
ಬೀದರ / ಬಸವಕಲ್ಯಾಣ : ನಮ್ಮ ಶುದ್ಧವಾದ ನಡತೆಯೇ ನಮಗೆ ಆಭೂಷಣ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ ಐದನೇ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಬಹಿರಂಗದಲ್ಲಿ ನಮ್ಮ ಈ ಸ್ಥೂಲ ದೇಹವನ್ನು ವಸ್ತ್ರ- ಆಭರಣಗಳಿಂಗ ಅಲಂಕರಿಸಬಹುದು. ಆದರೆ ಅಂತರಂಗದಲ್ಲಿ ಈ ಸೂಕ್ಷ್ಮ ದೇಹವನ್ನು ಅಂದರೆ ವ್ಯಕ್ತಿತ್ವ ಅಲಂಕಾರ ಮಾಡಲು ನಮ್ಮ ಶುದ್ಧವಾದ ನಡೆ – ನುಡಿಗಳೇ ಆಭೂಷಣಗಳು, ಮನುಷ್ಯ ಬಹಿರಂಗದಲ್ಲಿ ಅದೆಷ್ಟೇ ಬೆಲೆಬಾಳುವ ಆಭರಣಗಳನ್ನು ಧರಿಸಿದ್ದರೂ ನಡೆ – ನುಡಿ ಶುದ್ಧವಿಲ್ಲದ ಮನುಷ್ಯನಿಗೆ ಮನ್ನಣೆ ದೊರೆಯದು. ಹಾಗೆಯೇ ವಿಶೇಷ ಸನ್ಮಾನಕ್ಕೆ ಪಾತ್ರರಾದ ಜಾಫ಼ರವಾಡಿಯ ಶಾಂತವಿಜಯ ಪಾಟೀಲ ಅವರು ಕೃಷಿ ಕ್ಷೇತ್ರದಲ್ಲಿ ಶ್ರದ್ಧೆಯಿಂದ ದುಡಿದು ಸಾಧನೆ ಗೈದ ರೈತ. ಕಾರಣ ರೈತ ದೇಶದ ಬೆನ್ನೆಲುಬು. ಆದರೆ ರೈತರ ಬೆಳೆಗೆ ಸರಿಯಾದ ಬೆಲೆ ಸಿಕ್ಕಾಗ ಮಾತ್ರ ರೈತರ ಬದುಕು ಹಸನಗುತ್ತದೆ. ಈ ಸಾಧಕ ರೈತರನ್ನು ವಿಶೇಷ ಸನ್ಮಾನ ಗೈದು ಗೌರವಿಸಲಾಯಿತು ಎಂದು ನುಡಿದರು.
ಮುಖ್ಯ ಅತಿಥಿ ರವಿ ನಾಗನಕೆರೆ ಮಂಠಾಳ ಅವರು ಮೂಢನೇ ಇರಲಿ, ಪಾಪಿಯೇ ಇರಲಿ ಅವರನ್ನು ತನ್ನ ಉಪದೇಶದ ಮೂಲಕ ಸುಧಾರಿಸಿ ಸನ್ಮಾರ್ಗ ತೋರುವವರೇ ಸದ್ಗುರು. ಅಂಥ ಸದ್ಗುರುಗಳಾದ ಪೂಜ್ಯ ಅಭಿನವ ಶ್ರೀಗಳು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಶಿಕಾಂತ ಶೀಲವಂತ ಅವರು ಗವಿಮಠಕ್ಕೆ ಪೂಜ್ಯ ಅಭಿನವ ಶ್ರೀಗಳು ಪ್ರತಿ ವರ್ಷ ಶ್ರಾವಣಮಾಸದಲ್ಲಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ದ ಮೂಲಕ ನಮ್ಮೆಲ್ಲರಿಗೂ ಧರ್ಮ ಸಂಸ್ಕಾರ ಕೊಡುತ್ತಿರುವುದು ನಮ್ಮೆಲ್ಲರ ಭಾಗ್ಯ. ಅವರ ಕೃಪೆ ಸದಾ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸಿದರು.
ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಬಲವಂತ ಚಾಕುರೇ, ಶಾಂತವಿಜಯ ಪಾಟೀಲ ವೇದಿಕೆ ಮೇಲಿದ್ದರು.
ವಿಶೇಷ ಸನ್ಮಾನ:
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತ ಶ್ರೀ ಶಾಂತವಿಜಯ ಪಾಟೀಲ ಜಾಫರವಾಡಿ ಅವರಿಗೆ ಪೂಜ್ಯ ಗುರುಗಳು ವಿಶೇಷ ಸನ್ಮಾನ ಗೈದು ಗೌರವಿಸಿ ಆಶೀರ್ವದಿಸಿದರು.
ಭಜನೆ: ಶಿವಪೂರದ ಭಜನಾ ಮಂಡಳಿ ಯವರು ಜಪ, ಭಜನೆ ಮಾಡಿದರು.
ಶರಣಬಸವ ಅಲಗುಡೆ ಪ್ರಾರ್ಥನಾಗೀತೆ ಹಾಡಿದರು. ಪ್ರೊ. ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗುಡೆ ಸಂಚಾಲನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ರಾಕೇಶ ಪುರವಂತ, ಷಣ್ಮುಖಯ್ಯ ಸ್ವಾಮಿ, ಮಡಿವಾಳಪ್ಪ ಕಲ್ಯಾಣಿ, ಪ್ರದೀಪ ಬಿರಾದಾರ, ರಮೇಶ ತೊಗರಖೇಡೆ, ಸವಿತಾ ರಮೇಶ ಸ್ವಾಮಿ, ರೇಖಾ ಚಿಟ್ಟೆ, ಸುರೇಖಾ ಸಜ್ಜನಶೆಟ್ಟಿ, ಶಕುಂತಲಾ ಮಠ, ಶಿವಲೀಲಾ ಬಿರಾದಾರ ಮೊದಲಾದ ಭಕ್ತರು ಪಾಲ್ಗೊಂಡಿದ್ದರು.
ವರದಿ : ಶ್ರೀನಿವಾಸ ಬಿರಾದಾರ



















