ಬಳ್ಳಾರಿ / ಕಂಪ್ಲಿ : ಪಟ್ಟಣದ ಹಳೇ ಬಸ್ ನಿಲ್ದಾಣ ಬಳಿಯಲ್ಲಿ ಹಮಾಲರು ಸೇರಿದಂತೆ ಸಾರ್ವಜನಿಕರು ಕುಳಿತುಕೊಳ್ಳಲೆಂದು ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜಕುಮಾರ ಬಳಗದ ದೊಡ್ಡ ಅಭಿಮಾನಿ ಪೇಂಟರ್ ಉಪ್ಪಿರಾಜು ಇವರು ಉಚಿತವಾಗಿ ಎರಡು ಆಸನಗಳನ್ನು ಕೊಡುಗೆಯಾಗಿ ಶುಕ್ರವಾರ ನೀಡಿದರು. ನಂತರ ಪೇಂಟರ್ ಉಪ್ಪಿರಾಜ ಮಾತನಾಡಿ, ಇಲ್ಲಿನ ಹಳೆ ಬಸ್ ನಿಲ್ದಾಣ ಬಳಿಯಲ್ಲಿ ಹಮಾಲರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದ ಹಿನ್ನಲೆ ಅಲ್ಲಿನ ಸ್ಥಳದಲ್ಲಿ ಎರಡು ಆಸನಗಳನ್ನು ಹೊಸದಾಗಿ ತಂದು ಕೊಡುಗೆಯಾಗಿ ನೀಡಲಾಗಿದ್ದು, ಹಮಾಲರಿಗೆ ಕೆಲಸದ ಬಿಡುವಿನ ವೇಳೆಯಲ್ಲಿ ಆಸನದಲ್ಲಿ ವಿಶ್ರಾಂತಿ ಪಡೆಯಲು ಅನುವು ಮಾಡಿಕೊಡಲಾಗಿದೆ ಮತ್ತು ಈಗಾಗಲೇ ಮಹಾತ್ಮಗಾಂಧಿ ವೃತ್ತದಲ್ಲಿಯೂ ಸಹ ಎರಡು ಆಸನಗಳನ್ನು ಇರಿಸುವ ಮೂಲಕ ಸಾರ್ವಜನರಿಗೆ ಅನುಕೂಲ ಮಾಡಿಕೊಡಲಾಗಿದೆ. ದಿನ ನಿತ್ಯದಲ್ಲಿ ದುಡಿದ ಹಣದಲ್ಲಿ ಅಲ್ಪಸ್ವಲ್ಪ ಹಣವನ್ನು ಇಂತಹ ಸಮಾಜ ಸೇವಾ ಕಾರ್ಯಗಳಿಗೆ ಬಳಕೆ ಮಾಡುತ್ತೇನೆ ಇಂತಹ ಸಮಾಜಮುಖಿ ಕಾರ್ಯಕ್ಕೆ ದಿವಂಗತ ಡಾ.ಪುನೀತ್ ರಾಜಕುಮಾರ್ ಪ್ರೇರಣೆಯಾಗಿದ್ದಾರೆ. ಪ್ರತಿಯೊಬ್ಬರು ಸಮಾಜ ಸೇವಾ ಕಾರ್ಯಗಳನ್ನು ಮಾಡಿದಾಗ ಮಾತ್ರ ಜೀವನದ ಬದುಕು ಸಾರ್ಥಕವಾಗುತ್ತದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಬಜಾರ್ ಹಮಾಲರ ಸಂಘದವರು ಪೇಂಟರ್ ಉಪ್ಪಿರಾಜ ಇವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಜಾರ್ ಹಮಾಲರ ಸಂಘದ ಅಧ್ಯಕ್ಷ ಹುಸೇನಪ್ಪ, ಮುಖಂಡರಾದ ದೇವಪ್ಪ, ಗುಗ್ರಿಸ್ವಾಮಿ, ಮುನಿಯಪ್ಪ, ಮಲ್ಲಯ್ಯ, ಚಲುವಾದಿ ಬಾಬು, ಹನುಮಂತ ಸೇರಿದಂತೆ ಹಲವರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















