ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿರ್ಮಾಣವಾಗುತ್ತಿರುವ ಕೇಣಿ ಬಂದರು ದೇಶದ ಮಾದರಿ ಬಂದರುಗಳಲ್ಲಿ ಒಂದಾಗಲಿದೆ ಎಂದು ಕೇಣಿ ಬಂದರು ಯೋಜನಾ ನಿರ್ದೇಶಕ ಭರಮಪ್ಪ ಕುಂಟಗೇರಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಈ ಮಹತ್ವಾಕಾಂಕ್ಷೆಯ ಯೋಜನೆಯು ಜಿಲ್ಲೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಭಾರೀ ಕೊಡುಗೆ ನೀಡಲಿದ್ದು, ಸ್ಥಳೀಯರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದರು.
ಕೇಣಿ ಬಂದರನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಲಿದೆ. ಬಂದರಿಗೆ ಸಂಪರ್ಕ ಕಲ್ಪಿಸಲು 90 ಮೀಟರ್ ಅಗಲದ ರಸ್ತೆ ಮತ್ತು ರೈಲ್ವೆ ಸಂಪರ್ಕ ನಿರ್ಮಿಸಲಾಗುವುದು, ಈ ನಿರ್ಮಾಣ ಕಾರ್ಯಗಳಿಗೆ ಭಾವಿಕೇರಿ, ಅಂಕೋಲಾ, ಶಿರಕುಳಿ, ಮತ್ತು ಅಲಗೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 138 ರಿಂದ 140 ಎಕರೆ ಜಮೀನು ಅಗತ್ಯವಿದೆ. ಈ ಪ್ರದೇಶದಲ್ಲಿ ಸುಮಾರು 313 ಕುಟುಂಬಗಳಿದ್ದು, 75 ಮನೆಗಳು ಮತ್ತು ಶೆಡ್ ಗಳು ಇವೆ. ಈ ಎಲ್ಲಾ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಜಿಲ್ಲಾಡಳಿತವು ಸೂಕ್ತ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸುವ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭರಮಪ್ಪ ಕುಂಟಗೇರಿ ಸ್ಪಷ್ಟಪಡಿಸಿದರು. ಕೇಣಿಯಲ್ಲಿ ನಿರ್ಮಾಣವಾಗಲಿರುವ ಈ ಸರ್ವಋತು ಆಳ ಸಮುದ್ರದ ಗ್ರೀನ್ಫೀಲ್ಡ್ ಬಂದರು ಯೋಜನೆಯನ್ನು ರಾಜ್ಯ ಸರ್ಕಾರವು 2022-23ರ ಆರ್ಥಿಕ ವರ್ಷದ ಬಜೆಟ್ನಲ್ಲಿ ಘೋಷಿಸಿತ್ತು. ಭಾರತ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶನದಂತೆ ಕಾಮಗಾರಿ ಪ್ರಗತಿಯಲ್ಲಿದೆ. ಬಂದರನ್ನು ಅಭಿವೃದ್ಧಿಪಡಿಸಲು ಅಂತರರಾಷ್ಟ್ರೀಯ ಟೆಂಡರ್ ಅನ್ನು ಸೆಪ್ಟೆಂಬರ್ 2022ರಲ್ಲಿ ಆಹ್ವಾನಿಸಲಾಗಿತ್ತು.
ಕೇಣಿ ಬಂದರಿನಲ್ಲಿ ಬ್ರೇಕ್ವಾಟರ್, ಚಾನೆಲ್, ಮೂರು ಬರ್ತ್ಗಳು, ಹೂಳೆತ್ತುವಿಕೆ, ಅಪ್ರೋಚ್ ಚಾನೆಲ್, ಟರ್ನಿಂಗ್ ಸರ್ಕಲ್, ಸಂಪರ್ಕ ಕಾರಿಡಾರ್, ರಸ್ತೆ ಮತ್ತು ರೈಲ್ವೆ ಮಾರ್ಗಗಳು ಇರಲಿವೆ. ಪ್ರಸ್ತುತ, ಕರ್ನಾಟಕದಲ್ಲಿ ಆಮದು ಮತ್ತು ರಫ್ತು ಮಾಡುವ ಸರಕುಗಳನ್ನು ಬೇರೆ ರಾಜ್ಯಗಳ ಬಂದರುಗಳಿಂದ ಹೆಚ್ಚಿನ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಕೇಣಿ ಬಂದರು ಅಭಿವೃದ್ಧಿಯಿಂದ ಸರಕುಗಳ ಆಮದು ಮತ್ತು ರಫ್ತಿನ ವೆಚ್ಚದಲ್ಲಿ ಗಣನೀಯ ಉಳಿತಾಯವಾಗಲಿದೆ. ಇದು ರಾಜ್ಯದ ಜಿಎಸ್ಟಿ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಒಟ್ಟು 4200 ಕೋಟಿ ರೂ. ವೆಚ್ಚದಲ್ಲಿ ಕೇಣಿ ಬಂದರು ನಿರ್ಮಾಣಕ್ಕೆ ಜೆ. ಎಸ್. ಡಬ್ಲ್ಯೂ ಕಂಪನಿ ಹೂಡಿಕೆ ಮಾಡಲು ಮುಂದಾಗಿದೆ ಮತ್ತು ಈಗಾಗಲೇ ಟೆಂಡರ್ ಪಡೆದುಕೊಂಡಿದೆ.
ಈ ಬಂದರು ಸಂಪೂರ್ಣವಾಗಿ ಸಮುದ್ರದಲ್ಲಿ, ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ. ಆರಂಭಿಕ ವರ್ಷಗಳಲ್ಲಿ ಕೇಣಿ ಬಂದರು ಜೆ ಎಸ್ ಡಬ್ಲ್ಯೂ ಕಂಪನಿಯ ಅಧೀನದಲ್ಲಿರಲಿದೆ, ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಹರಿದು ಬರಲಿದೆ. 30 ವರ್ಷಗಳ ನಂತರ, ಕೇಣಿ ಬಂದರು ಕರ್ನಾಟಕ ಮೆರಿಟೈಮ್ ಬೋರ್ಡ್ಗೆ ಹಿಂತಿರುಗಲಿದೆ.
ಜೆ ಎಸ್ ಡಬ್ಲ್ಯೂ ಸಾರ್ವಜನಿಕ ಸಂಪರ್ಕಾಧಿಕಾರಿ ರೇಷ್ಮಾ ಉಲ್ಲಾಳ ಮಾತನಾಡಿ, ಬಂದರು ನಿರ್ಮಾಣದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದರು ಆಧಾರಿತ ಕೈಗಾರಿಕೆಗಳು ಉತ್ತೇಜನ ಪಡೆಯಲಿವೆ. ಇದು ಕರಾವಳಿ ಪ್ರದೇಶ ಮತ್ತು ರಾಜ್ಯದ ಕೈಗಾರಿಕೆಗಳ ಲಾಭಾಂಶವನ್ನು ಸುಧಾರಿಸುವುದರ ಜೊತೆಗೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಕರಾವಳಿ ಪ್ರದೇಶ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ನೆರವಾಗಲಿದೆ. ಕೇಣಿ ಬಂದರಿನ ಅಭಿವೃದ್ಧಿಯು ಕರಾವಳಿ ಪ್ರದೇಶ ಮತ್ತು ಒಳನಾಡಿನ ಆರ್ಥಿಕ ಸ್ಥಿತಿಯ ದೀರ್ಘಕಾಲೀನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಬಂದರು ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಎಂ. ವಿ. ಪ್ರಸಾದ್ ಮತ್ತು ವಿನಾಯಕ ನಾಯ್ಕ ಉಪಸ್ಥಿತರಿದ್ದರು.
ವರದಿ ಸುಶಾಂತ್ ಭೋವಿ



















