ಬಳ್ಳಾರಿ/ ಕಂಪ್ಲಿ : ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಅಗತ್ಯ ಸೇವೆಗಳ ಕಾನೂನು ಅಡಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎ.ಮಂಜುನಾಥ ರೆಡ್ಡಿ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯು ಗುಣ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರ ಸಭೆಯಲ್ಲಿ ಮಾತನಾಡಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳು ಆಹಾರ ಭದ್ರತೆ ಕಾಯ್ದೆಯಡಿಯಲ್ಲಿ ಬರುವುದರಿಂದ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಪೂರೈಸಬೇಕು ಹಾಗೂ ಅಧಿಕೃತ ರಸೀದಿಗಳನ್ನೇ ನೀಡಬೇಕು ಎಂದು ತಿಳಿಸಿದ ಅವರು ಒಂದು ವೇಳೆ ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಿದರೆ ಅಂತವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಅವರ ಮಾರಾಟ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದರು.
ಅಧಿಕೃತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳಲ್ಲಿ ಕಳಪೆ ಕಂಡು ಬಂದರೆ ಅಂತಹ ಕಂಪನಿಗಳ ವಿರುದ್ಧ ಕ್ರಮಗಳನ್ನು ಕೈಗೊಂಡು ರೈತರಿಗೆ ಪರಿಹಾರ ಕೊಡಿಸಲು ಅನುಕೂಲವಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ ತಾಲ್ಲೂಕಿನಲ್ಲಿರುವ ಎಲ್ಲಾ ಅಧಿಕೃತ ಕೃಷಿ ಪರಿಕರ ವಿತರಕರು ಹಾಗೂ ಮಾರಾಟಗಾರರು ಸರ್ಕಾರದಿಂದ ಅಧಿಕೃತ ಪರವಾನಿಗೆ ಪಡೆದು ಬಿತ್ತನೆಬೀಜ,ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಅನಧಿಕೃತವಾಗಿ ಮಾರಾಟ ಮಾಡಿದರೆ ಕಾನೂನು ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಮಾರಾಟಗಾರರು ಅಧಿಕೃತ ಕಂಪನಿಗಳ,ಸರ್ಕಾರ ಗೊತ್ತುಪಡಿಸಿದ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ. ವಿ. ಗೌಡ ಮಾತನಾಡಿ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ದಿಢೀರ್ ಅಂಗಡಿಗಳನ್ನು ತಪಾಸಣೆ ಮಾಡುವ ಮೂಲಕ ರಸಗೊಬ್ಬರ, ಬಿತ್ತನೆಬೀಜ ಮತ್ತು ಕೀಟನಾಶಕಗಳ ಪರಿಶೀಲನೆ ಮಾಡಬೇಕು. ಉತ್ತಮ ಗುಣಮಟ್ಟದ ಕೃಷಿ ಪರಿಕರಗಳು ರೈತರಿಗೆ ಸಿಗುವಂತೆ ನಿಗಾ ವಹಿಸಬೇಕೆಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಡಾ.ಅಭಿಲಾಷ ಸಿ.ಆರ್.,ಕೃಷಿ ಅಧಿಕಾರಿ ಕೆ.ಸೋಮಶೇಖರ್, ಸಹಾಯಕ ಕೃಷಿ ಅಧಿಕಾರಿ ಟಿ.ಜ್ಯೋತಿ,ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರ ಸಂಘದ ಪದಾಧಿಕಾರಿಗಳಾದ ಕಲ್ಗುಡಿ ವಿಶ್ವನಾಥ್ ಸೇರಿದಂತೆ ಇತರರು ಮಾತನಾಡಿದರು.
ಸಭೆಯಲ್ಲಿ ತಾಲ್ಲೂಕು ಕೃಷಿ ಸಮಾಜದ ಅಧ್ಯಕ್ಷ ನಾರಾಯಣಪ್ಪ, ರೈತ ಮುಖಂಡರಾದ ಪಿ.ನಾರಾಯಣರೆಡ್ಡಿ, ತಿಮ್ಮಪ್ಪ ನಾಯಕ, ದಾಸರ ಮುರಾರಿ, ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರಾದ ರಾಕೇಶ್, ಬಾಗ್ರೇಚಾ, ಎಮ್ಮಿಗನೂರ ಎಳ್ಳರ‍್ತಿ ರಾಘವೇಂದ್ರರೆಡ್ಡಿ, ಮಂಜುನಾಥ್,ಉಳ್ಳೂರು ರಾಜಪ್ಪ ಸೇರಿದಂತೆ ಕಂಪ್ಲಿ ಪಟ್ಟಣದ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರು,ಕೃಷಿ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















