
ಬಾಗಲಕೋಟೆ / ಹುನಗುಂದ :ಹಿಂದೂ ಮುಸ್ಲಿಂ, ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ದಿ. 06-೦7-2025 ರ ರವಿವಾರ ದಂದು ಭಕ್ತಿಭಾವದ ಮಧ್ಯೆ ತೆರೆ ಕಂಡಿತು. ಐದು ದಿನಗಳವರೆಗೆ ಪ್ರತಿಷ್ಠಾನಗೊಂಡ ಹಸೇನ ಹುಸೇನರ ಪಾಂಜಾ ಹಾಗೂ ಡೋಲಿಗೆ ಗಂಧರಾತ್ರಿ ಹಾಗೂ ಕತಲ್ ರಾತ್ರಿಯ ದಿನ ಹಿಂದೂ ಹಾಗೂ ಮುಸ್ಲಿಂರು ಜಯಘೋಷದೊಂದಿಗೆ ಮಸೀದಿಗೆ ತೆರಳಿ ವೈವಿಧ್ಯ ಪಾನಕಾ ಹಾಗೂ ನಾನಾ ಹರಕೆಗಳನ್ನು ನೀಡಿ ಲಾಡಿಗಳನ್ನು ಭಕ್ತಿ ಪೂರಕವಾಗಿ ಕೊರಳಲ್ಲಿ ಹಾಕಿಕೊಂಡು ನಮನ ಸಲ್ಲಿಸಿದರು. ಹಿಂದೂ ಬಾಂಧವರೂ ಕೂಡಾ ಸಕ್ಕರೆ ಊದಬತ್ತಿ ಹಚ್ಚಿ ಭಕ್ತಿಯ ನಮನ ಸಲ್ಲಿಸಿ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದರು. ಕತಲ್‌ರಾತ್ರಿ ಅಗ್ನಿ ಕುಂಡಕ್ಕೆ ಹಾಯುವುದರೊಂದಿಗೆ ಹೇಳಿಕೆಗಳು ನಡೆದವು. ಮೊಹರಂ ಹಬ್ಬದ ಕೊನೆಯ ದಿನ ಮಸೀದಿಯ ಹಸೇನ್ ಹುಸೇನರ ಡೋಲಿಗಳು ಹಾಗೂ ಪಾಂಜಾಗಳು ಮೆರವಣಿಗೆಗಳ ಮೂಲಕ ಹೊಳಿಗೆ ಕಳುಹಿಸಲಾಯಿತು. ಸಂಜೆ ಮಸೀದಿಯ ಮುಂಭಾಗದಲ್ಲಿ ವಿಲೀನಗೊಂಡ ಪಾಂಜಾಗೂ ಡೋಲಿಗಳ ಮೆರವಣಿಗೆಗೆ ಗ್ರಾಮದ ಯುವಕರ ಹೆಜ್ಜೆಕುಣಿತ ಹಾಗೂ ಹಲಗೆ ಮೇಳದ ಯುವಕರ ತಂಡಗಳು ಮೊಹರಂ ಹಬ್ಬಕ್ಕೆ ಕಳೆಕಟ್ಟಿದವು. ನಂತರ ರಾತ್ರಿ ಊರ ಮುಂದಿನ ಬಾವಿಗೆ ತೆರಳಿ ಮೆರವಣಿಗೆಯ ಮೂಲಕ ಸಾಗಿ ಪೂಜೆ ಮುಗಿಸಿ ಮುಸ್ಲಿಂ ಹಿರಿಯರು ಮರಳಿ ಮಸೀದಿಗೆ ಬರುವಾಗ ಹಸೇನ ಹುಸೇನ್‌ರು ಪ್ರಾಣ ತೆತ್ತ ಸಂಕೇತವಾಗಿ ಶೋಕ ಗೀತೆಗಳನ್ನು ಹಾಡಿದರು. ಮೊಹರಂ ಹಬ್ಬಕ್ಕೆ ಹುಲಿ ವೇಷ, ಹಳ್ಳೋಳ್ಳಿ ಬವ್ವ, ವೇಷಧಾರಿಗಳು ಮೆರಗು ನೀಡಿದವು, ಮೆರವಣಿಗೆ ಉದ್ದಕ್ಕೂ ಹಲಿಗೆಯ ನಾದಕ್ಕೆ ಯುವಕರು ಯುವಕರು ಕುಣಿದು ಕುಪ್ಪಳಿಸಿ ಹರ್ಷಪಟ್ಟರು.
ಮೊಹರಂ ಅಚರಣೆಯಲ್ಲಿ, ತಿಮ್ಮಾಪುರ ಗ್ರಾಮವು ಸೇರಿದಂತೆ ಸಮೀಪದ ಮರೋಳ ಗ್ರಾಮದ ನೆಲೆಸಿರುವ ಹದಿನೈದು ಕುಟುಂಬಗಳು ಪ್ರತೀ ವರ್ಷ ಮೊಹರಂ ಆಚರಣೆಯಲ್ಲಿ, ಭಾಗವಹಿಸುತಿದ್ದೇವೆ ಎಂದು ಮುರೊಳ ಗ್ರಾಮದ ಗುತ್ತಿಗೆದಾರ ಶಿವಪ್ಪ ಗೊಂಡಿ ಪತ್ರಿಕೆಗೆ ತಿಳಿಸಿದರು. ಮೊಹರಂ ಆಚರಣೆಯಲ್ಲಿ, ಪುಣೆ ಬೆಂಗಳೂರು ಸೇರಿದಂತೆ ವಿವಿಧ ಕಡೆಯಿಂದ ಜನಸ್ತೋಮ ಭಾಗವಹಿಸಿದ್ದರು.
- ಕರುನಾಡ ಕಂದ



















