ಶಿವಮೊಗ್ಗ/ ಭದ್ರಾವತಿ: ನ್ಯಾಯಬೆಲೆ ಅಂಗಡಿಗಳಿಗೆ ಈ ಹಿಂದಿನ ಪದ್ಧತಿಯಂತೆ 5ನೇ ತಾರೀಖಿನೊಳಗೆ ಪಡಿತರ ಪದಾರ್ಥಗಳನ್ನು ಎತ್ತುವಳಿ ಮಾಡಿಸಿ ಕೂಡಲೇ ಪಡಿತರ ವಿತರಣೆಗೆ ಕ್ರಮವಹಿಸಬೇಕು ಹಾಗೂ ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಹಂಚಿಕೆಯನ್ನು ವಿಳಂಬವಿಲ್ಲದೆ ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ ಕೃಷ್ಣಪ್ಪ (ಕೆ.ಕೆ) ಒತ್ತಾಯಿಸಿದರು.
ಹಳೆನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಹಾರ ಭದ್ರತೆ ಯೋಜನೆಯಡಿ ಕೇಂದ್ರ ಸರ್ಕಾರದ 5 ಕೆ.ಜಿ. ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ಆದರೆ ಪಡಿತರ ದಾಸ್ತಾನು ವಿವಿಧ ಕಾರಣಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ದಿನಾಂಕ 15ನೇ ತಾರಿಖಿನಿಂದ ಎತ್ತುವಳಿ ನೀಡಲಾಗುತ್ತಿದೆ. ಇದರಿಂದಾಗಿ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು 20ನೇ ತಾರೀಖಿನ ನಂತರ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರಿಂದಾಗಿ ಎತ್ತುವಳಿಗೂ ಸಹ ವಿಳಂಬವಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಳೆದ ಈ ಹಿಂದಿನ ಪದ್ಧತಿಯಂತೆ 5ನೇ ತಾರೀಖಿನೊಳಗೆ ಪಡಿತರ ಪದಾರ್ಥಗಳನ್ನು ಎತ್ತುವಳಿ ಮಾಡಿಸಿ ಕೂಡಲೇ ಪಡಿತರ ವಿತರಣೆ ಕ್ರಮವಹಿಸಬೇಕು. ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಹಂಚಿಕೆಯನ್ನು ವಿಳಂಬವಿಲ್ಲದೆ ನೀಡಬೇಕೆಂದು ಆಗ್ರಹಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ ಕಮೀಷನ್ ಹಣವನ್ನು ಆಯಾ ತಿಂಗಳಲ್ಲೇ ಪಾವತಿಗೆ ಕ್ರಮವಹಿಸಬೇಕು ಮತ್ತು ಸುಮಾರು 7 ವರ್ಷಗಳಿಂದ ಇ.ಕೆ.ವೈ.ಸಿ. ಮಾಡಿರುವ ಹಣವು ಸಹ ಬಂದಿರುವುದಿಲ್ಲ. ಈ ಕೂಡಲೇ ಇ.ಕೆ.ವೈ.ಸಿ. ಹಣವನ್ನು ಬಿಡುಗಡೆ ಮಾಡಿಕೊಡಬೇಕು ಹಾಗೂ ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ 24 ಗಂಟೆಗಳ ನಂತರ ಬಿಲ್ ಆಪ್ ಡೇಟ್ ಆಗುತ್ತಿದೆ. ಆದ್ದರಿಂದ ಕೂಡಲೇ ಈ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ವಿತರಣೆಗೆ ಅವಕಾಶ ಮಾಡಿಕೊಡಬೇಕು.
ಮಾರ್ಚ್ನಿಂದ ಜುಲೈವರೆಗೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ 5 ಕೆ.ಜಿ. ಕಮೀಷನ್ ಹಣ ಬಿಡುಗಡೆ ಮಾಡಿದ್ದಾರೆ. ಎನ್.ಎಫ್.ಎಸ್.ಐ. ಕಮೀಷನ್ ಹಣವನ್ನು ಏಪ್ರಿಲ್ ತಿಂಗಳು ಒಂದು ತಿಂಗಳು ಮಾತ್ರ ಬಿಡುಗಡೆಯಾಗಿದ್ದು ಮೇ-ಜೂನ್-ಜುಲೈ ಕಮೀಷನ್ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಬಿಡುಗಡೆ ಮಾಡಬೇಕೆಂದು ಸಂಘದ ರಾಜ್ಯ
ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಡಿತರ ವಿತರಕರ ಸಂಘದ ನಗರ ಅದ್ಯಕ್ಷ ನಾಗೇಶ್, ಪದಾಧಿಕಾರಿಗಳಾದ ರಾಜೇಂದ್ರ, ಕೃಷ್ಣೋಜಿ, ರಾಜೇಂದ್ರ, ಮಣಿ, ಸಚ್ಚಿದಾನಂದ ಮುಂತಾದವರು ಉಪಸ್ಥಿತರಿದ್ದರು.
ವರದಿ ಕೆ.ಆರ್. ಶಂಕರ್



















