ಬೆಳಗಾವಿ: ಕರ್ನಾಟಕದಿಂದ ಗೋವಾಕ್ಕೆ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಅನಮೋಡ ಬಳಿ ಬಂಧಿಸಿದ್ದಾರೆ.
ಬಂಧಿತರಿಂದ ₹6,75,500 ಮೌಲ್ಯದ 1,930 ಕೆ.ಜಿ. ಗೋಮಾಂಸ ಮತ್ತು ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿಯ ಸಿದ್ದಪ್ಪ ಬಾಳಪ್ಪ ಬದ್ದೂರ (ಚಾಲಕ) ಮತ್ತು ರಾಜು ಬಾಳು ನಾಯಕ (ಕ್ಲೀನರ್) ಬಂಧಿತ ಆರೋಪಿಗಳು. ಈ ಪ್ರಕರಣದ ಪ್ರಮುಖ ಆರೋಪಿ ಬೆಳಗಾವಿಯ ಅಮೋಲ್ ಮೋಹನದಾಸ ಎಂಬಾತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೀಗೆ:
ರಾಮನಗರ ಠಾಣೆಯ ಪಿಎಸ್‌ಐ ಮಹಾಂತೇಶ ನಾಯಕ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇತ್ತೀಚೆಗೆ ಅನಮೋಡ ಘಟ್ಟದಲ್ಲಿ ರಸ್ತೆ ಕುಸಿತದಿಂದಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಪಿಎಸ್‌ಐ ಮಹಾಂತೇಶ ನಾಯಕ ಮತ್ತು ತಂಡ ರಾಮನಗರದಲ್ಲಿ ಗಸ್ತು ತಿರುಗುತ್ತಾ, ಗೋವಾ ಕಡೆಗೆ ಹೋಗುವ ವಾಹನಗಳನ್ನು ತಡೆದು ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು.ಈ ವೇಳೆ, KA 25 AB 6640 ಸಂಖ್ಯೆಯ ಟಾಟಾ ಯೋಧಾ ವಾಹನವೊಂದು ಗೋವಾ ಕಡೆಗೆ ಸಾಗಲು ಯತ್ನಿಸಿದೆ, ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದಾಗ, ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಅನುಮಾನಗೊಂಡ ಪೊಲೀಸರು ಕೂಡಲೇ ವಾಹನವನ್ನು ತಡೆದು ನಿಲ್ಲಿಸಿ, ಚಾಲಕ ಮತ್ತು ಕ್ಲೀನರ್‌ನನ್ನು ವಿಚಾರಣೆ ನಡೆಸಿದ್ದಾರೆ. ಪರಿಶೀಲಿಸಿದಾಗ, ವಾಹನದಲ್ಲಿ ಬರೋಬ್ಬರಿ 1,930 ಕೆ.ಜಿ. ಗೋಮಾಂಸ ಇರುವುದು ಪತ್ತೆಯಾಗಿದೆ. ಕೂಡಲೇ ಇಬ್ಬರು ಆರೋಪಿಗಳನ್ನು ಬಂಧಿಸಿ, ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಆಕ್ರಮ ಗೋಮಾಂಸ ಸಾಗಾಟದ ಜಾಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವರದಿ ಬಾಳೇಶ ದಂಡಿನ್



















