ಬಳ್ಳಾರಿ/ ಕಂಪ್ಲಿ : ವಿವಿಧ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಸಾರ್ವಜನಿಕರ ಕೆಲಸಗಳನ್ನು ನಿಗಧಿತ ಸಮಯದಲ್ಲಿ ಮಾಡಿಕೊಡಬೇಕೆಂದು ಬಳ್ಳಾರಿ ಲೋಕಾಯುಕ್ತ ನಿರೀಕ್ಷಕ ನಾಗರೆಡ್ಡಿ ತಿಳಿಸಿದರು.
ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ, ಅಹವಾಲು ಸ್ವೀಕಾರ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಅಧಿಕಾರಿಗಳು ಸಮಾಜಮುಖಿಯಾಗಿ ಸಾರ್ವಜನಿಕ ಹಿತಾಶಕ್ತಿಗಾಗಿ ಪ್ರಮಾಣಿಕತೆಯಿಂದ ಕೆಲಸ ಮಾಡಬೇಕು. ಸಂಘ-ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಸಹಿತ ಸಮಾಜಕ್ಕೆ ಒಳಿತಾಗುವಂತಹ ಸಮಸ್ಯೆಗಳ ಬಗ್ಗೆ,ಸಾರ್ವಜನಿಕರಿಗೆ ಒಳಿತಾಗುವಂತೆ ಸಮಸ್ಯೆಗಳ ಬಗ್ಗೆ ಲೋಕಾಯುಕ್ತಕ್ಕೆ ಅಹವಾಲು ಸಲ್ಲಿಸಬೇಕೆ ಹೊರತು ಸ್ವಹಿತಾಶಕ್ತಿಗಾಗಿ ಅರ್ಜಿಗಳನ್ನು ಸಲ್ಲಿಸಬಾರದು ಎಂದ ಅವರು ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎರಡು, ಪುರಸಭೆಯ ಒಂದು,ನೀರಾವರಿ ಇಲಾಖೆಯ ಒಂದು ಶಿಕ್ಷಣ ಇಲಾಖೆಯ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಅಹವಾಲು ಸ್ವೀಕಾರ ಸಭೆಯಲ್ಲಿ ಸುಮಾರು ಮೂರು ದಶಕಗಳ ಹಿಂದೆ ನಿವೇಶನಕ್ಕಾಗಿ 350 ರೂ. ಗಳನ್ನು ಪಾವತಿಸಿದ್ದು, ಹಣ ನೀಡಿದವರಿಗೆ ನಿವೇಶನಗಳನ್ನು ಹಂಚಿಕೆ ಮಾಡದೇ ಬೇಕಾಬಿಟ್ಟಿ ನಿವೇಶನಗಳನ್ನು ಹಂಚಿಕೆ ಮಾಡಿದ್ದು,ನಿವೇಶನಗಳನ್ನು ಹಂಚುವಂತೆ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರಗಳು, ನಡೆದಿದ್ದು, ಮನೆಗಳು ಇರುವವರಿಗೆ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆಂದು ಆರೋಪಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಘಟನೆ ಜರುಗಿತು. ಐತಿಹಾಸಿಕ ಸೋಮಪ್ಪನ ಕೆರೆ ಹಸ್ತಾಂತರದ ಬಗ್ಗೆ, ಭುವನೇಶ್ವರಿ ಶಾಲೆ ಸ್ಥಳ ಅತೀಕ್ರಮದ ಬಗ್ಗೆ ಮನವಿಗಳನ್ನು ಸಲ್ಲಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕ, ತಾ.ಪಂ. ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಕಂದಾಯ,ಶಿಕ್ಷಣ, ಆರೋಗ್ಯ, ಕೃಷಿ, ಜೆಸ್ಕಾಂ, ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಭೂಮಾಪನಾ, ಪುರಸಭೆ, ತಾ.ಪಂ. ಸಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ, ಸಾರಿಗೆ,ವಿವಿಧ ವಿದ್ಯಾರ್ಥಿನಿಲಯಗಳ ಸಿಬ್ಬಂದಿಗಳು, ಎಪಿಎಂಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















