ಅಕ್ಕನಾಗಮ್ಮ 12ನೆಯ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯ ಶರಣೆ. ಶಿವಶರಣೆ ಅಕ್ಕನಾಗಮ್ಮ ಬಸವಾದಿ ಶರಣರ ಸಾಕ್ಷಿ ಪ್ರಜ್ಞೆಯಾಗಿ ಇಡೀ ಶರಣ ಸಂಕುಲ ಹಾಗೂ ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರ ಮಹಿಳೆ ಬಸವಣ್ಣನವರಲ್ಲಿ ಮಹಾನ್ ವ್ಯಕ್ತಿತ್ವ, ಆತ್ಮ ಚೈತನ್ಯ ತುಂಬಿದವಳೇ ಈ ಶರಣೆ. ಬಸವಣ್ಣನವರ ಎಲ್ಲಾ ಹೋರಾಟಗಳಿಗೆ ಬೆಂಬಲವಾಗಿ ನಿಂತುವಳೇ ಅಕ್ಕ ನಾಗಮ್ಮ. ಬಸವಣ್ಣನವರ ಉಜ್ವಲ ಭವಿಷ್ಯ ನಿರ್ಮಾಣ ಮಾಡುವಲ್ಲಿ ಇವರ ತ್ಯಾಗ ಸೇವೆ ಅಮರ. ಶರಣರ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಇವರ ನಿಸ್ವಾರ್ಥ ಸೇವೆ ಅಜರಾಮರ. ಬಸವಣ್ಣನವರು ಜಗತ್ತಿನ ಮೊದಲ ವಿಚಾರವಾದಿ, ಶ್ರೇಷ್ಠ ಪ್ರಗತಿಪರ ಚಿಂತಕರಾಗಲು ಇವರು ನೀಡಿದ ಸಂಸ್ಕಾರವೇ ಪ್ರಮುಖ ಕಾರಣ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಅಕ್ಕನಾಗಮ್ಮ ಜೀವನದಲ್ಲಿ ಬಂದು ಹೋದ ಕಷ್ಟಗಳು ಲೆಕ್ಕವೇ ಇಲ್ಲ. ಅವರು ಎದುರಿಸಿದ ಸವಾಲುಗಳು, ಅವುಗಳನ್ನು ನಿರ್ವಹಿಸಿದ ರೀತಿ – ನೀತಿಗಳು, ಅವರ ಎಲ್ಲಾ ವಚನಗಳಲ್ಲಿ ಪ್ರತಿಬಿಂಬವಾಗಿವೆ. ಅಣ್ಣ ಬಸವಣ್ಣನವರ ಸ್ತುತಿಪರವಾದ ವಚನಗಳು, ಇದರ ಜೊತೆ ಜೊತೆಗೆ ಬಸವಾದಿ ಶರಣರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬರೆದ ವಚನಗಳು ಕಾಣಬಹುದು.
ಮಹಾಮನೆ ಮತ್ತು ಅನುಭವ ಮಂಟಪದ ಜೀವಾಳವಾಗಿ ಅನುಕರಣೆ ಸೇವೆಯನ್ನು ನೀಡಿದ ಶ್ರೇಯಸ್ಸು ಅಕ್ಕ ನಾಗಮ್ಮ ತಾಯಿಯವರಿಗೆ ಸಲ್ಲುತ್ತದೆ. ಕಲ್ಯಾಣ ಕ್ರಾಂತಿಯ ನಂತರ ಬೇರೆ ಬೇರೆ ದಿಕ್ಕಿನತ್ತ ಸಾಗಿದ ಶರಣದ ಗುಂಪುಗಳಲ್ಲಿ. ಅಕ್ಕ ನಾಗಮ್ಮ ನವರು ಸಹ ಒಂದು ಶರಣರ ಗುಂಪಿನ ನೇತೃತ್ವ ವಹಿಸಿ ಉಳವಿ ಕಡೆಗೆ ಪ್ರಯಾಣ ಬೆಳೆಸಿರುತ್ತಾರೆ. ಶರಣ ಹರಳಯ್ಯ ಮತ್ತು ಮಧುವರಸರ ಮರಣ ದಂಡನೆಯ ನಂತರ ಭುಗಿಲೆದ್ದ ಹಿಂಸಾಚಾರದ ಗೂಡಿನಲ್ಲಿ ಉಳಿದ ಶರಣರಿಗೆ ಮಾರ್ಗದರ್ಶನ ನೀಡಿ, ಧೈರ್ಯ ತುಂಬಿದ ಎದೆಗಾರಿಕೆ ಶರಣೆ ನಾಗಮ್ಮ ತಾಯಿಯವರದು.
ಕಲ್ಯಾಣದಿಂದ ಉಳಿವಿ ಕಡೆಗೆ ಪ್ರಯಾಣ ಹೊರಟಾಗ ವಚನಗಳ ಹಸ್ತ ಪ್ರತಿಗಳ ಕಟ್ಟುಗಳನ್ನು ಹೊತ್ತು ಶರಣರ ಪಡೆಯ ಮುಂದಾಗಳತ್ವ ವಹಿಸಿ , ಧೈರ್ಯದಿಂದ ಮುನ್ನಡೆಸಿದ ಕೀರ್ತಿ ಅಕ್ಕನಿಗೆ ಸಲ್ಲಲೇಬೇಕು. ಈ ರೀತಿ ಅನೇಕ ವಚನಗಳ ಹಸ್ತ ಪ್ರತಿಗಳು ಸಂರಕ್ಷಣೆ ಮಾಡುವಲ್ಲಿ ಅಕ್ಕ ನಾಗಮ್ಮ ತಾಯಿಯವರ ತ್ಯಾಗ ಬಹಳಷ್ಟು ದೊಡ್ಡದು ಎಂದರೆ ಖಂಡಿತವಾಗಿಯೂ ತಪ್ಪಾಗಲ್ಲ ಎನ್ನಬಹುದಾಗಿದೆ.
ಅಕ್ಕ ನಾಗಮ್ಮ ತಾಯಿಯವರ ವಚನಗಳಲ್ಲಿ ಆತ್ಮ ನಿವೇದನೆಯ ರೂಪ ಕಾಣುತ್ತದೆ. ಅನೇಕ ಶರಣರ ಬಲಿದಾಗೈದ ಸೇವೆಯನ್ನು ಅಕ್ಕನ ವಚನಗಳಲ್ಲಿ ನೋಡಬಹುದು. ಅನೇಕ ಶರಣರ ಕೂಡಾ ಅಕ್ಕನ ನಿಸ್ವಾರ್ಥ ಸೇವೆ ಕೊಂಡಾಡಿದಾರೆ. ಅವರುಗಳ ವಚನಗಳಲ್ಲಿ ದಾಖಲಿಸಿ , ಸ್ಮರಿಸಿದ್ದಾರೆ.
ಅಂತೆಯೇ ನನ್ನವ್ವೆ ನಾಗಾಯಿ ಎಂದು ಶರಣ ಮರುಳಶಂಕರದೇವರು ನುಡಿದರೆ, ನುಡಿದರೆ ಎನ್ನ ಮುದ್ದಾಡಿಸಿದರಯ್ಯ ಎಂದು ಕೋಲ್ ಶಾಂತಯ್ಯನವರು ತಿಳಿಸಿದ್ದಾರೆ. ಅಕ್ಕ ನಾಗಮ್ಮನ ಪ್ರಸಾದವನ್ನು ಕೊಂಡು ಎನ್ನ ಅಂತರಂಗ ಶುದ್ಧವಾಗಿತಯ್ಯ ಎಂದು ಶರಣೆ ಆಯ್ದಕ್ಕಿ ಲಕ್ಕಮ್ಮ ನವರು ಅವರ ವಚನದಲ್ಲಿ ದಾಖಲಿಸಿದ್ದಾರೆ.
ಬಸವಣ್ಣಪ್ರಿಯ ಚೆನ್ನಸಂಗಯ್ಯ ಎಂಬುದು ಅಕ್ಕನಾಗಮ್ಮ ತಾಯಿಯ ವಚನಾಂಕಿತ. ಸದ್ಯ 15 ವಚನಗಳು ದೊರೆತಿವೆ. ಅವುಗಳಲ್ಲಿ ಬಸವಣ್ಣನವರ ಸ್ತುತಿಪರವಾದವುಗಳೇ ಅಧಿಕ. ಜೊತೆಗೆ ಇತರ ಶರಣರ ಪ್ರಸ್ತಾಪವೂ ಇದೆ. ಆಕೆಯ ಬದುಕಿನಲ್ಲಿ ಬಂದೆರಗಿದ ಎಡರುಗಳು, ಅವುಗಳನ್ನು ಧೈರ್ಯದಿಂದ ಎದುರಿಸಿದ ರೀತಿ ಕೆಲವು ವಚನಗಳಲ್ಲಿ ಪ್ರತಿಧ್ವನಿಸಿವೆ.
(ಅವುಗಳಲ್ಲಿ ಪ್ರಮುಖವಾಗಿ ಇಲ್ಲಿ ಮೂರು ವಚನಗಳನ್ನು ಪ್ರಸ್ತಾಪಿಸಲಾಗಿದೆ)
ಬಸವಣ್ಣ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗಲ್ಲಾ ಪಸರಿಸಿತ್ತಲ್ಲಾ !
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು ?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ
ಪ್ರಾಣಲಿಂಗವಾಗಿ ಹೋದೆಯ ಸಂಗನಬಸವಣ್ಣಾ ?
ಶ್ರೀಗುರುವೆ ತಾಯಿತಂದೆಯಾಗಿ, ಲಿಂಗವೆ ಪತಿಯಾಗಿ,
ಜಂಗಮವೆ ಅತ್ತೆಮಾವಂದಿರಾಗಿ, ಶಿವಭಕ್ತರೆ ಬಾಂಧವರಾಗಿ,
ಸತ್ಯಸದಾಚಾರವೆಂಬ ಮನೆಗೆ ಕಳುಹಿದರಾಗಿ,
ಶರಣಸತಿ ಎಂಬ ನಾಮ ನಿಜವಾಯಿತ್ತು.
ಆದಂತೆ ಇರುವೆ, ಹಿಂದುಮುಂದರಿಯದೆ ನಡೆವೆ.
ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ,
ಬಸವಣ್ಣಪ್ರಿಯ ಚೆನ್ನಸಂಗಯ್ಯಾ ನಿಮ್ಮಡಿಗಳಿಗೆ.
ಎನ್ನ ಕುಲಸೂತಕವ ಕಳೆದಾತ ಬಸವಣ್ಣ.
ಎನ್ನ ಛಲಸೂತಕವ ಕಳೆದಾತ ಬಸವಣ್ಣ.
ಎನ್ನ ತನುಸೂತಕವ ಕಳೆದಾತ ಬಸವಣ್ಣ.
ಎನ್ನ ಮನಸೂತಕವ ಕಳೆದಾತ ಬಸವಣ್ಣ.
ಎನ್ನ ನೆನಹುಸೂತಕವ ಕಳೆದಾತ ಬಸವಣ್ಣ.
ಎನ್ನ ಭಾವಸೂತಕವ ಕಳೆದಾತ ಬಸವಣ್ಣ.
ಎನ್ನ ಅರುಹುಮರಹಿನ ಸಂದುಸಂಶಯವಬಿಡಿಸಿದಾತ ಬಸವಣ್ಣ.
ಎನ್ನ ತನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.
ತನ್ನ ಎನ್ನೊಳಗೆ ಇಂಬಿಟ್ಟುಕೊಂಡಾತ ಬಸವಣ್ಣ.
ನಿಜದ ನಿರ್ವಯಲ ಬಾಗಿಲ ನಿಜವ ತೋರಿದಾತ ಬಸವಣ್ಣ.
ಬಸವಣ್ಣಪ್ರಿಯ ಚೆನ್ನಸಂಗಯ್ಯನ ಹೃದಯಕಮಲದಲ್ಲಿ
ನಿಜ ನಿವಾಸಿಯಾಗಿರಿಸಿದ ಎನ್ನ ತಂದೆ ಸಂಗನಬಸವಣ್ಣನು.
ಹೀಗೆ ವಚನಗಳು ರಚಿಸಿ, ಶರಣರ ಆಶಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಕಲ್ಯಾಣದ ಮಹಾಮನೆ, ಅನುಭವ ಮಂಟಪಗಳಲ್ಲಿ ಅನನ್ಯ ಕಾರ್ಯಕ್ಷಮತೆಯನ್ನು ತೋರಿದ್ದಾರೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣ ಬಳಗದ ನೇತೃತ್ವ ವಹಿಸಿ ಉಳುವಿಗೆ ಬರುತ್ತಾಳೆ. ಚೆನ್ನಬಸವಣ್ಣನ ಐಕ್ಯದ ನಂತರ ಚಿಕ್ಕಮಗಳೂರು ಜಿಲ್ಲೆ ಎಣ್ಣೆಹೊಳೆ ತೀರದ ತರೀಕೆರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ಗೌರವ ನುಡಿ:
12ನೇಯ ಶತಮಾನದಲ್ಲಿ ಶರಣರ ವಚನ ಸಾಹಿತ್ಯ ಸಂರಕ್ಷಣೆಗಾಗಿ ಬಿಜ್ಜಳ ರಾಜನ ಆಡಳಿತದ ಎದುರಿಗೆ ಟೊಂಕ ಕಟ್ಟಿಕೊಂಡು ಹೋರಾಡಿದ ಧೀರೆ, ವಚನ ಹಾಗೂ ಲಿಂಗಾಯತ ಧರ್ಮ ರಕ್ಷಣೆಗೆ ಜೀವನಪೂರ್ತಿ ಗಂಧದ ಕೊರಡಿನಂತೆ ಜೀವತೇದ ಅಕ್ಕ ನಾಗಮ್ಮ ತಾಯಿಯವರ ಜೀವನ ಹೋರಾಟ ಇಂದಿನ ಸಮಾಜಕ್ಕೆ ದಾರಿದೀಪವಾಗಿದೆ.
ಲಿಂಗೈಕ್ಯ ಶಿಲಾಮಂಟಪ ರಕ್ಷಣೆ:
ಬಸವಣ್ಣನವರ ಸಹೋದರಿ ವಚನಕಾರ್ತಿ ಶಿವಶರಣೆ ಅಕ್ಕ ನಾಗಮ್ಮನವರ ಲಿಂಗೈಕ್ಯ ಶಿಲಾಮಂಟಪವು ಚಿಕ್ಕಮಗಳೂರು ಜಿಲ್ಲೆ ತರೀಕರೆ ಹೊರವಲಯದಲ್ಲಿರುವ ಗಾಳಿಹಳ್ಳಿಯಲ್ಲಿದೆ. ಈ ಶಿಲಾಮಂಟಪವನ್ನು ಪರಮ ಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಮಿತಿ ರಚಿಸಿಕೊಂಡು, ಜೀರ್ಣೋದ್ಧಾರ ಮಾಡುತ್ತಿರುವುದು ಪ್ರಶಂಸನೀಯ ಕಾರ್ಯ. ಈ ಕೆಲಸಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿ, ಕೈಜೋಡಿಸಬೇಕು ವಿಶೇಷ ಅನುದಾನವಾಗಿ ಒದಗಿಸಿ ಈ ಒಂದು ಸ್ಥಳವನ್ನು ಶರಣರ ಶಾಂತಿಧಾಮವಾಗಿ ಮಾಡಲು ಮುಂದಾಗಬೇಕು.

- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು ಹೋರಾಟಗಾರರು, ಪರಿಸರ ಸಂರಕ್ಷಕರು,
ಬೀದರ್ ಜಿಲ್ಲೆ.



















