ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತಿ, ಸಂಘಟಕ, ಪರಿಸರ ಚಿಂತಕ, ನೇತ್ರದಾನಿ, ದೇಹದಾನಿ, ಕನ್ನಡಪರ ಚಿಂತಕ: “ಭೇರ್ಯ ರಾಮಕುಮಾರ್”

“ಭೇರ್ಯ ರಾಮ್ ಕುಮಾರ್” ಈ ಹೆಸರು ಎಲ್ಲರಿಗೂ ಚಿರಪರಿಚಿತ!. ಇವರು ಪತ್ರಕರ್ತರಾಗಿ, ಲೇಖಕರಾಗಿ, ಸಂಘಟಕರಾಗಿ, ಮುಖ್ಯವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೂಡ ಆಸಕ್ತಿ ವಹಿಸಿ, ಪುಸ್ತಕಗಳನ್ನು ಕೂಡಾ ಬರೆದು, ಅನೇಕ ಕವಿಗೋಷ್ಠಿಗಳನ್ನು ಹಮ್ಮಿಕೊಂಡು ಹೊಸ ಕವಿ, ಲೇಖಕರಿಗೆ ಒಂದು ವೇದಿಕೆಯನ್ನು ಕಲ್ಪಿಸಿ, ಅವರಿಗೆ ಪ್ರಶಸ್ತಿಗಳನ್ನು ಕೂಡಾ ನೀಡಿ ಸನ್ಮಾನಿಸಿ, ತಾವು ಬೆಳೆದು ಇತರರನ್ನು ಕೂಡಾ ಬೆಳೆಸುತ್ತಿದ್ದಾರೆ.
ಮುಖ್ಯವಾಗಿ ಸಮಾಜಮುಖಿ ಚಿಂತನೆಗಳೊಂದಿಗೆ ಒಂದಲ್ಲಾ ಒಂದು ಕೆಲಸವನ್ನು ಮಾಡುತ್ತಾ ಬಂದಿರುವ ಇವರು ಇವತ್ತಿಗೂ ಕೂಡ ಸರಳ ಸಜ್ಜನಿಕೆಯಿಂದ, ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇವರು 1964 ರ ಏಪ್ರಿಲ್ 18 ರಂದು ರಾಮನವಮಿಯಂದು ಜನಿಸಿದರು. ತಂದೆ ಶ್ರೀಕಂಠ ಮೂರ್ತಿ. ಬಿ. ಎಚ್., ವೃತ್ತಿಯಲ್ಲಿ ಶಿಕ್ಷಕರು. ಪ್ರವೃತ್ತಿಯಲ್ಲಿ ಸಮಾಜಸೇವಕರು. ತಾಯಿ ಶ್ರೀಮತಿ ಪ್ರೇಮಲೀಲಾ ಗೃಹಿಣಿ. ಬಡವರನ್ನು, ತಂದೆ- ತಾಯಿ ಇಲ್ಲದ ಮಕ್ಕಳನ್ನು ಕಂಡರೆ ಅಪಾರ ಅನುಕಂಪ.
ಈ ಸಂಸ್ಕಾರಯುತ ಕುಟುಂಬದಲ್ಲಿ ಬೆಳೆದ ರಾಮಕುಮಾರ್ ರವರು ತಮ್ಮ ಜೀವನದುದ್ದಕ್ಕೂ ಕೂಡಾ ಒಂದಲ್ಲ ಒಂದು ಕಷ್ಟಗಳ ಸುರಿಮಳೆಯಲ್ಲಿ ಬೆಂದು, ಮಿಂದೆದ್ದಿದ್ದಾರೆ. ಒಂದು ರೀತಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಇವರು!.
ಎಷ್ಟೇ ಕಷ್ಟಗಳು ಬಂದರೂ ಕೂಡ ಕಷ್ಟ ಮತ್ತು ಸುಖಗಳನ್ನು ಒಂದು ನಾಣ್ಯದ ಎರಡು ಮುಖಗಳಂತೆ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಮುಂದೆ ಸಾಗಿದವರು. ಸತತ ಪರಿಶ್ರಮ, ಹಿರಿಯ ಸಾಹಿತಿಗಳ ಒಡನಾಟ, ಹಲವರ ಪ್ರೋತ್ಸಾಹದಿಂದಾಗಿ ಇವರು ಮುಂದೆ ಬಂದರು.
ಇವರ ತಾತ ಹನುಮಂತ ಮೂರ್ತಿ ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಗ್ರಾಮೀಣ ಜನರ ಸಮಸ್ಯೆಗಳಿಗೆ ಪ್ರತಿ ನಿತ್ಯ ಸ್ಪಂದನೆ. ತಮ್ಮ ಸರಳ ಜೀವನದಿಂದಾಗಿ ಜನರ ಬಾಯಲ್ಲಿ ಭೇರ್ಯದ ಗಾಂಧಿ ತಾತ ಆಗಿದ್ದರು.
ಬೆಳಿಗ್ಗೆ ಗ್ರಾಮೀಣ ಜನರ ಸಮಸ್ಯೆಗಳಿಗೆ ಸಲಹಾ ಕೇಂದ್ರ. ರಾತ್ರಿ ಮಕ್ಕಳಿಗೆ ಪಾಠ ಹೇಳುವ ಮನೆ. ತಂದೆ ಹಾಗೂ ತಾತನ ಜ್ಯಾತ್ಯತೀತ ಚಿಂತನೆ, ಸೇವಾ ಮನೋಭಾವ ಪ್ರಭಾವ ಬೀರಿತು ಎನ್ನುತ್ತಾರೆ ರಾಮ್ ಕುಮಾರ್.
ತಂದೆ ತಾಯಿಗೆ ಹತ್ತು ವರ್ಷ ಮಕ್ಕಳಿರಲಿಲ್ಲ. ನಂತರ ನಾನು ಜನಿಸಿದ ಇವರಿಗೆ ಪೋಲಿಯೋದಿಂದಾಗಿ ಎರಡೂ ಕಾಲಿನ ಪಾದಗಳು ಊನ ಆಗಿದ್ದವು. ಅಪ್ಪ ಆಗಿನ ಕಾಲದಲ್ಲೇ ಮೈಸೂರು, ಬೆಂಗಳೂರು ಸುತ್ತಿದರು. ಎಲ್ಲೂ ಗುಣ ಕಾಣಲಿಲ್ಲ. ಕೊನೆಗೆ ಭೇರ್ಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದ ಡಾ.ಶಿವಕುಮಾರ್ ಆಗ ದೊರೆಯುತ್ತಿದ್ದ ಪರಿಕರಗಳಲ್ಲೇ ಪ್ಲಾಸ್ಟರ್ ಮಾಡಿದ್ದರು. ಕೊನೆಗೆ ತೆವಳಬೇಕ್ಕಿದ್ದ ನಾನು ನಡೆಯುವಂತೆ ಆಯ್ತು!. ಈಗಲೂ ಭಾಗಶ: ಅಂಗ ವಿಕಲತೆ ಕಾಡುತ್ತಿದೆ. ತಮ್ಮ ಸೇವೆಗಾಗಿ ಡಾ. ಶಿವಕುಮಾರ್ ಯಾವ ಪ್ರತಿಫಲ ಬಯಸಲಿಲ್ಲ. ಹೀಗಾಗಿ ರಾಮಮೂರ್ತಿ ಆಗಿದ್ದ ನಾನು ವೈದ್ಯರ ನೆನಪಿನಲ್ಲಿ ರಾಮಕುಮಾರ್ ಅದೆ ಎನ್ನುತ್ತಾರೆ.

ಭೇರ್ಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳಿ ನಲ್ಲಿ ಹೈಸ್ಕೂಲ್, ಕೆ. ಆರ್. ನಗರದ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಪಿ. ಯು. ಸಿ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.
ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾರಂತ ವನಕ್ಕೆ ಭೇಟಿ ನೀಡಿದ್ದರಂತೆ. ಅದೃಷ್ಟವಶಾತ್ ಡಾ. ಶಿವರಾಮ ಕಾರಂತರ ಭೇಟಿ ಆಯಿತು. ಅವರು ಹಿರಿಯ ಸಾಹಿತಿಗಳು. ನಮ್ಮನ್ನು ಮಾತನಾಡಿಸುತ್ತಾರೆಯೇ ಎಂಬ ಅನುಮಾನ ಕಾಡುತ್ತಿತ್ತು. ಆದ್ರೆ ಕಾರಂತರ ಮಕ್ಕಳ ಜೊತೆ ಮಕ್ಕಳೇ ಆದರು. ನಮಗೆ ಕತೆಗಳನ್ನು ಹೇಳಿದರು. ಯಕ್ಷಗಾನದ ಮಟ್ಟು ( ಹೆಜ್ಜೆಗಳು ) ಗಳನ್ನು ಹಾಕಿ ನಮ್ಮನ್ನು ಕುಣಿಸಿದರು. ಅಂದು ನನಗೆ ಸಾಹಿತಿಗಳ ಬಗ್ಗೆ ಅಭಿಮಾನ ಮೂಡಿತು. ಮುಂದೆ ನಾನು ಸಾಹಿತ್ಯ ರಚಿಸಲು, ಸಾಹಿತ್ಯ ಸಂಘಟನೆ ಮಾಡಲು ಇದೇ ಸ್ಫೂರ್ತಿ ಆಯಿತು ಎನ್ನುತ್ತಾರೆ.
ಇವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ಮೈಸೂರಿನಲ್ಲಿ ಗೋಕಾಕ ವರದಿ ಜಾರಿಗೆ ಬಂದು ಹೋರಾಟ ಆರಂಭಗೊಂಡಿತ್ತು. ವಿದ್ಯಾರ್ಥಿ ಆಗಿದ್ದ ಇವರು ಕೂಡಾ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಲ್ಲಿ ಹಿರಿಯ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ಹಾ. ಮಾ. ನಾಯಕ್, ಎಚ್ ಎಸ್ ಕೆ, ಡಾ. ಸಿ ಪಿ ಕೆ, ಮಳಲಿ ವಸಂತ ಕುಮಾರ್, ಕೆ. ರಾಮದಾಸ್, ನಾ. ನಾಗಾಲಿಂಗಸ್ವಾಮಿ ಮೊದಲಾದ ಕನ್ನಡಪರ ಚಿಂತಕರ ಸಂಪರ್ಕ ದೊರೆಯಿತು. ಇದು ಇವರ ಜೀವನದ ಮೇಲೆ ಅಪಾರ ಪರಿಣಾಮ ಬೀರಿತು.
ನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಬಿ. ಇಡಿ. ಪದವಿ ನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಅಂದಿನ ದಿನಪತ್ರಿಕೆಗಳಲ್ಲಿ ಕತೆ, ಕವನ, ಸಾರ್ವಜನಿಕ ಸಮಸ್ಯೆ ಕುರಿತು ಪತ್ರ ಬರೆಯುವಿಕೆ. ಪದವಿ ಓದುತ್ತಿದ್ದಾಗಲೇ 1985 ರಲ್ಲಿ ಗ್ರಾಮೀಣ ಲೇಖಕರು, ಕಲಾವಿದರು, ಜಾನಪದ ಕಲಾವಿದರು, ರಂಗಭೂಮಿ ಕಲಾವಿದರು, ಗ್ರಾಮೀಣ ಆಯುರ್ವೇದ ಚಿಂತಕರನ್ನು ಗುರುತಿಸಿ, ಗೌರವಿಸುವ ಸಲುವಾಗಿ ” ಗ್ರಾಮಾಂತರ ಬುದ್ದಿಜೀವಿಗಳ ಬಳಗ ” ದ ಸ್ಥಾಪನೆ ಮಾಡಿದರು. ಭೇರ್ಯ ಗ್ರಾಮದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರಿಂದ ಸಂಸ್ಥೆ ಉದ್ಘಾಟನೆ ಮಾಡಲು ಆಗಮಿಸಿದ್ದರು. ನದಿ ತೀರದಲ್ಲಿ, ಶಾಲಾ ಬಯಲಿನಲ್ಲಿ, ತೋಟಗಳಲ್ಲಿ ಮನೆ ಮನೆ ಕವಿಗೋಷ್ಠಿ ಸಂಘಟನೆ ಮೂಲಕ ವಾಸ ಶಕೆಯನ್ನು ಆರಂಭಿಸಿ ಬಿಟ್ಟರು. 1985 ರ ಆಗಸ್ಟ್ 15 ರಿಂದ 2005 ರ ಆಗಸ್ಟ್ 15 ರ ವರೆಗೆ 200 ಮನೆ ಮನೆ ಕವಿಗೋಷ್ಠಿಗಳು. ನಂತರ ರಾಜ್ಯಮಟ್ಟದ ಸಾಹಿತ್ಯೋತ್ಸವಗಳ ಸಂಘಟನೆ. ಇವರು ಇದುವರೆಗೆ 356 ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅಲ್ಲದೆ ಪ್ರತಿ ಕಾರ್ಯಕ್ರಮದಲ್ಲೂ ವಿಶೇಷ ಚೇತನ ಕವಿಗಳಿಗೆ ಪುರಸ್ಕಾರ, ಪ್ರತಿ ಕಾರ್ಯಕ್ರಮದಲ್ಲೂ ತಲಾ 200 ಸಸಿಗಳ ವಿತರಣೆ ಹಾಗೂ ಪರಿಸರ ಸಂರಕ್ಷಿಸುವುದಾಗಿ ಪ್ರತಿಜ್ಞೆ. ಸಾಮೂಹಿಕ ನೇತ್ರಾದಾನ ಕಾರ್ಯಕ್ರಮ. ಇದುವರೆಗೆ ಸುಮಾರು ಹತ್ತು ಸಾವಿರ ಸಸಿಗಳ ವಿತರಣೆ ಮಾಡಿದ್ದಾರೆ.
ಸದ್ದಿಲ್ಲದೆ ತಮ್ಮ ಕೆಲಸವನ್ನು ಮಾಡುತ್ತಾ ಹೋಗುತ್ತಿರುವ ಇವರಿಗೆ ದೊರೆತಿರುವ ಪ್ರಶಸ್ತಿಗಳು ಅಪಾರ. ಮುಖ್ಯವಾಗಿ
1990 ರಲ್ಲಿ ಕೇಂದ್ರ ಸರ್ಕಾರದ ನೆಹರೂ ಯುವ ಪ್ರಶಸ್ತಿ.
1993 ರಲ್ಲಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ
ಹೊರನಾಡು ಕನ್ನಡ ಸಂಘ ಕೇರಳ.
1995 ಶ್ರೀ ರಾಘವೇಂದ್ರ ಸದ್ಭಾವನ ಪ್ರಶಸ್ತಿ, ಕನ್ನಡ ಸಂಘ, ಮಂತ್ರಾಲಯ.
2010 ಕಾಯಕ ರತ್ನ ಪ್ರಶಸ್ತಿ
ದಾವಣಗೆರೆ.
2015 ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ
ಗಡಿನಾಡು ಕನ್ನಡ ಸಂಘ ಉಡುಪಿ.
2016 ಬೆಳದಿಂಗಳ ಸಾಹಿತ್ಯೋತ್ಸವ ಸನ್ಮಾನ
ಬೆಳದಿಂಗಳ ಸಾಹಿತ್ಯ ಸಮಿತಿ, ಕಾರ್ಕಳ.
2016 ದಸರಾ ಸಾಹಿತ್ಯೋತ್ಸವ ಸನ್ಮಾನ ಶತಮಾನೋತ್ಸವ ಆಚರಿಸುತ್ತಿರುವ ಕನ್ನಡ ಸಂಘ, ರಾಣಿ ಬೆನ್ನೂರು.
2017 ಪರಿಸರ ರತ್ನ ಪ್ರಶಸ್ತಿ
ಪರಿಸರ ಸೇವಾ ಸಂಸ್ಥೆ, ಕೊಡಗು.
2020 ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೆ. ಆರ್. ನಗರ.
2023 ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
2024 ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ.
2025 ಚಾಣಕ್ಯ ಅಕಾಡೆಮಿಯವರಿಂದ ಚಾಣಕ್ಯ ಅಂತರ ರಾಷ್ಟ್ರೀಯ ಪ್ರಶಸ್ತಿ.
ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸುಮಾರು ಐದು ನೂರಕ್ಕೂ ಹೆಚ್ಚು ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ ಮತ್ತಷ್ಟು ಸಾಧನೆ ಬಗ್ಗೆ ಹೇಳುವುದಾದರೆ…
ಅಲ್ಲದೆ ಮುಖ್ಯವಾಗಿ ಇವರು ಏಳು ಸಾವಿರ ಜನರಿಂದ ನೇತ್ರಾದಾನಕ್ಕೆ ಒಪ್ಪಿಗೆ ಪತ್ರ ನೀಡಲು ಪ್ರೇರಕರಾಗಿದ್ದಾರೆ.
ಅಲ್ಲದೆ ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪರಿಸರ ಕುರಿತು, “ಕನ್ನಡ” ನಾಡು- ನುಡಿ ಕುರಿತು ಉಪನ್ಯಾಸ, ಕನ್ನಡ ಭಾಷೆ ಬಳಸದಿರುವ ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಹಾಗೂ ನಾಮಫಲಕಗಳ ವಿರುದ್ಧ ಸುಮಾರು 200 ಲಿಖಿತ ದೂರು ನೀಡಿಕೆ ಮುಂತಾದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ.

ಮೈಸೂರಿನ ಪತ್ರಿಕೆಗಳಾದ ಆರತಿ, ಮೈಸೂರು ಮಿತ್ರ, ಸಂಜೆ ಸಮಾಚಾರ, ಸುದ್ದಿ ಸಂಭ್ರಮ ಹಾಗೂ ವಾಂಚಲ್ಯ ಮುಂತಾದ ದಿನ, ವಾರಪತ್ರಿಕೆಗಳಲ್ಲಿ ಪತ್ರಕರ್ತರಾಗಿ, ಉಪ ಸಂಪಾದಕರಾಗಿ ಕೆಲಸಮಾಡಿ ಸ್ವಂತ “ಸಾಹಿತ್ಯ ಲೋಕ” ಮಾಸ ಪತ್ರಿಕೆ ಸಂಪಾದಕರಾದರು.
ಕಳೆದ ಹತ್ತು ವರ್ಷಗಳಿಂದ ದೇಹದಾನಕ್ಕೆ ಮನಸ್ಸಿನ ತುಡಿತ. ಪತ್ನಿಯ ಅನಾರೋಗ್ಯ, ಮೂರು ತಿಂಗಳಿನಲ್ಲಿ ತಾಯಿ ಹಾಗೂ ತಂದೆಯ ವಯೋ ಸಹಜ ಮರಣ,
ದೇಹದಾನದ ಮುಲಕ ಇತರರಿಗೆ ಬೆಳಕಾಗುವ ಹಂಬಲ, ಪತಿಯ ನಿರ್ಧಾರಕ್ಕೆ ಪತ್ನಿಯ ಬೆಂಬಲ, ಇತ್ತೀಚಿಗೆ ತಾನೇ ಭೇರ್ಯ ರಾಮಕುಮಾರ್ ದಂಪತಿಗಳು ಮೈಸೂರು ವೈದ್ಯಕೀಯ ಕಾಲೇಜಿಗೆ ದೇಹದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಈಗಾಗಲೇ ಇಬ್ಬರೂ ನೇತ್ರಾದಾನ ಮಾಡಿದ್ದಾರೆ.
ಒಟ್ಟಿನಲ್ಲಿ ಸದಾ ಸಮಾಜಮುಖಿ ಚಿಂತನೆಗಳೊಂದಿಗೆ ಮುಂದೆ ಮುಂದೆ ಸಾಗುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಕೂಡ ಅವರಿಗೆ ತೃಪ್ತಿ ಎನ್ನುವುದು ಇಲ್ಲ. ಮತ್ತಷ್ಟು ಕೆಲಸ ಮಾಡುವ ಶಕ್ತಿಯನ್ನು ಭಗವಂತ ನೀಡಲಿ.

  • ಕಾಳಿಹುಂಡಿ ಶಿವಕುಮಾರ್, ಸಾಹಿತಿಗಳು
    ಮೈಸೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!