ಬೆಳಗಾವಿ/ ರಾಮದುರ್ಗ :ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೈಲ್ವೆ ಯೋಜನೆಗಳಲ್ಲಿ ಜಾರಿಗೆ ತರಬೇಕೆಂದು ಕಳೆದ 20 ವರ್ಷಗಳಿಂದ ಹೋರಾಟ ನಡೆದಿದೆ. ಈ ಹೋರಾಟದ ಭಾಗವಾಗಿ ಬಾಗಲಕೋಟದಿಂದ ಕುಡಚಿಯವರೆಗೆ ರೈಲ್ವೆ ಮಾರ್ಗ ಮಂಜೂರಾಗಿದ್ದು ಲೋಕಾಪೂರದವೆರೆಗೆ ಬಂದಿದೆ. ಮುಂದೆ ಕೆಲಸ ಪ್ರಾರಂಭವಾಗಿದೆ. ಇದೇ ಸಮಯದಲ್ಲಿ ಲೋಕಾಪೂರದಿಂದ ರಾಮದುರ್ಗಕ್ಕೆ ರೈಲ್ವೆ ಮಾರ್ಗ ಆಗಬೇಕೆಂದು ಸುಮಾರು ವರ್ಷಗಳಿಂದ ಹೋರಾಟ ನಡೆದಿದೆ.
ರಾಮದುರ್ಗ ಜನತೆಯ ಹೋರಾಟದ ಭಾಗವಾಗಿ 2019 ರಲ್ಲಿ ಸರ್ವೇಯೂ ನಡೆದಿದೆ. ಆದರೆ ಆ ಸಮದಯಲ್ಲಿ ಕೋವಿಡ್ ಬಂದಿರುವುದರಿಂದ ಸರ್ವೇ ಸರಿಯಾಗಿ ನಡೆದಿಲ್ಲ ಎಂದು ಹೋರಾಟ ಸಮಿತಿಯವರು ಹೇಳುತ್ತಾರೆ.
2024 ನವೆಂಬರ್ನಲ್ಲಿ ಬೃಹತ್ ಹೋರಾಟ ನಡೆಸಿ ಬೆಳಗಾವಿ ಜಿಲ್ಲೆಯ ಎಲ್ಲ ಚುನಾಯಿತು ಪ್ರತಿನಿಧಿಗಳಿಗೆ ಹಾಗೂ ಕೇಂದ್ರ-ರಾಜ್ಯ ರೈಲ್ವೆ ಸಚಿವರಿಗೆ ಮನವಿ ಅರ್ಪಿಸಲಾಗಿದೆ.
ಬೆಳಗಾವಿ ಕ್ಷೇತ್ರದ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ಇವರಿಗೆ ಲೋಕಾಪೂರದಿಂದ ಧಾರವಾಡಕ್ಕೆ ಏಕೆ ರೈಲ್ವೆ ಮಾರ್ಗ ಮಾಡಬೇಕೆಂದು ವಿವರವಾದ ಮಾಹಿತಿ ನೀಡಿ ಗಮನ ಸೆಳೆದಾಗ ಸಂಸದರು, ರಾಜ್ಯ ರೈಲ್ವೆ ಸಚಿವರಿಗೆ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿಯವರಿಗೆ ಕರೆದುಕೊಂಡು ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ, ಶಿರಸಂಗಿ, ಸವದತ್ತಿ ಯಲ್ಲಮ್ಮ ದೇವಸ್ಥಾನಗಳಿಗೆ ಬರುವ ಜನರ ಹಾಗೂ ಪ್ರವಾಸಿ ತಾಣದ ಬಗ್ಗೆ ಪ್ರಮುಖವಾಗಿ ಶಬರಿ ಕೊಳ್ಳ ಕುರಿತು ಹೇಳಿ ಒತ್ತಾಯಿಸಿದಾಗ ಸಾಮಾನ್ಯ ಸಮೀಕ್ಷೆಗೆ ಪುನರ್ ಪರಿಶೀಲನೆ ಮಾಡಬೇಕೆಂದು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವಿರವರು ನಿರ್ದೇಶನ ನೀಡಿದ್ದಾರೆ.
ಕೇಂದ್ರ ಸಚಿವರ ನಿರ್ದೇಶನದ ಭಾಗವಾಗಿ ಹುಬ್ಬಳ್ಳಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ದಿನಾಂಕ 16/07/2025 ರಂದು ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಸಮಿತಿಯ ಪರವಾಗಿ ಹಾಗೂ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಸಮಿತಿಯಿಂದ ಮನವಿ ಅರ್ಪಿಸಿ ಕೇಂದ್ರ ಸಚಿವರ ನಿರ್ದೇಶನದಂತೆ ತಾವು ಲೋಕಾಪೂರದಿಂದ ಧಾರವಾಡದವರೆಗಿನ ರೈಲ್ವೆ ಮಾರ್ಗದ ಕುರಿತು ಪುನರ್ ಪರಿಶೀಲನೆ ಮಾಡಿ ಸಮೀಕ್ಷೆ ಮಾಡಬೇಕೆಂದು ಒತ್ತಾಯಿಸಲಾಯಿತು. ಮನವಿ ಸ್ವೀಕರಿಸಿದ ಮುಖ್ಯ ವ್ಯವಸ್ಥಾಪಕರು ನಿಮ್ಮ ಮನವಿ ಮೇರೆಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಹೇಳಿದರು.
ಮನವಿ ನೀಡುವ ನಿಯೋಗದಲ್ಲಿ ಹೋರಾಟ ಸಮಿತಿಯ ಮುಖಂಡರಾದ ಕುತುಬುದ್ದಿನ್ ಖಾಜಿ, ಜಿ.ಎಂ.ಜೈನೆಖಾನ್, ಮಹೆಬೂಬ ಯಾದವಾಡ, ಎಸ್.ಜಿ.ಚಿಕ್ಕನರಗುಂದ, ಶಶಿಕಾಂತ ನೆಲ್ಲೂರ, ಡಿ.ಎಫ್.ಹಾಜಿ, ದಾದಾಪೀರ ಕೆರೂರ, ಸವದತ್ತಿ ಹೋರಾಟ ಸಮಿತಿಯ ಬಸವರಾಜ ಕಪ್ಪನ್ನವರ, ಶಂಕರಪ್ಪ ತೊರಗಲ್, ರಾಜಶೇಖರ ನಿಡೋಜಿ, ಬಾಗಲಕೋಟ ಸಮಿತಿಯ ಮೈನುದ್ದಿನ್ ಖಾಜಿ, ಶ್ರೀಮತಿ. ಮಂಜುಳಾ ಭೋಕರಿ, ಪ್ರೇಮಾ ರಾಠೋಡ ಮತ್ತು ಮಮತಾಜ ಸುತಾರ ಮುಂತಾದವರು ಇದ್ದರು.
- ಕರುನಾಡ ಕಂದ



















