ಬಳ್ಳಾರಿ/ ಕಂಪ್ಲಿ : ಪರಶಿಷ್ಟ ಜಾತಿ ಮತ್ತು ದಲಿತ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಭೂಮಿಗಳ 50,53 ಮತ್ತು 58 ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಕಂಪ್ಲಿ ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಗ್ರೇಡ್-2 ತಹಸಿಲ್ದಾರ್ ಎಂ. ಆರ್. ಷಣ್ಮುಖಪ್ಪನವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಯ ಪದಾಧಿಕಾರಿಗಳು ಇಂದು ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಗುಲ್ಬರ್ಗಾ ವಿಭಾಗೀಯ ಸಂಘಟನಾ ಸಂಚಾಲಕ ಕೆ.ಮೆಹಬೂಬ್ ಮಾತನಾಡಿ, ಭೂಮಿ ಉಳ್ಳವರಿಗೆ ಸಾಮಾಜಿಕ ಘಟನೆತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರನ್ನು ನೀಡುತ್ತದೆ. ವೈದಿಕ ಧರ್ಮ ಅರ್ಥಾತ್ ಬ್ರಾಹ್ಮಣ ಧರ್ಮ ತಲತಲಾಂತರಗಳಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದೆ. ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತ ಚಳುವಳಿ, ಭೂಮಿ, ಶಿಕ್ಷಣ, ಉದ್ಯೋಗ ಮುಂತಾದ ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ಆಳುವ ಪ್ರಭುತ್ವದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಾ ಬಂದಿವೆ. ಕಳೆದ 4 ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು.
70ರ ದಶಕದಲ್ಲಿ ದಿವಂಗತ ಬಿ. ಬಸವಲಿಂಗಪ್ಪನವರ ದೂರದೃಷ್ಟಿಯ ಫಲವಾಗಿ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಜಾತಿವಾದಿಗಳ ಹಾಗೂ ಅಧಿಕಾರ ಶಾಹಿಯ ಮಸಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಜಮೀನುಗಳ ಪ್ರಕರಣದಲ್ಲಿ ದಲಿತ ಸಮುದಾಯಗಳು ನ್ಯಾಯಾಲಗಳಿಗೆ ಅಲೆಯುತ್ತಾ ವಂಚನೆಗೊಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಸಂಸ ರಾಜ್ಯ ಸಮಿತಿ ಹೆಂಡಬೇಡ,ಭೂಮಿ ಬೇಕು ಎನ್ನುವ ಘೋಷಣೆಯನ್ನು 80 ದಶಕದಲ್ಲಿ ಮೊಳಗಿಸಿತು. ಅದೇ ರೀತಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯಭೂಮಿ, ಸಾಮಾಜಿಕ ಅರಣೀಕರಣ,ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸಿರುವ ನೆಪದಲ್ಲಿ ಒಕ್ಕಲೆಬ್ಬಿಸುವುದನ್ನು ಖಂಡಿಸುತ್ತೇವೆ, ದರಖಾಸ್ತು ಭೂಮಿ ಸಕ್ರಮೀಕರಣ ಶಾಸಕರುಗಳ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ನಿರ್ಲಕ್ಷದಿಂದ ಸಭೆಗಳು ನಡೆಯದೇ ಫಾರಂ 50,53,57 ಅರ್ಜಿಗಳನ್ನು ಸಲ್ಲಿಸಿರುವ ದಲಿತ,ತಳ ಸಮುದಾಯಗಳ ಅರ್ಜಿಗಳು ರಾಶಿಗಟ್ಟಲೇ ಕೊಳೆಯುತ್ತಾ ಬಿದ್ದಿವೆ. ಜೊತೆಗೆ ಜಿಪಿಎಸ್ ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಹೇಳಿ ಸಾವಿರಾರು ಅರ್ಜಿಗಳನ್ನು ತಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಲು ಹಾಗೂ ದಲಿತ ಭೂಮಿ,ವಸತಿ ಹಕ್ಕು ಮತ್ತು ಇತರೆ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಇಂದು ಪ್ರಥಮ ಹಂತದಲ್ಲಿ ಭೂಮಿ ಮಂಜೂರಾತಿಗಾಗಿ ಸಾಂಕೇತಿಕವಾಗಿ ಪ್ರತಿಭಟನಾ ಧರಣಿ ಮಾಡುವ ಮೂಲಕ ಮನವಿಯನ್ನು ಸಲ್ಲಿಸುತ್ತಿದ್ದೇವೆಂದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಪದಾಧಿಕಾರಿಗಳಾದ ಫ್ರಾನ್ಸಿಸ್, ಕಾರೇಕಲ್ ಕೃಷ್ಣ,ರಾಜೇಶ್, ಎನ್.ರುದ್ರಪ್ಪ ಹಾಗೂ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















