ಬಳ್ಳಾರಿ / ಕಂಪ್ಲಿ : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರ ಹಿನ್ನಲೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ, ಕರ್ನಾಟಕ ಜನಶಕ್ತಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆ ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಂಪ್ಲಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಉದ್ಭವ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಕಾರ್ಮಿಕ ವಿರೋಧ ಸರ್ಕಾರಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಮಾತನಾಡಿ, ಕೇಂದ್ರ ಸರ್ಕಾರ ವೇತನ ಸಂಹಿತೆಯಲ್ಲಿ 4, ಕೈಗಾರಿಕಾ ಸಂಹಿತೆಯಲ್ಲಿ 3, ಔದ್ಯೋಗಿಕ ಸುರಕ್ಷತೆ, ಆರೋಗ್ಯದಡಿಯಲ್ಲಿ 13, ಸಾಮಾಜಿಕ ಭದ್ರತಾ ಸಂಹಿತೆಯಡಿ 9 ಸೇರಿದಂತೆ ಒಟ್ಟು 29 ಕಾನೂನುಗಳನ್ನು ತಿದ್ದುಪಡಿಗೆ ರೂಪಿಸಲಾಗಿದ್ದು, ಈ ಎಲ್ಲಾ ಕಾನೂನುಗಳು ಅಸಂಘಟಿತ ಮತ್ತು ಕಾರ್ಮಿಕರ ಹಿತಾಶಕ್ತಿಯನ್ನು ಕಡೆಗಣಿಸಿವೆ ಎಂದು ದೂರಿದರು.
ದಿನಕ್ಕೆ 600 ರೂ. ಗಳ ವೇತನವನ್ನು ತಿರಸ್ಕರಿಸಿದೆ. ಯಾವಾಗ ಬೇಕಾದರೂ ಕಾರ್ಖಾನೆ ತೆರೆದು ಮುಚ್ಚುವ ಕಾನೂನು ಕಾರ್ಮಿಕರಿಗೆ ಮಾರಕವಾಗಿದೆ. ರೈತರ ಬೆಂಬಲ ಬೆಲೆ ಖಾತ್ರಿ, ಬಲವಂತದ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸಿದ್ದು, ಮುಂದಿನ ದಿನದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಂಡಿ ಬಸವರಾಜ್, ವಸಂತರಾಜ್ ಕಹಳೆ, ಹೊನ್ನೂರಸಾಬ್, ನಾಗರಾಜ್, ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಎಂದಿನಂತೆ ಅಂಗಡಿ ಮುಂಗಟ್ಟುಗಳು ಭಾರತ್ ಬಂದ್‌ಗೆ ಕರೆ ನೀಡಿದ ಹಿನ್ನಲೆ ಕಂಪ್ಲಿ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಬಸ್ ಸೇರಿದಂತೆ ವಾಹನಗಳ ಸಂಚಾರ ನಡೆಯಿತು. ವ್ಯಾಪಾರ ಮತ್ತು ವಹಿವಾಟಿಗೆ ಯಾವುದೇ ಬಿಸಿ ತಟ್ಟಲಿಲ್ಲ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಹೂವು, ಹಣ್ಣಿನ ಅಂಗಡಿಗಳು ತೆರೆದಿರುವುದು ಕಂಡು ಬಂತು. ಇದರ ನಡುವೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕಂಪ್ಲಿಯಲ್ಲಿ ಪ್ರತಿಭಟನೆ ನಡೆಸಿ, ಬಂದ್‌ಗೆ ಬೆಂಬಲ ನೀಡಿದರು.
ವರದಿ: ಜಿಲಾನಸಾಬ್ ಬಡಿಗೇರ



















