‘ಆರೋಗ್ಯವನ್ನು ಹದವಾಗಿಟ್ಟುಕೊಳ್ಳಲು ನೆಪ ಬೇಕೇ?’
‘ ಆರೋಗ್ಯವೇ ಭಾಗ್ಯʼ ವೆನ್ನುವ ಪದಪುಂಜ ಇಂದು ಕೇವಲ ನಮ್ಮ ನೆನಪಿನಲ್ಲಷ್ಟೇ ಉಳಿದಿದೆಯೇ ಹೊರತು ನಿಜವಾದ ಅಂಗಳದಲ್ಲಿಲ್ಲ. ಮೂಲತಃ ಕೃಷಿಪ್ರಧಾನವಾದ ಹುನಗುಂದದಲ್ಲಿ ರೈತ ಕುಟುಂಬಗಳು ಹೆಚ್ಚಿದ್ದರೂ ಆಧುನಿಕತೆಯ ಹೊಸ ಗಾಳಿ ಬೀಸುತ್ತ ಮನುಷ್ಯನನ್ನು ಸೋಮಾರಿಯನ್ನಾಗಿಸಿದೆ. ಬೆಳಗಿನ ಮೂರು-ನಾಲ್ಕು ಗಂಟೆಗೆ ಎದ್ದು ಸಕ್ರಿಯರಾಗುತ್ತಿದ್ದ ಜನ ಈಗ ಸೂರ್ಯಪುತ್ರರಾಗುತ್ತಿದ್ದಾರೆ; ಜೊತೆಗೆ ದೇಹದಲ್ಲಿ ಅನವಶ್ಯಕ ಬೊಜ್ಜು ಬೆಳೆಸಲು ಸಹಕರಿಸುತ್ತಿರುವುದು ವಾಸ್ತವದ ಕನ್ನಡಿ. ಇದಕ್ಕೆ ಸಾಕ್ಷಿಯೆಂಬಂತೆ ಬಿಪಿ-ಶುಗರ್ ದಂತಹ ಖಾಯಿಲೆಗಳು ನಮ್ಮ ಹತ್ತಿರದ ಬಂಧುಗಳಾಗಿವೆ ಎಂಬುದು ಸುಳ್ಳೇನಲ್ಲ. ಸರಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಕಾಳಜಿಯಿಂದ ನಿರ್ಮಾಣವಾದ ದೊಡ್ಡ ಕ್ರೀಡಾಂಗಣ, ಪಾರ್ಕುಗಳು ಹಾಗೂ ಕಾಲೇಜು ಆವರಣದ ಮೈದಾನಗಳು ಹೆಸರಿಗಷ್ಟೇ ಜೀವಂತವಾಗಿದ್ದರೆ, ಅತ್ತ ಆಸ್ಪತ್ರೆಗಳು ತುಂಬಿ ತುಳುಕಾಡುತ್ತಲೇ ರಕ್ತ ಹೀರುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಇರದಿದ್ದರೂ ಜೀವನ ಶೈಲಿಯ ಬದಲಾವಣೆ ಹಲವು ಹೊಸತನಗಳನ್ನು ತರಬಲ್ಲದು. ಇದರ ಕೆಲವು ಮಾದರಿಗಳು ಸದ್ಯ ಚಾಲ್ತಿಯಲ್ಲಿವೆ.
ಇಲಕಲ್ ರಸ್ತೆಗೆ ಅಂಟಿಕೊಂಡಿರುವ ತಾಲ್ಲೂಕು ಕ್ರೀಡಾಂಗಣವು ಬೆಳಿಗ್ಗೆ ಮತ್ತು ಸಾಯಂಕಾಲ ಒಂದಷ್ಟು ಬಿಜಿಯಾಗಿರುತ್ತದೆಯಷ್ಟೇ. ಇಲ್ಲಿ ಚಿಕ್ಕ ಮಕ್ಕಳು, ಒಂದಷ್ಟು ಯುವಕರು ಹಾಗೂ ನಿವೃತ್ತರೇ ಸಿಂಹಪಾಲು ಎಂದರೂ ದಿನನಿತ್ಯ ಕೆಲವು ಹೊಸ ಸದಸ್ಯರ ಆಗಮನವಾಗುತ್ತಿದೆ. ಆದರೆ ಅದರಲ್ಲಿ ರೋಗ ಬಂದ ಮೇಲೆ, ವೈದ್ಯ ಬೈದ ಮೇಲೆ, ಅನಿವಾರ್ಯವೆಂದ ಮೇಲೆ ಬರುವವರೇ ಹೆಚ್ಚು. ಬಹುಸಂಖ್ಯಾತರ ಚಿತ್ತ ಇತ್ತ ಕಡೆ ಹರಿಯುವುದೇ ಇಲ್ಲ. ಮೈಮುರಿದು ದುಡಿದು ಬದುಕುವ ಈ ನೆಲದಲ್ಲಿ ಸೋಮಾರಿತನವು ಆಧುನಿಕತೆಯ ಹೊಸ ರೂಪವಾಗಿ ಬೆಳೆದು ಬರುತ್ತಿದೆ. ರೋಗಗಳು ದಂಡಿ-ದಂಡಿಯಾಗಿ ದಾಂಗುಡಿ ಇಡುತ್ತಿದೆ. ವಯೋಮಾನದ ಯಾವ ಲೆಕ್ಕವಿಲ್ಲದೆ ದಿನನಿತ್ಯ ಸಾವಿನ ಕೇಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಬದಲಾವಣೆಯ ಹೊಸ ಅಲೆ ಮೇಲೇಳಬೇಕಿದೆ. ಅದರ ಒಂದಷ್ಟು ಕುರುಹುಗಳು ಇದೀಗ ಅಚ್ಚಾಗುತ್ತಿವೆ.
ಮದುವೆ, ಮುಂಜಿಯಂತಹ ಉತ್ಸವಗಳಲ್ಲಿ ಒಂದೊಂದಾಗಿ ಕಾಣಿಸಿಕೊಳ್ಳುತ್ತಿದ್ದ ಹುನಗುಂದದ ಪೋಟೋಗ್ರಾಫರ್, ವಿಡಿಯೋಗ್ರಾಫರ್ ಗಳ ದಂಡು ಕಳೆದೊಂದು ವಾರದಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳ್ಳಂಬೆಳಿಗ್ಗೆ ದಾಂಗುಡಿ ಇಡುತ್ತಿದೆ. ಎಂದೂ ಒಟ್ಟಿಗೆ ಸಿಗದ ಅಷ್ಟೂ ಮುಖಗಳನ್ನು ಒಮ್ಮೆಲೇ ನೋಡಿದಾಗ ಅಚ್ಚರಿಯಾಗದಿರದು. ವಿಚಾರಿಸಿದಾಗ ಜಿಲ್ಲಾ ಮಟ್ಟದ ಅಸೋಸಿಯೇಶನ್ ವತಿಯಿಂದ ಛಾಯಾಚಿತ್ರಕಾರರ ಕ್ರಿಕೆಟ್ ಪಂದ್ಯಾವಳಿ ನಿಮಿತ್ಯ ಅಭ್ಯಾಸಕ್ಕಾಗಿ ಬಂದಿರುವ ವಿಚಾರ ಒಳ್ಳೆಯ ಬೆಳವಣಿಗೆ. ಇಪ್ಪತ್ತಕ್ಕೂ ಹೆಚ್ಚು ಸದಸ್ಯರು ವಯೋಮಾನದ ಹಮ್ಮು-ಬಿಮ್ಮುಗಳಿಲ್ಲದೆ ಆಟೋಟಗಳಲ್ಲಿ ಪಾಲ್ಗೊಂಡು ಬೆವರಿಳಿಸುವ ಪರಿ ಹೊಸದೊಂದು ಬೆಳವಣಿಗೆ. ಇದು ನಿಗದಿತ ಪಂದ್ಯಾವಳಿಯವರೆಗೆ ಮಾತ್ರ ನಡೆಯದೆ ಪ್ರತಿನಿತ್ಯ ಮುಂದುವರಿದರೆ ಖಂಡಿತವಾಗಿಯೂ ಇದೊಂದು ಹೊಸ ಅಧ್ಯಾಯ.
ದೂರದ ರಾಜಸ್ಥಾನದಿಂದ ಬಂದು ಹುನಗುಂದದಲ್ಲಿ ಬದುಕು ಕಟ್ಟಿಕೊಂಡಿರುವ ವರ್ತಕರ ಗುಂಪು ತಮ್ಮ ಬಿಡುವಿರದ ಬದುಕಿನಲ್ಲೂ ಪ್ರತಿನಿತ್ಯ ಇದೇ ಮೈದಾನದಲ್ಲಿ ಬೆಳಗಿನ ಜಾವಕ್ಕೆ ದಂಡು ಕಟ್ಟಿಕೊಂಡು ಆಟಕ್ಕಿಳಿದರೆ, ಗುಜರಾತಿ ಮೂಲದ ಮತ್ತೊಂದು ಗುಂಪು ಮತ್ತೊಂದು ಅಂಚಿಗೆ ಆಟದಲ್ಲಿ ಸಕ್ರೀಯರಾಗಿರುತ್ತಾರೆ. ಜೊತೆಗೆ ವಿಜಯ ಮಹಾಂತೇಶ ಬ್ಯಾಂಕಿನ ನೌಕಕರ ಗುಂಪು, ಬ್ಯಾಟ್ಮಿಂಟನ್ ಆಟಗಾರರ ಗುಂಪು, ನಿವೃತ್ತರ ಗುಂಪು ಮತ್ತೂ ʼವಾಯುವಿಹಾರ ಬಳಗʼ ಎಂಬ ಹಲವು ಗುಂಪುಗಳು ಕ್ರೀಯಾಶೀಲವಾಗಿವೆ. ಟಿ.ಸಿ.ಎಚ್. ಆವರಣ, ಕಾಲೇಜು ಕ್ರೀಡಾಂಗಣ, ಹುಡ್ಕೋ ಕಾಲೋನಿ, ಹೊಸ ಲೇಔಟ್ಗಳು, ಅಮರಾವತಿ- ರಾಮವಾಡಗಿ- ಧನ್ನೂರ- ಅಮೀನಗಡ ರಸ್ತೆಗುಂಟ ಸಾಕಷ್ಟು ಸಂಖ್ಯೆಯಲ್ಲಿ ಬೆಳಗಿನ ವಾತಾವರಣಕ್ಕೆ ತೆರೆದುಕೊಂಡರೂ ಇಷ್ಟೊಂದು ದೊಡ್ಡ ಜನಸಂಖ್ಯೆಯ ಮುಂದೆ ಲೆಕ್ಕಕ್ಕಿಲ್ಲದಷ್ಟೇ ಎಂದೇಳಬಹುದು. ಕೋವಿಡ್ ನಂತರದ ಕಾಲಘಟ್ಟದಲ್ಲಿನ ದಿಢೀರ್ ಸಾವು-ನೋವುಗಳು, ಆರೋಗ್ಯದ ಹಲವು ಏರಿಳಿತಗಳು, ಆಧುನಿಕ ಜೀವನ ಶೈಲಿಯ ಬದುಕು, ಫಾಸ್ಟ ಪುಡ್ ಸಂಸ್ಕೃತಿ ಹಾಗೂ ಮೊಬೈಲ್ ಗೀಳು ಈಗಿರುವ ತಲೆಮಾರಿಗಿಂತಲೂ ಭವಿಷ್ಯದ ಬದುಕಿನ ಮೇಲೆ ತುಂಬಾ ಆಘಾತಕಾರಿಯಾದ ಪರಿಣಾಮವನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನೆಲೆಗಟ್ಟಿನಲ್ಲಿ ನಮ್ಮೂರಿನಲ್ಲಿರುವ ಶಿಕ್ಷಕರ, ಪದವೀಧರರ, ಸಾಹಿತಿಗಳ, ವಕೀಲರ, ಮಹಿಳೆಯರ, ಪತ್ರಕರ್ತರ, ಚಾಲಕರ, ಕಾರ್ಮಿಕರ, ಸಮಾಜ ಸೇವಕರ, ವರ್ತಕರ ಮುಂತಾದ ಹತ್ತು ಹಲವಾರು ಗುಂಪು-ಸಂಘಟನೆಗಳಿದ್ದು ಇವೆಲ್ಲಾ ಗಟ್ಟಿ ಮನಸ್ಸು ಮಾಡಿ ಕಾರ್ಯೋನ್ಮುಖವಾದರೆ ಆರೋಗ್ಯವನ್ನು ಅಂಗೈಯಲ್ಲಿಟ್ಟುಕೊಂಡು ಬದುಕಬಹುದು; ಇರುವಷ್ಟು ಆಯುಷ್ಯವನ್ನು ಪರಾವಲಂಬಿಯಾಗದೆ ನೆಮ್ಮದಿಯಿಂದ ಕಳೆಯಬಹುದು. ಕ್ರೀಡಾಂಗಣವೂ ಖುಷಿಯಿಂದ ಸಂಭ್ರಮಿಸೀತು. ಈ ದಿಸೆಯಲ್ಲಿ ಬುದ್ದಿಜೀಗಳಾದಿಯಾಗಿ ಸಮಸ್ತರೆಲ್ಲ ಆಲೋಚಿಸಬೇಕಾದ ಅಗತ್ಯವಿದೆಯೆಂದು ಭಾವಿಸುವೆ. ಸದ್ಯದ ಬದುಕಿನಲ್ಲಿ ಸಮಯ ಯಾರಿಗೂ, ಎಂದಿಗೂ ಸಿಗುವುದಿಲ್ಲ; ಆದರೆ ನಾವೆ ಸಮಯ ಹೊಂದಿಸಿಕೊಳ್ಳಬೇಕಷ್ಟೇ! ಜೊತೆಗೆ ಬೆಳಗು-ಬೈಗುಗಳೆನ್ನದೆ, ಕುಂಟು ನೆಪ ಹೇಳದೆ ಜಾಗೃತಗೊಂಡರೆ ನೀವೂ ಸುಖಿ; ಸಮಾಜ ಮತ್ತು ದೇಶವೂ… ಸುಖಿ!
-ಎಂ.ಡಿ.ಚಿತ್ತರಗಿ, ಹುನಗುಂದ.



















