ಬಳ್ಳಾರಿ/ ಕಂಪ್ಲಿ : ರಾಜ್ಯಾದ್ಯಂತ ನರೇಗಾ ಯೋಜನೆಯಡಿ ಹೊರ ಸಂಪನ್ಮೂಲದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ 6 ತಿಂಗಳ ಬಾಕಿ ವೇತನ ನೀಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಮಹಾತ್ಮಾಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿ ಪಟ್ಟಣದ ತಾಲೂಕು ಪಂಚಾಯಿತಿ ಕಛೇರಿ ಮುಂಭಾಗದಲ್ಲಿ ಅಸಹಕಾರ ಚಳುವಳಿ ಮಂಗಳವಾರ ನಡೆಸಿದರು.
ನಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮೇಶ ಮಾತನಾಡಿ, ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ. ಕಳೆದ 6 ತಿಂಗಳಿಂದ ವೇತನ ಇಲ್ಲದ ಪರಿಣಾಮ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸಾಲ ಸೂಲ ಮಾಡಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಕಾಲದಲ್ಲಿ ವೇತನ ಪಾವತಿಯಾಗದೆ ಇರುವುದರಿಂದ ಆರ್ಥಿಕ ಸಂಕಷ್ಟವಾಗಿದೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಅನುದಾನ ಬಂದಿದ್ದು, ರಾಜ್ಯ ಸರ್ಕಾರದಿಂದಲೂ ಸಹ ಅನುದಾನ ಬಿಡುಗಡೆಯಾಗಿದೆ. ಆದರೆ, ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದೆ ಎಂಬ ಮಾಹಿತಿ ನೀಡಿರುತ್ತಾರೆ. ಆದರೆ, ಹೊಸ ತಂತ್ರಾಂಶದಲ್ಲಿ ವೇತನ ಪಾವತಿ ಮಾಡಲು ತಾಂತ್ರಿಕ ಸಮಸ್ಯೆಯಿಂದ ವೇತನ ಪಾವತಿ ವಿಳಂಬವಾಗುತ್ತಿದೆ. ಆದ್ದರಿಂದ ವೇತನ ಪಾವತಿಯಾಗಬೇಕು. ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ನಡೆಸಲಾಗುವುದು. ಕೂಡಲೇ ತಂತ್ರಾಂಶದ ಸಮಸ್ಯೆ ಬಗೆಹರಿಸಿ, ವೇತನ ಪಾವತಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂಗಮೇಶ, ಟಿಎಇ ಸಿಬ್ಬಂದಿಗಳಾದ ತಿಪ್ಪೇಶ್, ಲೋಕೇಶ, ಅಂಜಿನೇಯ್ಯ, ಶಿಲ್ಪ, ಹೊನ್ನೂರಮ್ಮ ರಂಜಿನಿ, ಮಂಜುಳಾ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















