳು ಪ್ರಾಮಾಣಿಕವಾಗಿ ಹಾಗೂ ಕಾಳಜಿಯಿಟ್ಟು ಕೆಲಸ ನಿರ್ವಹಿಸಿದರೆ ಆದಷ್ಟು ಬೇಗ ಕೆರೆಗೆ ನೀರು ತುಂಬಿಸಬಹುದು ಎಂದು ಸಭೆಯಲ್ಲಿದ್ದ ನೀರಾವರಿ ಇಲಾಖೆ ಇಂಜಿನಿಯರ್ ಕರುಣಾಮಯಿ ಅವರಿಗೆ ತಾಕೀತು ಮಾಡಿದರು.
ರೈತ ಮುಖಂಡ ಕೆಂಚಪ್ಪ ಮಾತನಾಡಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಈ ಯೋಜನೆ ಬಗ್ಗೆ ಕಾಳಜಿ ಇಲ್ಲ. ಕೆರೆ ಬಗ್ಗೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು. ಕೆರೆ ಅಭಿವೃದ್ಧಿ ಮತ್ತು ನೀರು ತುಂಬಿಸುವ ಯೋಜನೆ ಬಗ್ಗೆ ಮಾಹಿತಿ ನೀಡಿ ಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಧನರಾಜು, ಗುರುಮಲ್ಲಪ್ಪ, ಚಂಗಡಿ ಕರಿಯಪ್ಪ ಮಹದೇವಪ್ಪ ಮನಿಗಾರ ಪ್ರಸಾದ್. ವೆಂಕಟೇಗೌಡ ಜೆಸ್ಸಿಮ್ ಪಾಷಾ ನೀರಾವರಿ ಇಲಾಖೆ ಎಇಇ ಕರುಣಾಮಯಿ ಹಾಗೂ ಸುತ್ತಮುತ್ತಲ ಗ್ರಾಮದ ಸಾರ್ವಜನಿಕರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್



















