ದಿ:೨೦-೦೭-೨೦೧೬ ರ ರೀತ್ಯಾ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿದರನ್ವಯ ಬರುವ ಶ್ರೀ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ದೃಷ್ಠಿಯಿಂದ ಬೈಲಹೊಂಗಲ ಪುರಸಭೆಯಲ್ಲಿ ಗಣೇಶ ಮೂರ್ತಿ ತಯಾರಕರು, ಮಾರಾಟಗಾರರು ಮತ್ತು ಗಣೇಶ ಉತ್ಸವ ಮಂಡಳಿಯವರ ಸಭೆಯನ್ನು ಶ್ರೀ ವಿಜಯ ಶ್ರೀಶೈಲ ಬೋಳನ್ನವರ ಅಧ್ಯಕ್ಷರು ಪುರಸಭೆ, ಬೈಲಹೊಂಗಲ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:೦೪-೦೮-೨೦೨೫ ರಂದು ಪುರಸಭೆಯ ಸಭಾ ಭವನದಲ್ಲಿ ಏರ್ಪಡಿಸಲಾಯಿತು.
ಈ ವೇಳೆ ಮಾತನಾಡಿದ ಅಧ್ಯಕ್ಷರು ಸ್ಥಳೀಯ ಮೂರ್ತಿಕಾರರು ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ರಾಸಾಯನಿಕ ಬಣ್ಣದ ವಿಗ್ರಹ ತಯಾರಿಕೆ, ಮಾರಾಟ ಮಾಡದೇ ನೈಸರ್ಗಿಕ ಮಣ್ಣಿನಿಂದ ವಿಗ್ರಹಗಳನ್ನು ತಯಾರಿಸಲು ಹಾಗೂ ಗಣೇಶ ಉತ್ಸವ ಮಂಡಳಿಯವರು ನೈಸರ್ಗಿಕ ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವಂತೆ ಮತ್ತು ಗಣೇಶ ವಿಗ್ರಹಗಳನ್ನು ಜಲಮೂಲಗಳಾದ ಕೆರೆ, ಬಾವಿ, ನದಿಗಳಲ್ಲಿ ವಿಸರ್ಜನೆ ಮಾಡದೇ ಪುರಸಭೆಯಿಂದ ನಿಗಧಿಪಡಿಸಿದ ಕೃತಕ ಹೊಂಡಗಳಲ್ಲಿ ವಿಸರ್ಜನೆ ಮಾಡಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ತಿಳಿಸಿದರು.
ಶ್ರೀ ವಿರೇಶ ಹಸಬಿ ಮುಖ್ಯಾಧಿಕಾರಿಗಳು ಮಾತನಾಡಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಈಗಾಗಲೇ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣ ಲೇಪಿತ ವಿಗ್ರಹಗಳ ನಿಷೇಧವಿರುವುದರಿಂದ ಅಂತಹ ವಿಗ್ರಹಗಳ ತಯಾರಿಕೆ, ಸಂಗ್ರಹಣೆ, ಮಾರಾಟ, ಪ್ರತಿಷ್ಠಾಪನೆಯಾಗದಂತೆ ಪುರಸಭೆಯಿಂದ ನಿರಂತರ ಪರಿಶೀಲನೆ ಕೈಗೊಳ್ಳಲಾಗುತ್ತಿದ್ದು, ಮೂರ್ತಿ ತಯಾರಕರು, ಮಾರಾಟಗಾರರು, ಗಣೇಶ ಉತ್ಸವ ಮಂಡಳಿಯವರು ಮತ್ತು ಸಾರ್ವಜನಿಕರು ಪ್ರತಿವರ್ಷದಂತೆ ಈ ವರ್ಷವೂ ಕೂಡ ಜಲಮಾಲಿನ್ಯ ತಡೆಗೆ ಪುರಸಭೆಯೊಂದಿಗೆ ಸಹಕರಿಸಲು ಕೋರಿದರು.
ಸಭೆಯಲ್ಲಿ ಹಾಜರಿದ್ದ ಸ್ಥಳೀಯ ಮೂರ್ತಿಕಾರರು ಮಾತನಾಡಿ ನೈಸರ್ಗಿಕ ಮಣ್ಣಿನಿಂದ ಗಣೇಶ ವಿಗ್ರಹಗಳ ತಯಾರಿಸಿ ಮಾರಾಟ ಮಾಡುವುದಾಗಿ ತಿಳಿಸಿದರು ಹಾಗೂ ಪಟ್ಟಣದಲ್ಲಿ ಕೆಲವೊಂದು ಸಾರ್ವಜನಿಕ ಉತ್ಸವ ಮಂಡಳಿಯವರು ಪಿ.ಓ.ಪಿ. ವಿಗ್ರಹಗಳನ್ನು ತಂದು ಪ್ರತಿಷ್ಠಾಪನೆ ಮಾಡುತ್ತಿದ್ದು, ಉತ್ಸವ ಮಂಡಳಿಯವರು ಪ್ರತಿಷ್ಠಾಪಿಸಲಿರುವ ವಿಗ್ರಹಗಳ ಬಗ್ಗೆ ವಿದ್ಯುತ್ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಪುರಸಭೆಯಿಂದ ದೃಢೀಕರಿಸಿ ಎನ್.ಓ.ಸಿ. ಅಥವಾ ಅನುಮತಿ ನೀಡಲು ಕ್ರಮವಹಿಸಲು ತಿಳಿಸಿದರು ಹಾಗೂ ನೋಟಿಸ್ ಜಾರಿ ಮಾಡಿ ಪರ ಊರಿನಿಂದ ಪಿ.ಓ.ಪಿ. ಮೂರ್ತಿಗಳನ್ನು ತಂದು ಮಾರಾಟ ಮಾಡುವುದನ್ನು ತಡೆಯಲು ಚೆಕ್ ಪೋಸ್ಟ್ ತೆರೆದು ಪರಿಶೀಲನೆ ಮಾಡಿ ಜಪ್ತಿ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀ ಪ್ರಮೋದ ಯಲಿಗಾರ ಸಿ.ಪಿ.ಆಯ್. ರವರು ತಾಲೂಕಾ ಪಂಚಾಯತಿಯವರ ಜೊತೆ ಮಾತನಾಡಿ ಅವರು ಕಾರ್ಯಚರಣೆ ಕೈಗೊಂಡಲ್ಲಿ ಅದಕ್ಕೆ ಪೋಲಿಸ್ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಬುಡ್ಡೇಸಾಬ ಶಿರಸಂಗಿ ಉಪಾಧ್ಯಕ್ಷರು, ಶ್ರೀ ಸುರೇಶಗೌಡ ಎನ್. ಪಾಟೀಲ್ ಕಿರಿಯ ಆರೋಗ್ಯ ನಿರೀಕ್ಷಕರು, ಆರ್.ಟಿ.ಓ. ಇಲಾಖೆಯ ಶ್ರೀ ಅನಿಲಕುಮಾರ ಪಾತ್ರೋಟ್ ಮೋಟರ್ ವಾಹನ ನಿರೀಕ್ಷಕರು, ಸ್ಥಳೀಯ ಮೂರ್ತಿ ತಯಾರಕರು, ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳಿಯವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ ಮಂಜು ಎಂ.ಚಿಕ್ಕಣ್ಣವರ



















