ಅರಿಶಿನಕ್ಕೆ 4000 ವರ್ಷಗಳ ಇತಿಹಾಸವಿದೆ. ಅರಿಶಿನವಿಲ್ಲದೆ ಅಡುಗೆಯೇ ಇಲ್ಲ. ಅರಿಶಿನದ ವಾರ್ಷಿಕ ಜಾಗತಿಕ ಉತ್ಪಾದನೆ ಸುಮಾರು 11 ಲಕ್ಷ ಟನ್ ಆಗಿದ್ದು, ಇದರಲ್ಲಿ ಭಾರತದ ಕೊಡುಗೆ ಸುಮಾರು 80 % ರಷ್ಟಾಗಿದೆ.
ತೆಲಂಗಾಣದ ಕಾಮ ರೆಡ್ಡಿ, ಜಗಿತ್ಯಾಲ, ನಿಜಾಮಾಬಾದ್ ಅತಿ ಹೆಚ್ಚು ಅರಿಶಿನ ಬೆಳೆಯುವ ಜಿಲ್ಲೆಗಳಾಗಿವೆ.
ಅರಿಶಿನ ರೈತರ ಸಮಸ್ಯೆಗಳು :
2023-24 ರಲ್ಲಿ ಭಾರತ 1.62 ಲಕ್ಷ ಮೆಟ್ರಿಕ್ ಟನ್ ರಷ್ಟು ಅರಿಶಿನ ರಫ್ತು ಮಾಡಿತ್ತು. ‘ಚಿನ್ನದ ಮಸಾಲೆ’ (ಗೋಲ್ಡನ್ ಸ್ಪೈಸ್) ಎಂದೇ ಪ್ರಖ್ಯಾತಿ ಪಡೆದಿರುವ ಅರಿಶಿನದ ರೈತರಿಗೆ ಸಾಕಷ್ಟು ಸಮಸ್ಯೆಗಳಿದ್ದವು. ಪ್ರಮುಖವಾಗಿ, ಮೂಲ ಸೌಕರ್ಯದ ಕೊರತೆ, ಶೇಖರಣೆಯ ಸಮಸ್ಯೆ, ಬೆಲೆಯಲ್ಲಿ ಏರಿಳಿತ, ಗುಣಮಟ್ಟ ಇರುವ ಬೀಜಗಳ ಕೊರತೆ, ಅರಿಸಿನ ಕೃಷಿ ಯಂತ್ರೋಪಕರಣಗಳ ಕೊರತೆ, ಬ್ರಾಂಡಿಂಗ್ ಸಮಸ್ಯೆಗಳಿಂದ ಅರಿಸಿನ ಬೆಳೆಯುವ ರೈತರು ಕಂಗಾಲಾಗಿದ್ದರು.
ರಾಷ್ಟ್ರ ಮಟ್ಟದಲ್ಲಿ ಇದನ್ನು ಪರಿಹರಿಸಲು ಗೃಹ ಮಂತ್ರಿಗಳಾದ ಶ್ರೀ ಅಮಿತ್ ಶಾ ಜಿ ಅವರು ತೆಲಂಗಾಣದ ನಿಜಾಮಾಬಾದ್ ನಲ್ಲಿ ‘ರಾಷ್ಟ್ರೀಯ ಅರಿಶಿನ ಮಂಡಳಿ’ ಯನ್ನು ಸ್ಥಾಪಿಸುವ ಮೂಲಕ ಇತಿಹಾಸ ರಚಿಸಿದ್ದಾರೆ.
ಛಲಬಿಡದ ತ್ರಿವಿಕ್ರಮ – ಅರವಿಂದ್ ಧರ್ಮಪುರಿ
ಭಾರತದ ‘ಅರಿಶಿನ ರಾಜಧಾನಿ’ ಯಾಗಿರುವ ನಿಜಾಮಾಬಾದ್ ನಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ಅರಿಶಿನ ಮಂಡಳಿ ಸ್ಥಾಪಿಸಲು ಬೇಡಿಕೆಯಿತ್ತಾದರೂ ಕಾರ್ಯಗತವಾಗಿರಲಿಲ್ಲ. ನಿಜಾಮಾಬಾದ್ ಸಂಸದರಾದ ಅರವಿಂದ್ ಧರ್ಮಪುರಿ ಅವರ ಭಗೀರಥ ಪ್ರಯತ್ನದಿಂದ
ಮಂಡಳಿಯ ರಚನೆ ಈಗ ಪೂರ್ಣಗೊಂಡಿದೆ. ನಿಜಾಮಾಬಾದ್ ಲೋಕ ಸಭಾ ಕ್ಷೇತ್ರದಿಂದ ಗೆದ್ದರೆ ಅರಿಶಿನ ಮಂಡಳಿಯನ್ನು ರಚಿಸುತ್ತೇನೆ, ಅರಿಶಿನ ಮಂಡಳಿಯನ್ನು ಸ್ಥಾಪಿಸುವ ನನ್ನ ಸಂಕಲ್ಪ ಪೂರ್ಣಗೊಳ್ಳದೆ ಇದ್ದಲ್ಲಿ ರಾಜೀನಾಮೆಯನ್ನು ಸಲ್ಲಿಸುತ್ತೇನೆ ಎಂದು ಅರವಿಂದ್ ಧರ್ಮಪುರಿ ಅವರು ರೈತರಿಗೆ ಭರವಸೆ ನೀಡಿದ್ದರು.
ಅರಿಶಿನ ರಾಜಕೀಯ
2019 ರಲ್ಲಿ ಅರಿಶಿನ ಬೆಳೆಯುವ ರೈತರು ಅಂದಿನ ನಿಜಾಮಾಬಾದ್ ಲೋಕ ಸಭಾ ಕ್ಷೇತ್ರದ ಸಂಸದರಾಗಿದ್ದ ಕೆ. ಕವಿತಾ ಅವರಿಗೆ ಹಲವು ಬಾರಿ ಅರಿಶಿನ ಮಂಡಳಿಯನ್ನು ರಚಿಸಲು ಹಾಗೂ ಬೆಂಬಲ ಬೆಲೆ ನೀಡಲು ಆಗ್ರಹಿಸಿದ್ದರು. ಆದರೆ, ಬೇಡಿಕೆ ಈಡೇರಿಸುವಲ್ಲಿ ಸಂಸದೆ ವಿಫಲರಾಗಿದ್ದರು. ಅರಿಶಿನ ಮಂಡಳಿ ಸ್ಥಾಪನೆಯಲ್ಲಿ ವಿಫಲರಾಗಿದ್ದರಿಂದಲೇ ಚುನಾವಣೆಯಲ್ಲಿ ಬಿಜೆಪಿಯ ಅರವಿಂದ್ ಧರ್ಮಪುರಿಯ ವಿರುದ್ಧ ಸೋಲಾಯಿತು.
ರಾಷ್ಟ್ರೀಯ ಅರಿಶಿನ ಮಂಡಳಿಯಿಂದ ರೈತರಿಗೆ ಹೇಗೆ ಉಪಯೋಗವಾಗುತ್ತದೆ ?
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಂಡಳಿಯು ಅರಿಶಿನದ ಪ್ಯಾಕೇಜಿಂಗ್, ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತದೆ.
ಇನ್ನೆರೆಡು ಮೂರು ವರ್ಷಗಳಲ್ಲಿ ನಿಜಾಮಾಬಾದ್ ನ ಅರಿಶಿನವು ವಿಶ್ವದೆಲ್ಲೆಡೆ ರಫ್ತಾಗಲಿದೆ. ಮಂಡಳಿಯ ರಚನೆಯಿಂದ ಅರಿಶಿನ ಬೆಳೆಗಾರರಿಗೆ ಮಧ್ಯವರ್ತಿಗಳ ತೊಂದರೆ ನಿವಾರಣೆಯಾಗಲಿದೆ. ಕೇಂದ್ರ ಸರ್ಕಾರವು ಈ ಉಪಕ್ರಮಕ್ಕೆ 200 ಕೋಟಿಯನ್ನು ಮೀಸಲಿಟ್ಟಿದೆ. 2030 ರ ವೇಳೆಗೆ ಭಾರತವು ಅರಿಶಿಣ ರಫ್ತಿನ ಮೌಲ್ಯವನ್ನು 1 ಶತಕೋಟಿ ಡಾಲರ್ ಗೆ (ಸುಮಾರು 8,500 ಕೋಟಿ ರೂ.) ಏರಿಕೆ ಮಾಡುವ ಗುರಿ ಹೊಂದಲಾಗಿದೆ.
ಮಂಡಳಿಯು 30 ಕ್ಕೂ ಹೆಚ್ಚುಅರಿಶಿನದ ಪ್ರಭೇದಗಳಿಗೆ ಬ್ರಾಂಡಿಂಗ್ ಹಾಗೂ ಅರಿಶಿನದಲ್ಲಿರುವ ಔಷಧೀಯ ಮೌಲ್ಯಗಳ ಬಗ್ಗೆ ಸಂಶೋಧನೆ ಮಾಡಲಿದೆ. ಸಾವಯವ ಅರಿಶಿನಕ್ಕೆ ಭೌಗೋಳಿಕ ಸೂಚಕ ಟ್ಯಾಗ್ (ಜಿ.ಐ. ಟ್ಯಾಗ್) ಮಾನ್ಯತೆ ಪಡೆಯುವುದಕ್ಕೆ ಮಂಡಳಿ ಶ್ರಮಿಸಲಿದೆ.
ಅರಿಶಿನಕ್ಕೆ ಜಿ.ಐ. ಟ್ಯಾಗ್
ಜಿ.ಐ. ಟ್ಯಾಗ್ ಸಿಗುವುದರಿಂದ ರೈತರಿಗೆ ಹೆಚ್ಚಿನ ಬೆಲೆ ಹಾಗೂ ಮಾರುಕಟ್ಟೆಯ ವಿಸ್ತೀರ್ಣವಾಗಲಿದೆ. ಅರಿಶಿಣದಲ್ಲಿರುವ ಔಷಧೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು, ರೈತರಿಗೆ ಮಾರ್ಗದರ್ಶನ ನೀಡಲು ಮಂಡಳಿ ಕೆಲಸ ಮಾಡಲಿದೆ.
ರಾಷ್ಟ್ರೀಯ ಅರಿಶಿನ ಮಂಡಳಿಯೊಂದಿಗೆ, ರಾಷ್ಟ್ರೀಯ ಸಹಕಾರಿ ರಫ್ತು ನಿಗಮ, ಭಾರತ್ ಆರ್ಗಾನಿಕ್ಸ್ ಸಂಸ್ಥೆಗಳು ಪ್ರಾರಂಭವಾಗಲಿದ್ದು ಅರಿಶಿನ ರಫ್ತಿಗೆ ಈ ಸಂಸ್ಥೆಗಳು ಬೆಂಬಲ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲಿದೆ.
- ಸಂಗ್ರಹ



















