
ಬೆಂಗಳೂರು: ಇಂದು ಸಾಮಾಜಿಕ ಜಾಗೃತಿ ಕೇವಲ ಕಾಗದದಲ್ಲಿ ಮಾತ್ರ ಪ್ರಚಲಿತವಿದೆ, ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಅನೇಕ ವಿಘ್ನಗಳು ಎದುರಾಗುತ್ತವೆ, ಅಸೂಯೆ, ಅಹಂಕಾರಗಳನ್ನು ನಮ್ಮ ಮನದಿಂದ ಅಳಿಸಬೇಕಾಗಿರುವುದು ಇಂದಿನ ಕಾಲಘಟ್ಟದಲ್ಲಿ ಜರೂರು ಸ್ಥಾಪಿಸಬೇಕಾದ ವಿಷಯವಾಗಿದೆ, ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ತೋರಿಸಲು ಮತ್ತು ತಮ್ಮಲ್ಲಿ ಅಡಗಿರುವ ಸಾಮರ್ಥ್ಯವನ್ನು ಎತ್ತಿ ತೋರಿಸಲು ವಿಕಲಚೇತನ ವರ್ಗವು ನಿರಂತರವಾಗಿ ಶ್ರಮಿಸುತ್ತಾ ಇದೆ, ಅವರ ಸಮಸ್ಯೆ ಪರಿಹಾರಕ್ಕಾಗಿ ಎಲ್ಲರ ಬೆಂಬಲ ನಿರೀಕ್ಷಿಸಿದ್ದೇನೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ನುಡಿದರು. ಅವರು ಇತ್ತೀಚಿಗೆ ಬೆಂಗಳೂರಿನ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಆಯೋಜಿಸಿದ ಆರೋಗ್ಯ ಸಲಹೆ, ಸನ್ಮಾನ, ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಕಲಚೇತನರ ಏಳಿಗೆಗಾಗಿ, ಸಾವಿರಾರು ಮಂದಿ ವಿಕಲಚೇತನರಿಗೆ ವಿವಿಧ ವಿಷಯಗಳ ಮೇಲೆ ಮಾರ್ಗದರ್ಶನ ಮಾಡಿದ್ದಕ್ಕೆ ಹೆಮ್ಮೆ ಇದೆ ,ಅಲ್ಲದೆ ಸದಾ ವ್ಹೀಲ್ ಚೇರ್ ಮೇಲೆ ಕುಳಿತು ಇಂಥ ಸಂಘಟನೆಯನ್ನು ಮುನ್ನಡೆಸಿದ ಶ್ರೀಮತಿ ಲಕ್ಷ್ಮಿ ಆರ್. ನಿಜಾಮುದ್ದೀನ್, ಶ್ರೀಮತಿ ಕೆ. ಎಸ್. ನಾಗರತ್ನ ಹಾಗೂ ಅವರ ಪತ್ನಿಯನ್ನು ಉದಾಹರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ರಾಜೀವ ಗಾಂಧಿ ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾದ ಡಾಕ್ಟರ್ ದೀಪಾ ವಿ. ಅವರು ಮಾತನಾಡುತ್ತಾ ನಮ್ಮ ಬಾಯಿ ನಮ್ಮ ದೇಹದ ಬಾಗಿಲು, ಬಾಯಿ-ದೇಹದ ಸಂಪರ್ಕ ಹಾಗೂ ಅದರ ಮಹತ್ವ, ಹಲ್ಲಿನ ಮಾಂಸಕೋಶಗಳ (ಗಮ್) ರೋಗದಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳು, ಬಾಯಿ ಆರೈಕೆ ವಿಧಾನಗಳು, ಆರೋಗ್ಯಕರ ಹಲ್ಲು, ಆರೋಗ್ಯಕರ ದೇಹ ಕುರಿತು ಮನೋಜ್ಞವಾಗಿ ತಿಳಿಸಿ ಸಭಿಕರ ಅನೇಕ ಸಂದೇಹಗಳಿಗೆ ಸಮಾಧಾನ ನೀಡಿದರು.
ಕಾರ್ಯಕ್ರಮದಲ್ಲಿ 83 ರ ಹರೆಯದ 400 ಕ್ಕೂ ಹೆಚ್ಚು ಕೃತಿ ರಚಿಸಿದ, ಜಾನಪದ ವಿದ್ವಾಂಸ, ಆಕಾಶವಾಣಿ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿಯಾದ ಡಾ. ಬಿ ಸಿದ್ದಲಿಂಗಸ್ವಾಮಿ ಹಾಗೂ 300 ಕ್ಕೂ ಹೆಚ್ಚು ಕೃತಿ ರಚಿಸಿದ/ ಸಂಪಾದಿಸಿದ ಕನ್ನಡ- ಕೊಂಕಣ ಸೇತುವೆ, ಲೋಕಮಿತ್ರ ಶಾ. ಮಂ. ಕೃಷ್ಣರಾಯ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ ಎಸ್ ಸ್ವಾಮಿ ಅವರು ಮಾತನಾಡಿ, ಶಾ. ಮಂ. ಕೃಷ್ಣರಾಯರು ಕನ್ನಡಕ್ಕಾಗಿ ಹೋರಾಡಿದ ಅಪ್ಪಟ ಸಾಹಿತಿ, ಜೀವನದಲ್ಲಿ ಅನೇಕ ಸಂದಿಗ್ಧಗಳನ್ನು ಎದುರಿಸಿ, ಕನ್ನಡಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ, ಅವರು ಸದಾ ಬೇರೆಯವರ ಉದ್ಧಾರಕ್ಕಾಗಿಯೇ ಪರಿತಪಿಸುತ್ತಿದ್ದರು ತಮಗಾಗಿ ಏನನ್ನೂ ಬಯಸುತ್ತಿರಲಿಲ್ಲ ;ಅವರ ಜೀವನವೇ ಒಂದು ಮಾದರಿ ಹಾಗೂ ಅವರು ಲೋಕ ಮಿತ್ರರಾಗಿದ್ದರು ಎಂದು ಆಕಾಶವಾಣಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ, ಜಾನಪದ ಸಾಹಿತ್ಯ ಕುರಿತು 17 ಸಂಪುಟಗಳನ್ನು ರಚಿಸಿದ, ಸಾಹಿತ್ಯದ ಎಲ್ಲಾ ಪ್ರಕಾರಗಳ 400ಕ್ಕೂ ಹೆಚ್ಚು ಕೃತಿ ರಚನೆ ಮಾಡಿದ ಜಾನಪದ ವಿದ್ವಾಂಸ ಡಾ. ಬಿ ಸಿದ್ದಲಿಂಗಸ್ವಾಮಿ ನುಡಿದರು.
ಸನ್ಮಾನಕ್ಕೆ ಉತ್ತರಿಸಿದ ಶಾ. ಮಂ. ಕೃಷ್ಣರಾಯ ಅವರು, ಯಾವುದೇ ವಿಶ್ವವಿದ್ಯಾನಿಲಯ, ಪ್ರಾಧಿಕಾರ, ಅಕಾಡೆಮಿಗಳು ಮಾಡಿರದಂತಹ ಜಾನಪದ ಸಾಹಿತ್ಯದ 17 ಸಂಪುಟಗಳನ್ನು ಕನ್ನಡ ಲೋಕಕ್ಕೆ ನೀಡಿರುವ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಯಾರೂ ಸೂಚಿಸಿರದಿದ್ದರೂ, ಸಂತೋಷದಿಂದ ನನ್ನ ಕುರಿತು, ಪ್ರಕಟಣೆಗಾಗಿ ಕಾದಿರುವ 700 ಪುಟಗಳಷ್ಟಿರುವ ನಿರ್ಲಿಪ್ತ ಎಂಬ ಪುಸ್ತಕವನ್ನು ಬರೆದಿದ್ದು ಹಾಗೂ ಅಂತಹವರಿ0ದ ಸನ್ಮಾನ ಸ್ವೀಕರಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ವಿಶೇಷ ಚೇತನರಾದ ನಟರಾಜ ಹಾಗೂ ಸನ್ನಿಧಿ ಅವರ ಸಂಗೀತ ಜನರ ಮನಸೂರೆಗೊಂಡಿತು.
ಇದೇ ಸಂದರ್ಭದಲ್ಲಿ ವಿಶೇಷ ಕರೋಕೆ ಸೌಂಡ್ ಸಿಸ್ಟಮ್ ಅನ್ನು ಶ್ರೀ ವಿನಯ ಕೂರ್ಸೆ ಹಾಗೂ ಶ್ರೀಮತಿ ಶ್ರೀವಾಣಿ ಅವರು ಕಲಾವಿದರಿಗೆ ಉಡುಗೊರೆಯಾಗಿ ನೀಡಿದರು. ನಿವೃತ್ತ ಪ್ರಾಚಾರ್ಯ ಜಿ. ವಿ. ಹೆಗಡೆಯವರು ಗಣ್ಯರ ಪರಿಚಯ ಮಾಡಿಕೊಟ್ಟರು. ಅಣೆಕಟ್ಟು ಮಧುಸೂಧನ ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಂಘದ ನಿವೃತ್ತ ಲೆಕ್ಕಾಧಿಕಾರಿ ಆರ್ ಜಿ ದೇಶಪಾಂಡೆ ಅವರು ವಂದನಾರ್ಪಣೆ ಗೈದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳಾದ ಶ್ರೀ ವಿಶ್ವೇಶ್ವರ ಗಾಯತ್ರಿ, ಶ್ರೀ ಸತ್ಯನಾರಾಯಣ ಬಿ, ಜೆ ಎನ್ ಬಣಗಾರ್ , ಗಿರೀಶ್, ಲೇಖಕರುಗಳಾದ ಕೆ ವಿ ನಾಗರಾಜ್, ಕೊಪ್ಪರಂ ಅನ್ನಪೂರ್ಣ, ಸಿದ್ದಣ್ಣ ಸೊನ್ನದ, ಡಾ.ಆರ್ ಅಂಬುಜಾಕ್ಷಿ, ಗೀತಾ ಸಭಾಹಿತ, ಆರ್. ವತ್ಸಲಾ ಉಪಸ್ಥಿತರಿದ್ದರು.
- ಕರುನಾಡ ಕಂದ



















