ಬಳ್ಳಾರಿ / ಕಂಪ್ಲಿ : ತಾಲೂಕಿನ ನೆಲ್ಲುಡಿ ಗ್ರಾ. ಪಂ. ಯ ಶಾಂತಿನಗರಕ್ಕೆ ಡೆಂಗ್ಯೂ, ಮಲೇರಿಯಾ ಹಿನ್ನಲೆ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಡಾ. ರಮೇಶ ಬಾಬು ಬುಧವಾರ ಸಂಜೆ ಭೇಟಿ ಪರಿಶೀಲಿಸಿದರು.
ಕಳೆದ ಹದಿನೈದು ದಿನಗಳಿಂದ ಇಲ್ಲಿನ ಜನರಲ್ಲಿ ಜ್ವರ ಕಾಣಿಸಿಕೊಂಡು ಮನೆಯಲ್ಲೇ ಮಲಗಿಸಿದೆ.
ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಇದು ಡೆಂಗ್ಯೂ, ಮಲೇರಿಯಾ ಎಂದು ವರದಿ ನೀಡುತ್ತಿದ್ದಾರೆ. ಆದರೆ, ಸರ್ಕಾರಿ ವೈದ್ಯರು ಇಲ್ಲಿನ ಜನರಲ್ಲಿ ಕಾಣಿಸಿಕೊಂಡಿರುವುದು ವೈರಸ್ ಫಿವರ್ ಎಂದು ಹೇಳುತ್ತಿದ್ದಾರೆ. ಮನೆಯಲ್ಲಿ ಒಬ್ಬರು, ಇಬ್ಬರು, ಮೂವರಿಗೆ ಜ್ವರ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಸಾಕಷ್ಟು ಜನರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಂತಿನಗರದಲ್ಲಿರುವ ಸುಮಾರು 80 ಮನೆಗಳ ಪೈಕಿ 25ಕ್ಕೂ ಹೆಚ್ಚು ಜನರಿಗೆ ಜ್ವರದ ಸೋಂಕು ಆವರಿಸಿಕೊಂಡ ಪರಿಣಾಮ ಜನರ ನಿದ್ದೆಗೆಡಿಸಿದೆ. ಸರ್ಕಾರಿ ವೈದ್ಯರು ಬೇಕಾಬಿಟ್ಟಿಯಲ್ಲಿ ಮನೆಗಳಿಗೆ ಭೇಟಿ ನೀಡಿ ಹೋಗುತ್ತಿದ್ದಾರೆ ಎಂದು ಇಲ್ಲಿನ ಜನರು ಡಿಎಚ್‌ಓ ಡಾ.ರಮೇಶ ಬಾಬು ಇವರಿಗೆ ತಿಳಿಸಿದರು.
ನಂತರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಮೇಶ ಬಾಬು ಮಾತನಾಡಿ, ಇಲ್ಲಿನ ಜನರಲ್ಲಿ ವೈರಲ್ ಫಿವರ್ ಆಗಿದೆ. ಇದರಿಂದ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ ಆರೋಗ್ಯ ಅಧಿಕಾರಿಗಳಿಗೆ ಇಲ್ಲೊಂದು ಕ್ಯಾಂಪ್ ಮಾಡಿ, ಮನೆ ಮನೆಗೆ ತೆರಳಿ, ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಜನರು ಭಯಪಡುವ ಅಗತ್ಯ ಇಲ್ಲ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯ ಪ್ರಭಾಕರ, ವೈದ್ಯರಾದ ಡಾ. ಅಬ್ದುಲ್ಲಾ, ಡಾ. ಮರಿಯಂಬಿ, ಡಾ.ರವೀಂದ್ರ ಕನಕೇರಿ, ಡಾ.ಫಾರೂಖ್ ಅಹಮ್ಮದ್, ಡಾ.ಭರತ್, ಈಶ್ವರ ಹೆಚ್. ದಾಸಪ್ಪ, ಡಾ.ಜಬೀನ್ ತಾಜ್, ತಿಪ್ಪೆಸ್ವಾಮಿ, ಉಮಾಮಹೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ, ಹೆಚ್‌ಐಓ ಬಸನಗೌಡ, ವಿಜ್ಞೇಶ್ವರ, ಕೃಷ್ಣಮೂರ್ತಿ, ಚನ್ನಬವರಾಜ, ಪಿಹೆಚ್‌ಸಿಓ, ಗೀತಾ, ನಂದಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















