ಬಳ್ಳಾರಿ/ ಕಂಪ್ಲಿ : ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೆಲ್ಲುಡಿ ಗ್ರಾ. ಪಂ. ಯ ಶಾಂತಿನಗರದಲ್ಲಿ ಡೆಂಗೂ, ಮಲೇರಿಯಾ ಮತ್ತಷ್ಟು ಉಲ್ಭಣವಾಗಿದೆ ಎಂದು ಗ್ರಾಪಂ ಸದಸ್ಯ ಸುಧಾಕರ ಹೇಳಿದರು. ತಾಲೂಕಿನ ನೆಲ್ಲುಡಿ ಗ್ರಾಪಂಯ ಶಾಂತಿನಗರದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದು ಹದಿನೈದು ದಿನಗಳಿಂದ ಡೆಂಗ್ಯೂ, ಮಲೇರಿಯಾ ಜನರಲ್ಲಿ ಕಾಣಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯದ ಹಿನ್ನಲೆ ಇಲ್ಲಿನ ಬಡವರು ಜೀವ ಉಳಿಸಿಕೊಳ್ಳಲು ಸಾಲ ಸೂಲ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ. ಇದರಿಂದ ಶಾಂತಿನಗರದಲ್ಲಿ ಶಾಂತಿ ಇಲ್ಲದಂತಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಅಧಿಕಾರಿಗಳು ನೆಲೆಸಿದ್ದರೂ ಅವರ ಬೇಕಾಬಿಟ್ಟಿಯಿಂದ ಮನೆಗಳಿಗೆ ಬಂದು, ಮರಳಿ ಕ್ಯಾಂಪಿನಲ್ಲಿ ನೆಲೆಸುವಂತಾಗಿದೆ. ಇಲ್ಲಿನ ಮನೆಗಳಲ್ಲಿ ಇಬ್ಬರು ಮೂವರಿಗೆ ಜ್ವರ ಕಾಣಿಸಿಕೊಂಡು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬರುವಂತಾಗಿದೆ. ಇಲ್ಲಿ 75ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 25ಕ್ಕೂ ಹೆಚ್ಚು ಜನರಲ್ಲಿ ಡೆಂಗ್ಯೂ, ಮಲೇರಿಯಾ ಕಾಣಿಸಿಕೊಂಡಿದ್ದು, ಇದರಿಂದ ಶಾಂತಿನಗರದಲ್ಲಿ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸರ್ಕಾರಿ ವೈದ್ಯರು, ಆಶಾಕಾರ್ಯಕರ್ತೆಯರು ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ಕೆಲವರ ಪರೀಕ್ಷೆ ಮಾಡಿ, ಇದು ವೈರಲ್ ಫಿವರ್ ಎಂದು ಹೇಳುತ್ತಿದ್ದಾರೆ. ಆದರೆ, ವೈರಲ್ ಫಿವರ್ ಆದರೆ, ಬಹಳಷ್ಟು ಜನರು ಖಾಸಗಿ ಆಸ್ಪತ್ರೆಯಲ್ಲಿ ಹೋಗಿ ಚಿಕಿತ್ಸೆ ಪಡೆಯುತ್ತಿರುವುದು ಏಕೆ?. ನೆಲ್ಲುಡಿ ಗ್ರಾಮ ಪಂಚಾಯಿತಿಯ ಶಾಂತಿನಗರದ 2ನೇ ವಾರ್ಡಿನಲ್ಲಿ ಕಳೆದ ಹದಿನೈದು ದಿನಗಳಿಂದ ಡೆಂಗು ಕಾಣಿಸಿಕೊಂಡ ಹಿನ್ನಲೆ ಜನರು ಅನಾರೋಗ್ಯ ತುತ್ತಾಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಂಗಾಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಜನರು ದಾಖಲಾಗಿ, ಡೆಂಗ್ಯೂ, ಮಲೇರಿಯಾ, ಟೈಪಾಯಿಡ್ ಜ್ವರದಿಂದಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಸರ್ಕಾರಿ ಆಸ್ಪತ್ರೆಗೆ ತೆರಳಿದರೆ, ಸರಿಯಾದ ಚಿಕಿತ್ಸೆ ದೊರಕದ ಹಿನ್ನಲೆ ಖಾಸಗಿ ಆಸ್ಪತ್ರೆ ಕಡೆಗೆ ಹೋಗುವಂತಾಗಿದೆ. ಇಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಟಚಾರಕ್ಕೆ ಕ್ಯಾಂಪ್ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇಲ್ಲಿನ ಜನತೆಗೆ ಸರಿಯಾದ ಚಿಕಿತ್ಸೆ ಸಿಗದ ಹಿನ್ನಲೆ ಅನಾರೋಗ್ಯವು ಇಲ್ಲಿನ ಜನರಲ್ಲಿ ಕಾಡತೊಡಗಿದೆ. ಆದ್ದರಿಂದ ಜಿಲ್ಲಾ ಆರೋಗ್ಯ ಅಧಿಕಾರಿ(ಡಿಎಚ್‌ಒ) ಇವರು ಭೇಟಿ ನೀಡಿ ಇಲ್ಲಿನ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ. ಪಂ ಸದಸ್ಯೆ ಪಾರ್ವತಿ, ಗ್ರಾಮಸ್ಥರಾದ ಖಾಜಾಹುಸೇನ್, ರಾಜಮ್ಮ, ನಾಗವೇಣಿ, ಯಂಕಮ್ಮ, ಈರಮ್ಮ ಸೇರಿದಂತೆ ಸಾಕಷ್ಟು ಜನರಿದ್ದರು.
ವರದಿ: ಜಿಲಾನಸಾಬ್ ಬಡಿಗೇರ್



















