ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆ
ಮನದ ಮಿಡಿತದ ಆವೇಗ ಸುಳಿಯಲಿ
ನನ್ನ ನಾ ಮರೆತ ಕ್ಷಣಗಳು
ಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲು
ತವಕಿಸುತಿದೆ ಎದೆಯಾಳದ ನೂಪುರ.
ಸಂಗದಿ ಆನಂದ ಅಷ್ಟಿಷ್ಟಲ್ಲ
ವಿಹಂಗಮ ನೋಟ ಕಣ್ಣಿಗೆ
ಬಾನಂಚಿನ ಚಂದ್ರ ಇಣುಕಿದ
ತೋಳ ಬಂಧಿಯಲಿ ನಾ ನೀನಾದ ಪರಿ
ಗಾಳಕ್ಕೆ ಸಿಕ್ಕ ಮೀನಂತೆ.
ಅನಿರ್ಬಂಧಿತ ಆಸೆ ಚಿಗುರಿ
ಅನುರಾಗದ ಅಲೆಗಳು ಚಿಮ್ಮಿ
ಒಲವ ಓಕುಳಿ ಆಡುತಿವೆ
ಛಲದ ಬದುಕಿಗೆ ಮುನ್ನುಡಿಯಾಗಿ
ಬಲವ ತುಂಬಿದೆ ನಿನ್ನಾಸರೆಯಲಿ.
ಅಳತೆ ಮೀರಿದ ಅನುಭವ
ಸಮಾನುಪಾತವಾಗಲು ನೀ ಬೇಕೆಂಬ ಹಂಬಲ
ಒಟ್ಟಿಗೆ ನಡೆದು ಬಿಡು
ಸಂಧಾನಕೆ ಮುಖಮಾಡಿ
ಚಂದದ ಬದುಕಿಗೆ ಆಧಾರಬಾಗಿ.
- ರೇಷ್ಮಾ ಕಂದಕೂರ



















