ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೆನರಾ ಬ್ಯಾಂಕ್ ಗೆ 120ನೇ ಜನ್ಮದಿನದ ಸಂಭ್ರಮ

ಬ್ಯಾಂಕಿಂಗ್ ಧ್ರುವತಾರೆ ಮತ್ತು ಯುಗಪುರುಷ ಶ್ರೀ ಅಮ್ಮೆಂಬಳ್ ಸುಬ್ಬರಾವ್ ಪೈ ರವರು ಕೆನರಾ ಬ್ಯಾಂಕ್ ನ ಸಂಸ್ಥಾಪಕರು.

20 ನೇ ಶತಮಾನದ ಆದಿಯಲ್ಲಿ ಮಂಗಳೂರು ಪ್ರಾಂತ್ಯದಲ್ಲಿ ಹಣಕಾಸು ವ್ಯವಹರಿಸಲು ಈಗ ಇರುವಂತೆ ಯಾವುದೇ ಸೂಕ್ತ ಬ್ಯಾಂಕಿಂಗ್ ವ್ಯವಸ್ಥೆಗಳಿರಲಿಲ್ಲ. ಇದ್ದ ಬೆರಳಣಿಕೆ ಹಣಕಾಸಿನ ಸಂಸ್ಥೆಗಳಲ್ಲಿ ಜನ ಸಾಮಾನ್ಯರು ವ್ಯವಹರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರ ಜೊತೆಗೆ ಅರ್ಬುತ್ನೋಟ್ ಹಣಕಾಸು ಸಂಸ್ಥೆಯ ದಿವಾಳಿಯಿಂದಾಗಿ ಅನೇಕ ಕುಟುಂಬಗಳು ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡಿದ್ದವು. ಅಂದಿನ ಬ್ಯಾಂಕ್ ಗಳು ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸುತ್ತಿದ್ದವು ಮತ್ತು ಅತ್ಯಂತ ಕೆಳ ದರ್ಜೆಯ ನೌಕರಿಯನ್ನು ಮಾತ್ರ ಭಾರತೀಯರಿಗೆ ನೀಡಲಾಗುತ್ತಿತ್ತು. ಜನಸಾಮಾನ್ಯರು ತಮ್ಮ ಮಕ್ಕಳ ಭವಿಷ್ಯಕ್ಕೆ ಹಣದ ಉಳಿತಾಯ ಮಾಡಲು ನಗರ ಪ್ರದೇಶದಲ್ಲಿದ್ದ ಪಟ್ಟಣಶೆಟ್ಟಿ ಎಂಬ ಶ್ರೀಮಂತ ವರ್ಗದವರನ್ನು ಆಶ್ರಯಿಸಬೇಕಿತ್ತು. ಈ ವ್ಯವಸ್ಥೆಯಡಿ ಮಗುವು ಜನಿಸಿದಾಕ್ಷಣ ಅದರ ಹೆಸರಿನಲ್ಲಿ ಸ್ವಲ್ಪ ಹಣವನ್ನು ಈ ವ್ಯಕ್ತಿಗಳ ಬಳಿ ತೊಡಗಿಸಿ, 18 ವರ್ಷದ ನಂತರ ಈ ಹಣವನ್ನು ಹಿಂತೆಗೆದುಕೊಳ್ಳುವ ಪದ್ದತಿ ಇತ್ತು. ಈ ರೀತಿ ತೊಡಗಿಸಿದ ಹಣಕ್ಕೆ ಯಾವುದೇ ಸ್ವೀಕೃತಿ ಪತ್ರವಾಗಲೀ ಅಥವಾ ಬಡ್ಡಿಯಾಗಲೀ ದೊರೆಯುತ್ತಿರುತ್ತಿರಲಿಲ್ಲ. 18 ವರ್ಷದ ದೀರ್ಘಾವಧಿಯ ಅವಧಿಯ ನಂತರ ತೊಡಗಿಸಿದ ಹಣ ವಾಪಸ್ ಸಿಗುವುದೆಂಬ ಭರವಸೆಯೂ ಇರುತ್ತಿರಲಿಲ್ಲ. ಬ್ಯಾಂಕಿಂಗ್ ಸೌಲಭ್ಯ ವಂಚಿತರ ಈ ಕಷ್ಟ ಕಾರ್ಪಣ್ಯಗಳನ್ನು ಮನಗಂಡ ಶ್ರೀ ಪೈ ರವರು ಬ್ಯಾಂಕ್ ಒಂದನ್ನು ಸ್ಥಾಪಿಸಲು ನಿಶ್ಚಯಿಸಿದರು. ಬ್ಯಾಂಕುಗಳಲ್ಲಿ ಜನಸಾಮಾನ್ಯರೂ ವ್ಯವಹರಿಸುವಂತಾಗಬೇಕು ಮತ್ತು ಸಾಲದ ಮೇಲಿನ ಬಡ್ಡಿಯ ದರವು ಎಂದೂ ಶೇಕಡಾ ಹತ್ತಕ್ಕಿಂತ ಹೆಚ್ಚಾಗಿರಬಾರದು ಎಂಬುದು ಪೈ ರವರ ಅಚಲ ನಿಲುವಾಗಿತ್ತು. ಈ ಬ್ಯಾಂಕ್ ನ ಬಂಡವಾಳ ಸಂಗ್ರಹಕ್ಕಾಗಿ ಪೈ ರವರು ತಾವೇ ಎತ್ತಿನಗಾಡಿಯಲ್ಲಿ ಊರಿಂದ ಊರಿಗೆ ಸಂಚರಿಸಿದರು. 1906 ಜುಲೈ 1 ರಂದು ಪೈ ರವರು ರೂ.50 ರ ಮುಖಬೆಲೆಯ ಎರಡು ಸಾವಿರ ಷೇರು ಪತ್ರಗಳನ್ನು ಮಾರಿ ಸಂಗ್ರಹಿಸಿದ ಬಂಡವಾಳದಿಂದ ಕೆನರಾ ಹಿಂದೂ ಶಾಶ್ವತ ನಿಧಿ ನಿಯಮಿತ’ ಎಂಬ ಸದೃಢ ಬ್ಯಾಂಕಿಂಗ್ ಸಂಸ್ಥೆಯನ್ನು ಸ್ಥಾಪಿಸಿದರು.
1910 ರಲ್ಲಿ ಕೆನರಾಬ್ಯಾಂಕ್ ಲಿಮಿಟೆಡ್ ಎಂದು ಈ ಸಂಸ್ಥೆಯ ಹೆಸರನ್ನು ಮರು ನಾಮಕರಣ ಮಾಡಲಾಯಿತು. 1969 ಜುಲೈ 19 ರಂದು ಕೆನರಾ ಬ್ಯಾಂಕ್ ಅನ್ನು ರಾಷ್ಟ್ರೀಕೃತಗೊಳಿಸಲಾಯಿತು. ಜನರಲ್ಲಿರುವ ಮೂಢ ನಂಬಿಕೆಗಳನ್ನು ಅಜ್ಞಾನವನ್ನು ತೊಡೆದು ಹಾಕುವುದು. ಶಿಕ್ಷಣವನ್ನು ಜೀವನದ ಸರ್ವತೋಮುಖ ಏಳಿಗೆಯ ಸಾಧನವನ್ನಾಗಿ ಜನ ಭಾವಿಸುವಂತೆ ಮಾಡುವುದು. ಉಳಿತಾಯ ಮತ್ತು ಸಹಕಾರದ ಭಾವನೆಗಳನ್ನು ಜನರಲ್ಲಿ ಬೆಳೆಸುವುದು. ಆರ್ಥಿಕ ಸಂಸ್ಥೆಗಳು ಕೇವಲ ಹಣಕಾಸಿನ ಹೃದಯ ಮಾತ್ರವಾಗಿರದೆ, ಮಾನವೀಯ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುವುದು, ಸೇವಾ ಮನೋಭಾವದೊಡನೆ ದುಡಿಯುವ ಪ್ರವೃತ್ತಿಯನ್ನು ಬೆಳಸಿಕೊಂಡು, ಅವಶ್ಯಕತೆ ಇರುವವರಿಗೆ ಸಹಾಯ ಹಸ್ತ ನೀಡುವುದು ಮುಂತಾದ ಉದಾತ್ತ ಧೇಯೋದ್ದೇಶಗಳೊಂದಿಗೆ ಪ್ರಾರಂಭವಾದ ಈ ಸಂಸ್ಥೆಯು ಇಂದು ‘ಕೆನರಾ ಬ್ಯಾಂಕ್’ ಎಂಬ ಹೆಸರಿನಲ್ಲಿ ಬೃಹದಾಕಾರವಾಗಿ ಬೆಳೆದು ವಿಶ್ವದ ಅತ್ಯಂತ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿ ಅಭಿವೃದ್ಧಿ ಹೊಂದಿದೆ. ಕೆನರಾ ಬ್ಯಾಂಕ್ ಪ್ರಪ್ರಥಮವಾಗಿ ಡೊಂಗರಕೇರಿ ರಸ್ತೆಯ ಬಾಡಿಗೆ ಕಟ್ಟಡವೊಂದರಲ್ಲಿ (ವಾರ್ಷಿಕ ಬಾಡಿಗೆರೂ.120) ಪ್ರಾರಂಭವಾಯಿತು. ಬ್ಯಾಂಕ್ ಪ್ರಾರಂಭವಾದಾಗ ಇದ್ದ ಉದ್ಯೋಗಿಗಳ ಸಂಖ್ಯೆ ನಾಲ್ಕು ಮಾತ್ರ . ತಿಂಗಳ ಒಟ್ಟಾರೆ ನಿರ್ವಹಣಾ ಖರ್ಚು ರೂ.45. ಬ್ಯಾಂಕಿನ ಮೊದಲ ಅಧ್ಯಕ್ಷರು ಶ್ರೀ ಅಮ್ಮೆಂಬಳ್ ಸುಬ್ಬರಾವ್ ಪೈ ರವರು. ಶ್ರೀ ಪೈ ರವರನ್ನೊಳಗಂಡಂತೆ ಎಲ್ಲಾ 18 ನಿರ್ದೇಶಕರು ಬ್ಯಾಂಕಿನಿಂದ ಯಾವುದೇ ಸಂಭಾವನೆ ಪಡೆಯದೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. ಇದರ ಫಲವಾಗಿ ಸಂಸ್ಥಾಪನಾ ದಿನದಂದು ಅಂದರೆ ಜುಲೈ 1, 1906 ರಲ್ಲಿ ಒಂದು ಶಾಖೆ, ರೂ. 1,26,100 ಒಟ್ಟಾರೆ ವ್ಯವಹಾರ ಮತ್ತು ರೂ 2421 ರೂಗಳ ಲಾಭದಿಂದ ಪ್ರಾರಂಭವಾದ ಕೆನರಾ ಬ್ಯಾಂಕ್ ಮಾರ್ಚ್ 2025 ರ ಅಂತ್ಯಕ್ಕೆ ವಿಶ್ವಾದ್ಯಂತ 9849 ಶಾಖೆಗಳು, ರೂ 25,30,215 ಲಕ್ಷ ಕೋಟಿ ಒಟ್ಟಾರೆ ಜಾಗತಿಕ ವ್ಯವಹಾರ ಮತ್ತು 17,026 ಕೋಟಿ ನಿವ್ವಳ ಲಾಭವನ್ನು ಗಳಿಸಿದ್ದು, ದೇಶವಿದೇಶಗಳಲ್ಲಿ ಪ್ರಖ್ಯಾತವಾಗಿದೆ.

ಕೆನರಾ ಬ್ಯಾಂಕ್ ಜಾಗತಿಕ ಮಟ್ಟದಲ್ಲಿ ಬೃಹತ್ತಾಗಿ ಬೆಳೆದಿದ್ದರೂ, ಸಂಸ್ಥಾಪಕರ ಆಶಯದಂತೆ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯತ್ತ ಯುಕ್ತ ಗಮನ ನೀಡುತ್ತಿದೆ. ಗ್ರಾಮೀಣ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಸ್ವ ಉದ್ಯೋಗ ಚಟುವಟಿಕೆಗಳನ್ನು ಪ್ರೇರೇಪಿಸಲು ಬ್ಯಾಂಕ್ ತನ್ನ ‘ಕೆನರಾ ಬ್ಯಾಂಕ್ ಶತಮಾನೋತ್ಸವ ಗ್ರಾಮೀಣ ಅಭಿವೃದ್ಧಿ ದತ್ತಿ’ ಮೂಲಕ ಗ್ರಾಮೀಣ ಅಭಿವೃದ್ದಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ. ಇದರ ಜೊತೆಗೆ ನಶಿಸಿ ಹೋಗುತ್ತಿರುವ ಕರುಕುಶಲ ಕೈಗಾರಿಕೆಗಳ ಪುನರ್ಚೇತನಕ್ಕಾಗಿ ಉಚಿತ ಕರಕುಶಲ ತರಬೇತಿ ಹಾಗೂ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾದ ನಗರದ ಪ್ರತಿಭಾವಂತ ಯುವಕ-ಯುವತಿಯರಿಗೆ ಉಚಿತ ಕಂಪ್ಯೂಟರ್ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಿದೆ. ಈ ಸಂಸ್ಥೆಗಳಿಂದ ಲಕ್ಷಾಂತರ ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡಿದೆ. ಇಲ್ಲಿ ಶಿಕ್ಷಣ ಪಡೆದ ಯುವಕ-ಯುವತಿಯರು ಸ್ವಂತ ಉದ್ಯೋಗವನ್ನು ಸ್ಥಾಪಿಸಿ, ಸುಂದರ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಣದ ಕೊರತೆಯಿಂದ ತಾಂತ್ರಿಕ-ವೈದ್ಯಕೀಯ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತ್ತು ನಗಣ್ಯ ಬಡ್ಡಿಗೆ ಅರ್ಹತಾ ಸ್ಕಾಲರ್ ಶಿಪ್ ಸಾಲ ಸೌಲಭ್ಯ ಮತ್ತು ‘ಬುಕ್ ಬ್ಯಾಂಕ್’ ಸ್ಥಾಪನೆ, ಹರಿಜನ-ಗಿರಿಜನ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ‘ಹರಿಕಲ್ಯಾಣ ಯೋಜನೆಗಳು’, ಅನಾಥಮಕ್ಕಳಿಗೆ ‘ಮಾತೃಛಾಯಾ’ ಅನಾಥಾಶ್ರಮ, ಹಿರಿಯ ನಾಗರೀಕರಿಗೆ ವೃದ್ಧಾಶ್ರಮ, ಸೇವಾಕ್ಷೇತ್ರ ಆಸ್ಪತ್ರೆ, ಹಳ್ಳಿಯ ಬಡ ಜನರಿಗೆ ವೈದ್ಯಕೀಯ ವ್ಯವಸ್ಥೆ, ರೂರಲ್ ಕ್ಲಿನಿಕ್ ಸ್ಥಾಪನೆ, ಪ್ರತಿ ಅಗ್ರಣೀ ಬ್ಯಾಂಕ್ ಜಿಲ್ಲೆಯಲ್ಲಿ ಹಳ್ಳಿಗಳ ಸರ್ವತೋಮುಖ ಬೆಳವಣಿಗೆಗಾಗಿ ‘ಗ್ರಾಮೋದಯ ಯೋಜನೆ’ , ದೇಶಾದ್ಯಂತ ವಿತ್ತೀಯ ಸಾಕ್ಷರತಾ ಜಾಗ್ರತಿಯನ್ನು ಮೂಡಿಸಲು ವಿತ್ತೀಯ ಸಾಕ್ಷರತಾ ಕೇಂದ್ರಗಳ ಸ್ಥಾಪನೆ, ಮಹಿಳಾ ಉದ್ಯಮಿಗಳು ಮತ್ತು ಕುಶಲಕರ್ಮಿಗಳು ತಾವು ತಯಾರಿಸಿದ ವಸ್ತುಗಳನ್ನು ಮಾರಾಟಮಾಡಲು ಅನುವಾಗಲು ಬ್ಯಾಂಕ್ ಹೈಟೆಕ್, ವಿನೂತನ ಮತ್ತು ಸೌರಶಕ್ತಿ ಚಾಲಿತ ಸಂಚಾರಿ ಮಾರಾಟದ ವ್ಯಾನ್‌ನ ವ್ಯವಸ್ಥೆ ಮತ್ತು ಕೆನರಾ ಉತ್ಸವದ ಆಯೋಜನೆ, ಪ್ರಕೃತಿ ವಿಕೋಪಕ್ಕೆ ತುತ್ತಾಗಿ ತೊಂದರೆಗೊಳಗಾದವರಿಗೆ ಸಹಾಯಹಸ್ತ ಇತ್ಯಾದಿಗಳು ಉದಾಹರಿಸಬಹುದಾದ ಕೆಲವು ಸಾಮಾಜಿಕ ಹೊಣೆಗಾರಿಕೆಯ ಉಪಕ್ರಮಗಳು.

ಇಂದು ‘ಕೆನರಾ ಬ್ಯಾಂಕ್’ ಬೃಹದಾಕಾರವಾಗಿ ಬೆಳೆದು ವಿಶ್ವದ ಅತ್ಯಂತ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿ ಅಭಿವೃದ್ಧಿ ಹೊಂದಿದೆ ಮತ್ತು ಕರ್ನಾಟಕ ತಳಹದಿಯ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ಆಗಿದೆ. ಬ್ಯಾಂಕುಗಳು ಕೇವಲ ಹಣಕಾಸಿನ ಹೃದಯ ಮಾತ್ರವಲ್ಲದೇ, ಮಾನವೀಯ ಹೃದಯದಿಂದಲೂ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶ್ರಮಿಸಬೇಕೆಂದು ಶ್ರೀ ಪೈ ರವರು ಒತ್ತಿ ಹೇಳುತ್ತಿದ್ದರು. ಶ್ರೀ ಪೈ ರವರು ಸುಮಾರು 120 ವರ್ಷಗಳ ಹಿಂದೆಯೇ ಮನಗಂಡ ಈ ಉದ್ದೇಶಗಳೇ, 1969 ರಲ್ಲಿ ಕೇಂದ್ರ ಸರ್ಕಾರವು ಬ್ಯಾಂಕು ಗಳನ್ನು ರಾಷ್ಟ್ರೀಕೃತಗೊಳಿಸಿದ ಮುಖ್ಯ ಉದ್ದೇಶಗಳಾಗಿದ್ದವು ಎನ್ನುವುದು ಗಮನಾರ್ಹ.

  • ಎಂ ವೆಂಕಟೇಶ ಶೇಷಾದ್ರಿ , ಲೇಖಕರು ಮತ್ತು ಅಂಕಣಕಾರರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!