ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||”
ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಂಕರ. ಗುರುವೇ ನಿಜವಾದ ಪರಮ ಬ್ರಹ್ಮ. ಅಂತಹ ಗುರುವಿಗೆ ನಾನು ನಮಿಸುತ್ತೇನೆ.
ಗುರು ಪೂರ್ಣಿಮೆಯಂದು ಶಿಷ್ಯರು ಗುರುಗಳಿಗೆ ನಮನ ಸಲ್ಲಿಸುತ್ತಾರೆ.
ಗುರು ಎಂಬ ಪದವು ಸಂಸ್ಕೃತದ ಮೂಲ ಪದಗಳಾದ ಗು ಮತ್ತು ರು ಗಳಿಂದ ಬಂದಿದೆ . ಗು ಎಂದರೆ “ಕತ್ತಲೆ” ಅಥವಾ “ಅಜ್ಞಾನ”, ಮತ್ತು ರು ಎಂದರೆ “ಹೋಗಲಾಡಿಸುವವನು”. ಆದ್ದರಿಂದ, ಗುರು ಎಂದರೆ ಕತ್ತಲೆ ಅಥವಾ ಅಜ್ಞಾನವನ್ನು ಹೋಗಲಾಡಿಸುವವನು ಎನ್ನುವ ಅರ್ಥ.
ಗುರು ಪೂರ್ಣಿಮೆಯು ವೇದಗಳನ್ನು ಮಹಾನ್ ಗ್ರಂಥವಾದ ಮಹಾಭಾರತವನ್ನು ರಚಿಸಿದ ಮಹರ್ಷಿ ವೇದ ವ್ಯಾಸರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ದಿನವನ್ನು ವ್ಯಾಸ ಪೂರ್ಣಿಮೆ ಅಥವಾ ಆಷಾಢ ಪೂರ್ಣಿಮೆ ಗುರು ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಕೆಲವರ ನಂಬಿಕೆಗಳ ಪ್ರಕಾರ ಈ ದಿನ ಶಿವನು ಸಪ್ತಋಷಿಗಳಿಗೆ ಜ್ಞಾನವನ್ನು ಹಂಚಿದನು ಅದಕ್ಕಾಗಿ ಶಿವನನ್ನು ಆದಿಗುರು ಅನ್ನುತ್ತಾರೆ. ಬೌದ್ಧಧರ್ಮ ದವರು ಈ ದಿನದಂದು ಭಾರತದ ಉತ್ತರಪ್ರದೇಶದ ಸಾರಾನಾಥಾದಲ್ಲಿ ಗೌತಮ ಬುದ್ಧರು ಮೊದಲ ಉಪದೇಶ ನೀಡಿದ ದಿನವೆಂದು ಹಬ್ಬದ ರೂಪದಲ್ಲಿ ಆಚರಿಸುತ್ತಾರೆ .ಜೈನ ಧರ್ಮದ ಪೂಜ್ಯ ವ್ಯಕ್ತಿ ಮಹಾವೀರನು ತನ್ನ ಮೊದಲ ಅನುಯಾಯಿಯನ್ನು ಪಡೆದ ಸಂದರ್ಭವನ್ನು ಜೈನರು ಗೌರವಿಸುತ್ತಾರೆ, ಇದು ಅವರ ಆಧ್ಯಾತ್ಮಿಕ ಪ್ರಯಾಣ ಮತ್ತು ಜೈನ ಧರ್ಮದ ಹರಡುವಿಕೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.
ಆರ್ಯಕಾಲದ ಶಿಕ್ಷಣವು ಅಂದು ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿತ್ತು. ನಂತರ ಕ್ಷತ್ರಿಯರು ವೈಶ್ಯರು ಶಿಕ್ಷಣ ಪಡೆಯುವಂತಾಯಿತು. ಮೊದಲೆಲ್ಲಾ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರು ಶಿಷ್ಯರು ಗುರುವಿನ ಜೊತೆಯಲ್ಲಿರಬೇಕಾಗುತ್ತಿತ್ತು. ಗುರುವಿನ ಆಜ್ಞಾ ಪಾಲಾನೆಗಾಗಿ ಸದಾ ಸಿದ್ಧರಾಗಿರಬೇಕಿತ್ತು. ಶಿಷ್ಯರು ಯೋಗ್ಯ ಗುರುಗಳಿಗಾಗಿ ಬಹು ದೂರದವರೆಗೆ ಪ್ರವಾಸ ಮಾಡಿ ಉತ್ತಮ ಗುರುಗಳ ಸಾನಿಧ್ಯದಲ್ಲಿ ಇರುತ್ತಿದ್ದರು. ಕಾಲ ಸರಿದಂತೆ ಆಧುನಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಿತು. ಗುರುವಿನ ಸ್ಥಾನ ಶ್ರೇಷ್ಠ. ಧರ್ಮಗ್ರಂಥಗಳ ಪ್ರಕಾರ, ಗುರುವು ಹೊಳೆಯುವ ಚಂದ್ರನಂತಿದ್ದು, ಅವರು ಕತ್ತಲೆಯಲ್ಲಿ ಬೆಳಕನ್ನು ನೀಡುವ ಮೂಲಕ ಮಾರ್ಗದರ್ಶನ ನೀಡುತ್ತಾರೆ. ಗುರುವು ಜೀವನದ ಮಾರ್ಗವನ್ನು ಬೆಳಗಿಸುತ್ತಾನೆ ಮತ್ತು ನಿಜವಾದ ಆತ್ಮವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಾನೆ.ಗುರುಅಜ್ಞಾನವನ್ನು ಹೋಗಲಾಡಿಸಿ, ನೀವು ಏನೆಂದು ಅರ್ಥಮಾಡಿಕೊಳ್ಳುವಂತೆ ಮಾಡುತ್ತಾನೆ. ಒಂದೇ ಅಕ್ಷರ ಕಲಿಸಿದರು ಅವರು ಗುರುಗಳೇ ಆಗುತ್ತಾರೆ. ಭಾರತದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಂಡಲದಲ್ಲಿ ಗುರುಗ್ರಹ ಅಧ್ಭುತ ಸ್ಥಾನವಿದೇ ಹಾಗೇ ಜೀವನದಲ್ಲೂ ಗುರುಗಳ ಮಾರ್ಗದರ್ಶನದಿಂದ ಬದುಕನ್ನ ಸಾರ್ಥಕ ಮಾಡಿಕೊಂಡವವರೂ ಅನೇಕರಿದ್ದಾರೆ.
ಆದಿ ಶಂಕರ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ಗೌತಮ ಬುದ್ಧ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮತ್ತು ಇನ್ನೂ ಅನೇಕ ಪ್ರಸಿದ್ಧ ಗುರುಗಳು ತಮ್ಮ ಬೋಧನೆಗಳು, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನದ ಮೂಲಕ ಪ್ರಪಂಚದ ಮೇಲೆ ಅಳಿಸಲಾಗದ ಛಾಪನ್ನು ಬಿಟ್ಟಿದ್ದಾರೆ ಲಕ್ಷಾಂತರ ಜನರಿಗೆ ಜ್ಞಾನೋದಯ ಮತ್ತು ಆತ್ಮಸಾಕ್ಷಾತ್ಕಾರವನ್ನು ಪಡೆಯುವ ಮಾರ್ಗವನ್ನು ಬೆಳಗಿಸಿದ್ದಾರೆ ಅವರ ಪರಂಪರೆಗಳು ಪ್ರಪಂಚದಾದ್ಯಂತ ಸತ್ಯಾನ್ವೇಷಕರಿಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತವೆ ಮಾನವ ಪ್ರಜ್ಞೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಅನ್ವೇಷಣೆಯ ಮೇಲೆ ಗುರುಗಳು ಬೀರಬಹುದಾದ ಆಳವಾದ ಪ್ರಭಾವವನ್ನು ಪ್ರದರ್ಶಿಸುತ್ತವೆ.
ಗುರುವಿಂದ ದೈವಗಳು ಗುರುವಿಂದ ಬಂಧುಗಳು
ಗುರುವಿಂದಲೇ ಸಕಲ ಪುಣ್ಯಂಗಳು ಲೋಕಕ್ಕೆ
ಗುರುವೀಗ ದೈವ ಸರ್ವಜ್ಞ ||
- ರೇಷ್ಮಾ ಶೆಟ್ಟಿ , ಕುಂದಾಪುರ



















