
ಬಳ್ಳಾರಿ / ಕಂಪ್ಲಿ : ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ವೈದ್ಯರ ಸೇವೆ ಅನನ್ಯವಾಗಿದೆ ಮತ್ತು ಪ್ರಾಣ ನೀಡುವವ ದೇವರಾದರೆ ಅದನ್ನು ರಕ್ಷಿಸುವನು ವೈದ್ಯನಾಗಿದ್ದಾನೆ. ತಮ್ಮ ಪ್ರಾಣವನ್ನು ಲೆಕ್ಕಿಸದೇ ರೋಗಿಗಳ ಸೇವೆಗೈಯ್ಯುವ ವೈದ್ಯರ ಸೇವೆ ಅನುಕರೀಣಯವಾಗಿದೆ ಎಂದು ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್.ಚಾಂದ್ ಬಾಷಾ ಹೇಳಿದರು.
ಪಟ್ಟಣದ ಸಣಾಪುರ ರಸ್ತೆಯಲ್ಲಿರುವ ರೈನ್ ಬೋ ಪಿಯುಸಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಯ ಜತೆಗೆ ಪ್ರಾಮಾಣಿಕತೆಯು ಮುಖ್ಯವಾಗಿರುತ್ತದೆ. ಪತ್ರಕರ್ತರು ಸಹ ತಮ್ಮ ಜೀವನವನ್ನು ಸಮಾಜ ಸೇವೆಗೆ ಮುಡುಪಾಗಿಟ್ಟಿದ್ದಾರೆ. ಅವರಂತೆಯೇ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದೊಂದಿಗೆ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ನಂತರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಯುರ್ವೇದಿಕ್ ವೈದ್ಯರಾದ ಡಾ.ಮಲ್ಲೇಶಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಜುಲೈ.1 ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅದಕ್ಕೊಂದು ಕಾರಣವೂ ಇದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿ. ದಾನ್ ಚಂದ್ರ ರಾಯ್ ಅವರ ನೆನಪಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದವರು. ಅವರ ಗಣನೀಯ ಸೇವೆಯನ್ನು ಪರಿಗಣಿಸಿ, ಅವರ ಸವಿನೆನಪಿಗಾಗಿ ವೈದ್ಯರ ದಿನಾಚರಣೆ ಆಚರಿಸಿಕೊಂಡು ಬರಲಾಗಿದೆ. ತಮ್ಮ ದೂರದೃಷ್ಟಿ ನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪದ ಕೊಡುಗೆ ಕೊಟ್ಟವರು. ಮೇಲು ಕೀಳು ನೋಡದೆ, ಭೇದಭಾವ ಮಾಡದೆ ಎಲ್ಲರನ್ನೂ ಒಂದೇ ರೀತಿ ನೋಡಿದ ಜನಮೆಚ್ಚಿದ ವೈದ್ಯರಾಗಿದ್ದ ರಾಯ್, ಹೊಸತನದ ಆಲೋಚನೆಗಳನ್ನು ಹೊಂದಿದ್ದರು ಎಂದರು. ನಂತರ ವೈದ್ಯರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೆಸಿಬಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ಶಾರುಖ್, ವೈದ್ಯರಾದ ಡಾ.ಶಫಿ, ಡಾ.ಶ್ರೀನಿವಾಸ, ಪ್ರಾಚಾರ್ಯ ಬಿ.ಶ್ರೀನಿವಾಸ, ಉಪನ್ಯಾಸಕರಾದ ಮೇಘ, ಶಮ್‌ಶೇರ್, ನಂದೀಶ್, ಕಾನಿಪ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ದ್ಯಾಮನಗೌಡ ಪಾಟೀಲ್, ಬಿ.ರಸೂಲ್, ತಾಲೂಕು ಅಧ್ಯಕ್ಷ ಪಿ.ವಿರೇಶ, ಕಾರ್ಯದರ್ಶಿ ಎಸ್.ಯಮನಪ್ಪ, ಜಿ.ಚಂದ್ರಶೇಖರಗೌಡ, ಕರಿ ವಿರೂಪಾಕ್ಷಿ, ಎಂ.ಚ ಚಂದ್ರಶೇಖರ, ಅಮರನಾಥ, ಇಂದ್ರಜೀತ್‌ಸಿಂಗ್ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















