ಬಳ್ಳಾರಿ/ ಕಂಪ್ಲಿ : ತುಂಗಭದ್ರಾ ಜಲಾಶಯದ 19ನೇ ಕ್ರಸ್‌ಗೇಟ್ ಕಟ್ ಆದ ಬಳಿಕ ನುರಿತ ತಜ್ಞರೊಂದಿಗೆ ಗೇಟ್ ಅಳವಡಿಸಿ, ನೀರಿನ ಸಂಗ್ರಹವನ್ನು ಉಳಿಸಲಾಗಿತ್ತು. ಆದರೆ, ಈ ಬಾರಿ ಮುಂಗಾರು ಹಂಗಾಮಿನ ಬೆಳೆಗೆ ಮಾತ್ರ ನೀರು ಹರಿಸಿ, ಈಗಾಗಲೇ ಆಗಿರುವ ಟೆಂಡರ್‌ನಂತೆ ಜಲಾಶಯಕ್ಕೆ ಹೊಸ ಗೇಟ್ ಅಳವಡಿಕೆಗೆ ಮುಂದಾಗಿರುವುದು ಹಿನ್ನಲೆ ರೈತರು ಒಂದೇ ಬೆಳೆಯತ್ತ ಮುಖ ಮಾಡುವಂತಾಗಿದೆ.
ತುಂಗಭದ್ರಾ ಜಲಾಶಯದ ಬಲಭಾಗದ ರೈತರು ಮುಂಗಾರು ಹಂಗಾಮಿನಲ್ಲಿ ಮಾತ್ರ ಬೆಳೆ ತೆಗೆದುಕೊಳ್ಳಬೇಕಾಗಿದೆ. ಆದರೆ, ಇಲ್ಲಿನ ಬುಕ್ಕಸಾಗರ ಬಳಿಯಲ್ಲಿರುವ ತುರ್ತು ಕಾಲುವೆಯಲ್ಲಿ ತುಂಬಿದ ಹೂಳು ಮತ್ತು ಜಲಸಸ್ಯದಿಂದಾಗಿ ಮುಂಗಾರು ಹಂಗಾಮಿನ ಬೆಳೆಯು ಕೈತಪ್ಪುವ ಆತಂಕ ಮನೆ ಮಾಡಿದೆ.
ಬುಕ್ಕಸಾಗರ ಗ್ರಾಮದ ಹೊಸಪೇಟೆ ರಸ್ತೆಯ ಈರಣ್ಣಕ್ಯಾಂಪ್ ಬಳಿಯಲ್ಲಿ ಎಲ್‌ಎಲ್‌ಸಿ ಕಾಲುವೆಯ ಡಿಸ್ಟಿಬ್ಯೂಟರ್ ಮೂಲಕ ತುರ್ತು ಕಾಲುವೆಗೆ ನಿಗಧಿಯಂತೆ ಸುಮಾರು 5 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಆದರೆ, ಈ ಬಾರಿ ಇಲ್ಲಿನ ಕಾಲುವೆಯು ಸಂಪೂರ್ಣವಾಗಿ ಹೂಳು ತುಂಬಿಕೊಂಡು, ಓಡಾಡುವ ರಸ್ತೆಯಂತಾಗಿ, ಕಾಲುವೆ ಎಲ್ಲಿದೆಯೋ ಎಂದು ಹುಡುಕಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕಾಲುವೆ ವ್ಯಾಪ್ತಿಯಲ್ಲಿರುವ ಸುಮಾರು 400 ಎಕರೆಯ ರೈತರ ಜಮೀನುಗಳಿಗೆ ನೀರು ಹರಿಸಬೇಕಾಗಿದೆ. ಇಲ್ಲಿ 93ರಿಂದ 103ವರೆಗೆ ಸಣ್ಣ ಗೇಟ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ತುರ್ತು ಕಾಲುವೆ ಮೂಲಕ ರಾಮಸಾಗರ ಕಾಲುವೆಗೆ ನೀರು ಸಾಗಲಿದೆ. ಆದ್ದರಿಂದ ಇಲ್ಲಿನ ಕಾಲುವೆಯು ಮಣ್ಣು, ಗಿಡ ಕಂಟಿಯಿಂದ ಮುಳುಗಿದೆ. ಇದರಿಂದ ಮುಂಗಾರು ನಾಟಿ ಮುಂಚಿಯೇ ರೈತರನ್ನು ಚಿಂತೆಗೀಡು ಮಾಡಿದೆ.
ಈಗಾಗಲೇ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈಗ ಸುಮಾರು 105 ಟಿಎಂಸಿಯಲ್ಲಿ ಬರೀ 80 ಟಿಎಂಸಿ ನೀರು ಸಂಗ್ರಹಕ್ಕೆ ಮಾತ್ರ ನಿರ್ಧರಿಸಲಾಗಿದೆ. ಜು.10ರಿಂದ ಎಲ್‌ಎಲ್‌ಸಿ ಕಾಲುವೆಗೆ ನೀರು ಬಿಡುವ ಸಂಭವವಿದೆ. ಆದ್ದರಿಂದ ಈ ಭಾಗದ ರೈತರ ಬೆಳೆಗಳಿಗೆ ನೀರು ತಲುವುದು ಕಷ್ಟಕರ. ಈಗಾಗಲೇ ತುಂಬಿರುವ ಹೂಳು, ಜಲಸಸ್ಯದಿಂದಾಗಿ ಕೆಳ ಭಾಗದ ರೈತರ ಹೊಲ ಗದ್ದೆಗಳಿಗೆ ನೀರು ತಲುಪುವುದಿಲ್ಲ. ಇಲ್ಲಿನ ರೈತರು ಪ್ರತಿ ಬಾರಿ ಬೆಳೆದ ಬೆಳೆಗಳ ಫಸಲನ್ನು ಪಡೆಯಲು ನೀರಿಗಾಗಿ ಪರದಾಟಬೇಕಾದ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಲ್ಲಿನ ರೈತರ ಸಂಕಷ್ಟ ಕಣ್ಣಿಗೆ ಕಾಣದಂತಾಗಿದೆ.
ಎಲ್‌ಎಲ್‌ಸಿಯ ತುರ್ತು ಕಾಲುವೆ ತೂಬ್ ಮುಂಭಾಗದಲ್ಲಿ ಹಾದು ಹೋಗಿರುವ ಕಾಲುವೆ ಸಂಪೂರ್ಣವಾಗಿ ಮುಚ್ಚಿದ ಪರಿಣಾಮ ಇಲ್ಲಿನ ಕಾಲುವೆಯ ದಿಕ್ಕನ್ನೇ ಬದಲಿದಂತೆ ಕಾಣುತ್ತಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಮಾಯವಾಗಿದ್ದ ಕಾಲುವೆಯ ಹಾದಿಯನ್ನು ಗುರುತಿಸಿ, ಮಣ್ಣೆತ್ತುವ ಮೂಲಕ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದು ರೈತರಲ್ಲಿ ಮಂದಹಾಸ ಮೂಡಿದೆ.
ಈ ಬಾರಿ ಒಂದೇ ಬೆಳೆಗೆ ನೀರು ಹರಿಸುವ ಹಿನ್ನಲೆ ನೀರಿಲ್ಲದ ಜಮೀನಿನಲ್ಲಿ ಫಸಲು ತೆಗೆದುಕೊಳ್ಳುವುದು ಹೇಗಪ್ಪಾ? ಎಂಬ ಪ್ರಶ್ನೆ ಮೂಡಿದೆ. ಆದರೆ, ತೂಬ್ ದುರಸ್ಥಿ ಮಾಡಿ ಕೈತೊಳೆದುಕೊಳ್ಳುವುದಲ್ಲ ಇದರ ಜೊತೆಗೆ ತುರ್ತು ಕಾಲುವೆಯುದ್ಧಕ್ಕೂ ತುಂಬಿದ ಹೂಳು ಮತ್ತು ಜಲಸಸ್ಯೆವನ್ನು ಸಂಪೂರ್ಣವಾಗಿ ತೆಗೆಸಿದರೆ ಮಾತ್ರ ರೈತರ ಹೊಲ ಗದ್ದೆಗಳಿಗೆ ನೀರು ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ಹೂಳೇತ್ತುವ ಜತೆಗೆ ಗಿಡ ಕಂಟಿಗಳನ್ನು ಸ್ವಚ್ಚಗೊಳಿಸಿ, ರೈತರಿಗೆ ಅನುವು ಮಾಡಿಕೊಡಬೇಕೆಂಬುದು ರೈತರಾದ ಎಲ್.ಎಸ್.ರುದ್ರಪ್ಪ, ಆರ್.ರಾಜಾಸಾಬ್, ಶೇಕ್ಷಾವಲಿಸಾಬ್, ವಾಜೀದ್‌ಬಾಷಾ, ಸಿ.ರಾಜಶೇಖರ, ಹನುಮಂತಪ್ಪ, ಚಂದ್ರಶೇಖರರೆಡ್ಡಿ ಇದ್ದರು.
ವರದಿ: ಜಿಲಾನಸಾಬ್ ಬಡಿಗೇರ



















