ಬಳ್ಳಾರಿ / ಕಂಪ್ಲಿ : ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರಚೌತಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಿದರು. ಇಂದು ಬೆಳಿಗ್ಗೆ ಮನೆಗಳ ಮುಂದೆ ಸ್ವಚ್ಛಗೊಳಿಸಿ ರಂಗೋಲಿಯಿಂದ ನಾಗಪ್ಪನ ಚಿತ್ರಗಳನ್ನು ವೈವಿದ್ಯಮಯ ಬಣ್ಣಗಳಿಂದ ಅಲಂಕರಿಸಿ, ದೇವರ ಜಗುಲಿಯಲ್ಲಿ ಪ್ರತಿಷ್ಠಪಿಸಿರುವ ಚಿನ್ನ ಬೆಳ್ಳಿಗಳಿಂದ ತಯಾರಿಸಿದ ನಾಗವಿಗ್ರಹಕ್ಕೆ ಭಕ್ತಿಯಿಂದ ಆಕಳ ಹಾಲಿನ ಜೊತೆಗೆ ಬೆಲ್ಲ ಬೆರಸಿ ಕೊಬ್ರಿ ಬಟ್ಟಲಿನಲ್ಲಿ ಹಾಕಿಕೊಂಡು ಎರೆದು ನಂತರ ವೈವಿದ್ಯಮಯ ಉಂಡಿಗಳನ್ನು ಅಂದರೆ ಶೇಂಗಾ, ಹುರುಕಡ್ಲಿ, ತಂಬಿಟ್ಟು,ಸಜ್ಜೆ,ಜೋಳದ ಹಳ್ಳಿನಿಂದ ಉಂಡಿಗಳನ್ನು ತಯಾರಿಸಿ ನೈವೇಧ್ಯ ಮಾಡಿ ತಮ್ಮ ಭಕ್ತಿಯನ್ನು ಸಲ್ಲಿಸಿದರು.
ನಂತರ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ಧರಿಸಿ ಗ್ರಾಮದ ಹೊರವಲಯದಲ್ಲಿರುವ ನಾಗರಕಟ್ಟೆಗಳಿಗೆ ತೆರಳಿ ಅಲ್ಲಿರುವ ನಾಗಪ್ರತಿಮೆಗಳನ್ನು ಅಲಂಕರಿಸಿ ಅವುಗಳಿಗೆ ಕಣ್ಣು ಮೀಸೆಗಳನ್ನು ಅಂಟಿಸಿ ಹೂಗಳಿಂದ ಅಲಂಕರಿಸಿ ಹಾಲನ್ನು ಎರೆದು ನೈವೇಧ್ಯವನ್ನು ಸಮರ್ಪಿಸಿ ತಮ್ಮ ಹರಕೆಗಳನ್ನು ಸಲ್ಲಿಸಿದರು. ನಂತರ ಮನೆಮಂದಿಯಲ್ಲ ಸೇರಿ ವೈವಿದ್ಯಮಯ ಸಿಹಿ ತಿಂಡಿಗಳನ್ನು ಸವಿದು ನಂತರ ಊರ ಹೊರವಲಯದ ಗಿಡಗಳಿಗೆ ಕಟ್ಟಿದ ಜೋಕಾಲಿಗಳಲ್ಲಿ ಹಾಡಿ ಸಂಭ್ರಮಿಸಿದರು.ಇದು ನಾಗಚೌತಿಯ ಆಚರಣೆ
ಕಂಪ್ಲಿ: ಪಂಚಮಿಯ ದಿನ ಮನೆ ಮಂದಿಯೆಲ್ಲಾ ಸೇರಿ ಭಕ್ಷ ಭೋಜನಗಳನ್ನು ತಯಾರಿಸಿಕೊಂಡು ಹೊಲ ಗದ್ದೆಗಳಿಗೆ ತೆರಳಿ ಹಾವಿನ ಹುತ್ತಗಳಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ನೈವೇಧ್ಯ ಸಮರ್ಪಿಸಿ ತಮ್ಮ ಭಕ್ತಿಯನ್ನು ಸಲ್ಲಿಸಿ ಎಲ್ಲರೂ ಸೇರಿ ಸಾಮೂಹಿಕ ಬೋಜನ ಮಾಡಿ ಸಂಜೆಯವರೆಗೂ ಹೊಲ ಗದ್ದೆಗಳಲ್ಲಿ ಇರುವ ಬೃಹತ್ ಗಿಡಗಳಿಗೆ ಜೋಕಾಲಿ ಹಾಕಿ ಸಂತಸದಿಂದ ಜೋಕಾಲಿ ಹಾಡಿ ಹರಟೆ ಹೊಡೆದು ಸಂಜೆ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಹೀಗೆ ನಾಗ ಚೌತಿ ಮತ್ತು ನಾಗ ಪಂಚಮಿಯ ಆಚರಿಸುವ ಪದ್ದತಿ ಸಾಮಾನ್ಯವಾಗಿದ್ದರೆ ಇನ್ನು ಕೆಲವು ಹಳ್ಳಿಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಅವಧಿಯಲ್ಲಿ ತಮಗೆ ಬೇಕಾದ ದಿನದಂದು ನಾಗಪ್ಪನಿಗೆ ಹಾಲೆರೆದು ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಈ ವರ್ಷ ಉತ್ತಮವಾಗಿ ಮಳೆಯಾಗಿರುವುದರಿಂದ ರೈತಾಪಿ ವರ್ಗ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಸಮೀಪದ ಬುಕ್ಕಸಾಗರದ ಐತಿಹಾಸಿಕ ಏಳು ಹೆಡೆ ನಾಗಪ್ಪ ದೇವಸ್ಥಾನದಲ್ಲಿರುವ ನಾಗಪ್ಪ ಮೂರ್ತಿಗೆ ಮಹಿಳೆಯರು ಹಾಲೆರೆಯುತ್ತಿರುವ ದೃಶ್ಯ ಕಂಡು ಬಂತು.
ವರದಿ : ಜಿಲಾನಸಾಬ್ ಬಡಿಗೇರ



















