ಕೊಪ್ಪಳ/ ಗಂಗಾವತಿ : ಬಸವಪರ ಸಂಘಟನೆಗಳ ಪರವಾಗಿ ನಗರದಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕಾಯಕಯೋಗಿ. ಭಕ್ತಿ ಭಂಡಾರಿ ಬಸವಣ್ಣನವರ ವಚನಗಳ ಕುರಿತು ಪಂಪಾಪತಿ.ಹೆಚ್. ಶಿಕ್ಷಕರು ಎಮ್ಮಿಗನೂರು ಉಪನ್ಯಾಸ ನೀಡಿದರು.
ಇಡೀ ಜಗತ್ತು ಗೌರವಿಸುವ ಹಾಗೂ ಎಲ್ಲಾ ಜನಾಂಗದವರು ಒಪ್ಪಿಕೊಳ್ಳುವ ಮಹಾನ್ ಕನ್ನಡದ ವಚನಕಾರರೆಂದರೆ 12ನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವಣ್ಣನವರು. ಸಮಾಜದಲ್ಲಿದ್ದ ಗೊಡ್ಡು ಸಂಪ್ರಾದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಗುಣವನ್ನು ಹೊಂದಿದ್ದರು. ಜಾತ್ಯಾತೀತ ಸಮಾಜ ಕಲ್ಪನೆಯನ್ನು ಜಾತಿ ಜಾತಿಗಳ ಹಾಗೂ ಧರ್ಮ ಧರ್ಮಗಳ ಹೆಸರಿನಲ್ಲಿ ನೆಡೆಯುತ್ತಿದ್ದ ಮಾನವ ಸಂಘರ್ಷವನ್ನು ಕುರಿತು ನೊಂದು ನುಡಿದರು.
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ
ಇವನಮ್ಮವ ಇವನಮ್ಮವನೆಂದೆನಿಸಯ್ಯ ಎನ್ನುವ ಮೂಲಕ ಇಡಿ ವಿಶ್ವಕ್ಕೆ ಸಂದೇಶ ನೀಡಿ. ಮನುಷ್ಯನಾಗಿ ಹುಟ್ಟಿದ ಮೇಲೆ ಇಲ್ಲಿ ಎಲ್ಲಾ ಸಮಾಜ ಹಾಗೂ ಜನಾಂಗದವರನ್ನು ಪ್ರೀತಿಯಿಂದ ಕಾಣಬೇಕು ಎಂಬ ದೊಡ್ಡ ಸಂದೇಶವನ್ನು ನೀಡಿದವರು ಭಕ್ತಿ ಭಂಡಾರಿ ಬಸವಣ್ಣನವರು. ಬಸವಣ್ಣನವರ ಹೋರಾಟ ಇಂದಿನ ಯುವಕರು ತಿಳಿಯಬೇಕು. ಮೂಢನಂಬಿಕೆ, ಕಂದಾಚಾರ, ಸಾಮಾಜಿಕ ಅಸಮಾನತೆ, ಪಕ್ಷಪಾತ, ಇನ್ನೂ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ದ ಬಸವಣ್ಣನವರು ನೆಡೆಸಿದ ಹೋರಾಟ ಆಧುನಿಕ ಭಾರತದ ಯುವ ಜನರಿಗೆ ತಿಳಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಹಾಂತೇಶ ಪಟ್ಟಣಶೆಟ್ಟಿ ಹಾಗೂ ನಾಗರತ್ನ ಪಟ್ಟಣಶೆಟ್ಟಿ ಹಾಗೂ ಬಸವಪರ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಬಸವಣ್ಣನವರ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















