ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅನ್ನ ಹಸಿದವರಿಗೆ ಚಿನ್ನ, ವ್ಯರ್ಥ ಮಾಡ ಬೇಡವೋ ಅಣ್ಣ..

ಹಸಿದ ಹೊಟ್ಟೆಯ ಎದುರು
ಪ್ರತಿಷ್ಠೆಯ ಮಾತುಗಳು
ಮನಸೆಳೆವ ಸಂಗೀತ
ಪರಿಮಳದ ಕಂಪು
ಬಣ್ಣ ಬಣ್ಣದ ಚಿತ್ರಗಳು
ಇವು ಯಾವುದಾದರೂ ಹೊಟ್ಟೆ ತುಂಬಿಸುವುದೇ..
(ಉರ್ದು ಶಾಹಿರಿಯೊಂದರ ತುಣುಕು )

ಒಬ್ಬ ಬಡ ಬಾಲಕ ಬಂದು
ಹಸಿವೇ ಬರದಂತೆ ಇರುವ
ಯಾವುದಾದರು ಔಷಧಿ ಕೊಡಿ
ಎಂದು ಬೇಡಿಕೊಂಡಾಗ
ವೈದ್ಯನ ಕಣ್ಣಲ್ಲೂ ನೀರು ಜಿನುಗಿತು..
( ಆಂಗ್ಲ ಸೂಕ್ತಿ )

ಹಸಿದ ಹೊಟ್ಟೆಯ ಮುಂದೆ
ವೇದ ಪುರಾಣಗಳು,
ಸಾಧಕರ ಕತೆಗಳು
ತಾಳ ಮೇಳ ಇಲ್ಲದ
ಸಂಗೀತಾ ಸಭೆಯಂತೆ ..

(ಜಾನಪದ ಗಾದೆ )

ಮೇಲ್ಕಂಡ ಎಲ್ಲಾ ಕವನಗಳೂ
ಮನುಷ್ಯನ ಜೀವನದಲ್ಲಿ ಹಸಿವಿನ ಪ್ರಾಮುಖ್ಯತೆಯನ್ನು ತಿಳಿಸುತ್ತವೆ.

ಇಡೀ ಜಗತ್ತನ್ನು ಹಸಿವು, ಬಡತನ, ಅನಾರೋಗ್ಯ, ಶಿಕ್ಷಣದ ಕೊರತೆ ಅಪಾರವಾಗಿ ಕಾಡುತ್ತಿವೆ. ಅನ್ನವೇ ದೇವರು.. ಅನ್ನವೇ ತ್ರಾಣ.. ಪ್ರಾಣ.. ಇದು ಪುರಾತನ ಭಾರತದ ಸಂಸ್ಕೃತಿ.
2022 ನೇ ಜಾಗತಿಕ ವರದಿಯಂತೆ
ಇಡೀ ಜಗತ್ತಿನಾದ್ಯಂತ ಸುಮಾರು 811 ಮಿಲಿಯನ್ ಜನರು ಹಸಿವು ಹಾಗೂ ಬಡತನದಿಂದ ಬಳಲುತ್ತಿದ್ದಾರೆ. ಇದು ಜಾಗತಿಕ ಜನಸಂಖ್ಯೆಯ ಸುಮಾರು ಶೇಕಡಾ 9.8 ರಷ್ಟು ಎಂಬುದು ಬಹಳ ಆತಂಕ ದ ವಿಚಾರ.

2024 ರ ಅಂಕಿ ಅಂಶದಂತೆ ಸುಮಾರು ಒಂದು ಬಿಲಿಯನ್ ಗೂ ಹೆಚ್ಚು ಮಹಿಳೆಯರು ಹಾಗೂ ಹದಿಹರೆಯದ ಹುಡುಗಿಯರು ಅಪೌಷ್ಟಿಕತೆಯಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಪೈಕಿ 45 ಮಿಲಿಯನ್ ಮಕ್ಕಳು 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಅತ್ಯಂತ ಆತಂಕದ ಸಂಗತಿ.

ಏಷ್ಯಾ ಖಂಡದ ಶೇಕಡಾ 9.1 ರಷ್ಟು ಜನರು ಹಸಿವಿನ ಭಾದೆಗೆ ಸಿಲುಕಿದ್ದಾರೆ. ಈ ಪೈಕಿ ಹೆಚ್ಚು ಮಂದಿ ಪಾಕಿಸ್ತಾನ, ಚೈನಾ, ಭಾರತ ದೇಶಕ್ಕೆ ಸೇರಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಭಾರತದಲ್ಲಿ ಹಸಿವು ಹಾಗೂ ಬಡತನಗಳು ಇಂದಿಗೂ ಸವಾಲಾಗಿಯೇ ಉಳಿದಿದೆ. 2013 ರ ಅಂಕಿ ಅಂಶದ ಪ್ರಕಾರ ಸುಮಾರು 220 ಮಿಲಿಯನ್ ಜನರು ದಿನಕ್ಕೆ 23 ರೂ. ಗಳಷ್ಟು ಹಣದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇವರ ಆಹಾರದಲ್ಲಿ ಪೌಷ್ಟಿಕತೆ, ಆರೋಗ್ಯ ಯುಕ್ತ ಜೀವನ ಹೇಗೆ ಸಾಧ್ಯ. ಈ ಪರಿಸ್ಥಿತಿ ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ ಆದರೆ ತೀವ್ರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಹಸಿವು, ಬಡತನಗಳು ಕಾಡುತ್ತಿವೆ.

ಸರ್ಕಾರಗಳ ವಿವಿಧ ಜನಪರ ಕಾರ್ಯಕ್ರಮಗಳ ಫಲವಾಗಿ 2011-12 ರಲ್ಲಿ ಶೇಕಡಾ 21 ರಷ್ಟು ಇದ್ದ ಬಡತನದ ಪ್ರಮಾಣ ಇದೀಗ ಶೇಕಡಾ 8.5 ಕ್ಕೆ ಇಳಿದಿದೆ ಎಂದು ದಾಖಲೆಗಳು ಹೇಳುತ್ತವೆ. ಆದರೂ ವಿಶ್ವದಲ್ಲಿ ಅತಿ ಹೆಚ್ಚು ಪೌಷ್ಟಿಕ ಆಹಾರಗಳ ಕೊರತೆ ಇರುವ ಜನರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಭಾರತಕ್ಕೆ ಅಗ್ರಸ್ಥಾನ ಎಂಬುದು ಒಂದು ಆತಂಕಕಾರಿ ವಿಷಯ.
ವಿಶ್ವ ಸಂಸ್ಥೆಯು 2011 ರ ಹಂಗರ್ ಪ್ರಾಜೆಕ್ಟ್ ಆರಂಭಿಸಿ ಜಗತ್ತಿನಾದ್ಯಂತ ಕೃಷಿ ಅಭಿವೃದ್ಧಿ, ಶಿಕ್ಷಣ, ಆರ್ಥಿಕ ಸಬಲೀಕರಣ ಹಾಗೂ ಆರೋಗ್ಯ ಸೌಲಭ್ಯ ಕಲ್ಪಿಸುವ ಮುಲಕ ಹಸಿವು ಹಾಗೂ ಬಡತನದ ನಿರ್ಮೂಲನೆಗೆ ಕಾರ್ಯಕ್ರಮಗಳನ್ನು ರೂಪಿಸಿದೆ.

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (FAO) 2030 ರ ವೇಳೆಗೆ ಜಗತ್ತಿನಲ್ಲಿ ಶೂನ್ಯ ಹಸಿವು ಸ್ಥಾಪಿಸಿ, ಆಹಾರ ಅಭದ್ರತೆ ನಿವಾರಿಸುವ ಮಹತ್ತರ ಗುರಿ ಹಾಕಿಕೊಂಡಿದೆ.

ಹಸಿವಿನಿಂದಾಗಿ ಮಕ್ಕಳು, ಹಿರಿಯರು ಹಾಗೂ ವಯಸ್ಕರಿಗೆ ಅಸ್ತಮಾ, ಮೂಳೆಗಳ ಅಸ್ವಸ್ತತೆ, ರೋಗಗಳನ್ನು ಎದುರಿಸುವ ಶಕ್ತಿ ಕಡಿಮೆ ಆಗುವುದು, ಶಿಕ್ಷಣ ಪಡೆಯಲು ತೊಂದರೆ ಉಂಟಾಗುತ್ತಿವೆ. ಹಸಿವಿನಿಂದ ವ್ಯಕ್ತಿಯ ದೈಹಿಕ ಶಕ್ತಿ ಕುಂದುವಿಕೆ, ಮಾನಸಿಕ ಆರೋಗ್ಯ ಕುಂದುವಿಕೆ ಹಾಗೂ ಸಾಮಾಜಿಕವಾಗಿ ಸ್ಪಂದನೆಯ ಸಮಸ್ಯೆಗಳು ಉಂಟಾಗಿ ಒಂದು ವ್ಯಕ್ತಿ ಹಾಗೂ ಕುಟುಂಬದ ವಿನಾಶ ಉಂಟಾಗುತ್ತದೆ.

ಹಾಗಾದರೆ ಜಗತ್ತಿನ ಬಹು ಜನರನ್ನು ಕಾಡುತ್ತಿರುವ ಹಸಿವಿನ ಸಮಸ್ಯೆಗೆ ಮೂಲ ಹುಡುಕುತ್ತ ಸಾಗಿದಾಗ ಒಂದೆಡೆ ಶ್ರೀಮಂತರು ಆಹಾರವನ್ನು ಮನಸ್ಸಿಗೆ ಬಂದಂತೆ ತಯಾರಿಸಿ, ಆಹಾರ ಕ್ರಮದಲ್ಲೂ ತಮ್ಮ ಶ್ರೀಮಂತಿಕೆ, ಆಡಂಬರ ಪ್ರದರ್ಶಿಸಿ ಬಹುಪಾಲು ಆಹಾರವನ್ನು ಬಳಸದೆ ವ್ಯರ್ಥ ಮಾಡುತ್ತಿರುವುದು ಕಾಣ ಬರುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ ಗಳಲ್ಲಿ ಶೇಕಡಾ 6 ರಿಂದ 8 ರಷ್ಟು ಆಹಾರ ಪದಾರ್ಥ ಗಳು ವ್ಯರ್ಥವಾಗಿ ಬಿಸುಲ್ಪಡುತ್ತವೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಪ್ರಮಾಣ ಶೇಕಡಾ 28 ರಿಂದ 30 ರಷ್ಟಿದೆ.

ಹಸಿದವರಿಗೆ ಬೇಕಾದುದು ಅನ್ನ,
ಮತ, ತತ್ವ, ಕಲೆಗಳ ಕನಸಿನುಣಿಸಲ್ಲ

ಎಂದು ರಾಷ್ಟ್ರಕವಿ ಕುವೆಂಪು ಅವರು ಅನ್ನದ ಮಹತ್ವವನ್ನು ಸಾರಿದ್ದಾರೆ.

ನೇತ್ರಗಳು ಕಾಣಿಸವು
ಶೋತ್ರುಗಳು ಕೇಳಿಸವು
ಮುದ್ದಿನ ಮಾತುಗಳು ಸೊಗಸವು,
ಬೋನದ ಮುದ್ದೆ ತಪ್ಪಿದರೆ ಸರ್ವಜ್ಞ

ಎಂದು ನೂರಾರು ವರ್ಷಗಳ ಹಿಂದೆಯೇ ಸರ್ವಜ್ಞ ಕವಿ ಆಹಾರದ ಮಹತ್ವವನ್ನು ಸಾರಿದ್ದಾರೆ.

1945 ರ ಜೂನ್ 26 ರಂದು ವಿಶ್ವಸಂಸ್ಥೆ ಸ್ಥಾಪನೆ ಆಗುವ ಸಂದರ್ಭದಲ್ಲೂ ವಿಶ್ವ ಸಂಸ್ಥೆಯ ಪಂಚ ಉದ್ದೇಶಗಳಲ್ಲಿ ಹಸಿವು, ಬಡತನ ಹಾಗೂ ರೋಗರುಜಿನ ಗಳಂತಹ ಸಾಮಾಜಿಕ ಸಮಸ್ಯೆ ಪರಿಹರಿಸುವುದೂ ಪ್ರಮುಖವಾಗಿದೆ. ವಿಶ್ವ ಸಂಸ್ಥೆಯು ಮೇ 28 ನ್ನು ವಿಶ್ವ ಹಸಿವಿನ ನಿವಾರಣಾ ದಿನವಾಗಿ ಘೋಷಿಸಿದೆ. ವಿಶ್ವದಲ್ಲಿ ಹಸಿವಿನಿಂದ ನರಳುತ್ತಿರುವ ಜನರನ್ನು ರಕ್ಷಿಸಲು ಕೋಟ್ಯಂತರ ರೂ. ಹಣವನ್ನು ಬಡ ರಾಷ್ಟ್ರಗಳಿಗೆ ಅನುಧಾನವಾಗಿ ನೀಡುತ್ತಿದೆ.

ಹಾಗಾದರೆ ಹಸಿವು ಮುಕ್ತ ಸಮಾಜ ನಿರ್ಮಾಣದ ಜವಾಬ್ದಾರಿ ನಾಗರೀಕ ಸಮಾಜದ ಪ್ರಜೆಗಳಾದ ನಮಗೆ ಸೇರಿಲ್ಲವೇ. ಇಂದಿನಿಂದಲೇ ಆಹಾರವನ್ನು ವ್ಯರ್ಥವಾಗಿ ಹಾಳು ಮಾಡುವುದನ್ನು, ಬೀದಿಪಾಲು ಮಾಡುವುದನ್ನು ನಿಲ್ಲಿಸೋಣ.

ಸಾರ್ವಜನಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಯಾವುದೇ ಯೋಜನೆ ಹಾಕದೆ ಮನಸ್ಸಿಗೆ ಬಂದಂತೆ ಆಹಾರ ತಯಾರಿಸಿ ಉಳಿದ ಆಹಾರವನ್ನು ಎಸೆಯಲಾಗುತ್ತಿದೆ. ಇದರಿಂದ ಪರಿಸರದ ನಾಶ ಉಂಟಾಗುತ್ತದೆ. ಬಡವರ, ನಿರ್ಗತಿಕರ ಹಸಿವು ನಿವಾರಿಸಬೇಕಾದ ಆಹಾರ ಪದಾರ್ಥಗಳು ಮಣ್ಣು, ಹೊಳೆಯ ಪಾಲಾಗುತ್ತವೆ. ಇದರಿಂದ ಬಡವರ ಹಕ್ಕನ್ನುಕಸಿದಂತಾಗುತ್ತದೆ.ಆರ್ಥಿಕವಾಗಿ ಅಪವ್ಯಯ ಉಂಟಾಗುತ್ತದೆ. ಕೆಲವೆ ವ್ಯಕ್ತಿಗಳ ಸಾಮಾಜಿಕ ಬೇಜವಾಬ್ದಾರಿಯಿಂದಾಗಿ
ಸಾವಿರಾರು ಬಡಜನರ ಹಸಿವಿನ ಸಮಸ್ಯೆ ಉಲ್ಬಣಿಸುತ್ತಿದೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಕಿ ಆಹಾರವನ್ನು ಯೋಜಿತ ರೀತಿಯಲ್ಲಿ ತಯಾರಿಸಬೇಕು. ಉಳಿದ ಆಹಾರ ಪದಾರ್ಥಗಳ ಮರುಬಳಕೆ ಮಾಡುವ ಬಗ್ಗೆ ಸಹ ಯೋಜನೆ ಹಾಕಿಕೊಳ್ಳಬೇಕು. ಒಂದು ವೇಳೆ ಆಹಾರ ಪದಾರ್ಥಗಳು ಉಳಿದುಕೊಂಡರೆ ಅದನ್ನು ಸರಿಯಾಗಿ ಸಂಗ್ರಹಿಸಿ ಹಸಿವಿನಿಂದ ನರಳುವಂತೆ ಬಡವರಿಗೆ, ಅನಾಥರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಇದು ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆ, ಸರ್ಕಾರಗಳ ಕಾರ್ಯಕ್ರಮ ಆಗಬೇಕು. ಆಗ ಮಾತ್ರ ಆಹಾರದ ಅಪವ್ಯಯ ತಡೆಗಟ್ಟಿದಂತಾಗುತ್ತದೆ. ವಿಶ್ವದ ಬಹುಪಾಲು ಜನರನ್ನು ಕಾಡುತ್ತಿರುವ ಹಸಿವಿನ ಸಮಸ್ಯೆ ನಿವಾರಣೆ ಆಗುತ್ತದೆ.

ಸಭೆ, ಸಮಾರಂಭಗಳಲ್ಲಿ, ಮದುವೆ, ನಾಮಕರಣ, ಗೃಹ ಪ್ರವೇಶ ಸಮಾರಂಭಗಳಲ್ಲಿ ನಮಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದ ಆಹಾರವನ್ನು ಮಿತಿಯಾಗಿ ಬಳಸೋಣ. ಊಟ ಮಾಡುವಾಗ ಪ್ರತಿಷ್ಠೆ ತೋರಿಸದೆ ಅನ್ನದ ಮೇಲಿನ ಹಕ್ಕು ಸಮಾಜದ ಪ್ರತಿಯೊಬ್ಬ ಪ್ರಜೆಗೂ ಇದೆ. ಆಹಾರ ವ್ಯರ್ಥ ಮಾಡಿದರೆ ಅದು ಸಮಾಜಕ್ಕೆ ತಾವು ಮಾಡುವ ಅವಮಾನ ಎಂದು ಭಾವಿಸೋಣ.

ಸರ್ವಜ್ಞ ಮಹಾ ಕವಿ ಹೇಳಿರುವಂತೆ

ಅನ್ನ ದೇವರ ಮುಂದೆ
ಇನ್ನು ದೇವರು ಉಂಟೆ
ಅನ್ನವಿರುವತನಕ ಪ್ರಾಣವು
ಜಗದೊಳಗನ್ನವೇ ದೈವ ಸರ್ವಜ್ಞ

ನಮಗೆ ಬೇಕಾದಷ್ಟು ಆಹಾರ ತಯಾರಿಸೋಣ. ಮಿತಿಯಾಗಿ ಬಳಸೋಣ. ಉಳಿದರೆ ಅನಾಥಶ್ರಮಗಳಿಗೆ, ಬಡವರಿಗೆ, ಬೀದಿಬದಿಯ ನಿರ್ಗತಿಕರಿಗೆ ಉಚಿತವಾಗಿ ಹಂಚೋಣ. ಆ ಮುಲಕ ಹಸಿವು ಮುಕ್ತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡೋಣ.

  • ಡಾ. ಭೇರ್ಯ ರಾಮಕುಮಾರ್
    ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು
    ಹಿರಿಯ ಸಾಹಿತಿಗಳು ,ಮೈಸೂರು
    ಮೊಬೈಲ್ : 63631 72368.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!