ಬಳ್ಳಾರಿ / ಕಂಪ್ಲಿ : ಆದಿವಾಸಿ ಮತ್ತು ಅಲೆಮಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾ ತಾಲೂಕು ಘಟಕದಿಂದ ರಾಜ್ಯ ಉಪಾಧ್ಯಕ್ಷ ಜಿ.ಮಾಧವರಾಜ ಅವರ ಸಮ್ಮುಖದಲ್ಲಿ ಪಟ್ಟಣದ ತಹಶೀಲ್ದಾರ್ ಜೂಗಲ್ ಮಂಜುನಾಥ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸುವ ಮೂಲಕ 31ನೇ ವಿಶ್ವ ಆದಿವಾಸಿ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು.
ನಂತರ ರಾಜ್ಯ ಸಂಘಟನಾ ಕಾರ್ಯದರ್ಶಿ ಹೆಚ್.ಪಿ.ಶಿಕಾರಿ ರಾಮು ಮಾತನಾಡಿ, ವಿಶ್ವ ಆದಿವಾಸಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು 1994ರ ಡಿಸೆಂಬರ್ 23ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಿ, ಚಿಂತಿಸಿ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆದಿವಾಸಿಗಳ ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಪರಿಸರ, ಮಾನವ ಹಕ್ಕುಗಳ ಸಂರಕ್ಷಣೆ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಪರಿಶೀಲನೆ ಮತ್ತು ನೆನಪಿಸುವ ಸಲುವಾಗಿ 1995ರ ಆಗಸ್ಟ್ 9ರ ದಿನವನ್ನು ವಿಶ್ವ ಆದಿವಾಸಿ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಪ್ರತಿ ವರ್ಷದ ದಿನಾಚರಣೆಯನ್ನು ಬೇರೆ ಬೇರೆ ತರನಾಗಿ ಆಚರಿಸಿಕೊಂಡು ಬಂದಿದ್ದು, ಈ ಬಾರಿಯ ದಿನಾಚರಣೆಯಲ್ಲಿ ಆದಿವಾಸಿ ಮತ್ತು ಅಲೆಮಾರಿಗಳಿಗೆ ಸಂಪೂರ್ಣವಾಗಿ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಮುಂದಾಗಬೇಕು. ಭೂರಹಿತರಿಗೆ ಭೂಮಿ ಮಂಜೂರು ಮಾಡಿಕೊಡಬೇಕು. ಭೂರಹಿತ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಮೂರು ತಿಂಗಳು ಗತಿಸಿದೆ. ಆದರೆ, ಇಲ್ಲಿವರೆಗೂ ಅಧಿಕಾರಿಗಳು ಪ್ರಮಾಣ ಪತ್ರ ಒದಗಿಸುವ ಸೋಜಿಗೆ ಹೋಗಿಲ್ಲ. ಆದಿವಾಸಿ ಮಕ್ಕಳಿಗೆ ವಸತಿ ಶಾಲೆಯಲ್ಲಿ ನೇರ ನೇಮಕಾತಿ ಮಾಡಬೇಕು. ಆದಿವಾಸಿ ಕಾಲೋನಿಯಲ್ಲಿ ಸಮುದಾಯ ಭವನ ಮಂಜೂರು ಮಾಡಬೇಕು. ಆದಿವಾಸಿ ಮೂಲ ಕಲೆ ಮತ್ತು ಗಿಡ ಮೂಲಿಕೆ ಔಷಧ ಕಣ್ಮರೆಯಾಗುತ್ತಿದ್ದು, ಇದನ್ನು ಉಳಿಸಿಕೊಂಡು ಹೋಗಲು ಕ್ರಮಕೈಗೊಳ್ಳಬೇಕು. ಪ್ರತಿ ವರ್ಷ ಮೂಲ ಬುಡಕಟ್ಟು ಕಲಾ ಉತ್ಸವವನ್ನು ಸರ್ಕಾರವೇ ನೇರವಾಗಿ ಆಚರಿಸಬೇಕು. ಹೀಗೆ ಆದಿವಾಸಿ ಮತ್ತು ಅಲೆಮಾರಿಗಳ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಫಾರ್ದಿ ಅರಣಾ ಶಿಕಾರಿ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ಜಾನಕಿ, ಸುಡಗಾಡು ಸಿದ್ದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣ ಹುಲುಗಪ್ಪ, ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಮಹಾಸಭಾದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ, ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಸದಸ್ಯ ರಾಹುಲ್ ನಾಗಪ್ಪ, ಬಳ್ಳಾರಿ ಜಿಲ್ಲಾ ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ಪಿ.ಶ್ರೀಕಾಂತ, ಹಕ್ಕಿ ಪಿಕ್ಕಿ ಅರಣಿ ಶಿಕಾರಿ ಯುವಕರ ಕಲ್ಯಾಣ ಸಂಘದ ಅಧ್ಯಕ್ಷ ಹರಿಕೃಷ್ಣ, ಆದಿವಾಸಿ ಮೇಧ ಅಭಿವೃದ್ಧಿ ಸಂಘದ ಅಧ್ಯಕ್ಷ ಗಾಳಿಕುಮಾರ, ಮುಖಂಡರಾದ ಜೆ.ಮಾರೆಪ್ಪ, ವೈ.ಶಿವುಕುಮಾರ, ಹೆಚ್.ಪಿ.ಈರಣ್ಣ, ಬಾಲಚಂದ್ರ, ಶಿಕಾರಿಬಾಬು, ಮಹಾದೇವಿ, ದುರ್ಗಮ್ಮ, ನೀಲಮ್ಮ, ಸುಶೀಲಮ್ಮ, ಗಂಗಮ್ಮ, ಗೀತಾ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















