
93 ನವ ಜೋಡಿಗೆ ಕೂಡಿ ಬಂತು ಕಂಕಣ ಭಾಗ್ಯ : ಮಾದಪ್ಪನ ಸನ್ನಿಧಾನದಲ್ಲಿ ಮೊಳಗಿದ ಗಟ್ಟಿಮೇಳ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 93 ಜೋಡಿಗಳು, 36 ವರ್ಷಗಳಲ್ಲಿ 2024 ಜೋಡಿಗಳು ಹೊಸ ಜೀವನಕ್ಕೆ ಕಾಲಿರಿಸಿದ ಪುಣ್ಯ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಜೊತೆಗೂಡಿ ಶಾಸಕ ಎಂ.ಆರ್ ಮಂಜುನಾಥ್ ನೆರವೇರಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಬೃಹನ್ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕ ಎಂ. ಆರ್. ಮಂಜುನಾಥ್ ವಧುವಿನ ಕೈಗೆ ಮಾಂಗಲ್ಯ ವಿತರಣೆ ಮಾಡಿದರು.
ಬೆಳಗ್ಗೆ 9.20ರಿಂದ 10.10 ರವರೆಗಿನ ಶುಭ ತುಲಾ ಲಗ್ನದಲ್ಲಿ ಸಾಮೂಹಿಕ ವಿವಾಹ ವೇಳೆಗೆ ವರರು ವಧುಗಳ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ 93 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಾಹ ಮಹೋತ್ಸವದಲ್ಲಿ 16 ಅಂತರ್ಜಾತಿ ವಿವಾಹವಾಗಿದ್ದು ಹಾಗೂ ಅಂತರರಾಜ್ಯದಿಂದ ಸಹ 4 ವಿವಾಹವಾಗಿದೆ ವಿಶೇಷಚೇತನರ ಒಂದು ಜೋಡಿ ವಿಶೇಷವಾಗಿತ್ತು. ಪ್ರಾಧಿಕಾರದ ವತಿಯಿಂದ ಮಧುವಿಗೆ ಚಿನ್ನದ 4 ಗ್ರಾಂ. ತೂಕದ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ ರವಿಕೆ, ವರನಿಗೆ ಪಂಚೆ, ಶರ್ಟ್, ಟವಲ್, ಪೇಟ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ವಧು ವರರಿಗೆ ಆಶೀರ್ವಚನ ನೀಡುತ್ತಾ, ಧಾರ್ಮಿಕ ಕೇಂದ್ರದಲ್ಲಿ ವಿವಾಹವಾದರೆ ಒಳಿತು ಆಗುತ್ತದೆ ಎಂಬ ನಂಬಿಕೆ. ಮಲೆ ಮಹದೇಶ್ವರ ಸ್ವಾಮಿಯವರ ಪುಣ್ಯ ಸನ್ನಿಧಿಯಲ್ಲಿ ವಿವಾಹವಾಗಿರುವ ನವ ಜೋಡಿಗಳು ರಾಗ, ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಅನ್ಯೂನ್ಯತೆ ಯಿಂದ ಅರಿತು ಸುಖ ಶಾಂತಿಯಿಂದ ಬಾಳ್ವೆ ಮಾಡಿ. ಮಾದೇಶ್ವರರು ಉತ್ತರ ನಾಡಿನಿಂದ ಇಲ್ಲಿಗೆ ಬಂದು ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತಿದ್ದ ಜನರ ಜೀವನವನ್ನು ಹಸನು ಮಾಡಿ ಬದುಕು ಕೊಟ್ಟವರು ಇಂತಹ ಸ್ಥಳದಲ್ಲಿ ನವ ದಾಂಪತ್ಯಕ್ಕೆ ಕಾಲಿಡುತ್ತಿರುವ ನೀವೇ ಧನ್ಯರು. ಪವಿತ್ರವಾದ ಕ್ಷೇತ್ರಗಳಲ್ಲಿ ಮಹದೇಶ್ವರ ಬೆಟ್ಟ ಅಮೂಲ್ಯವಾದದ್ದು, ಈ ಕ್ಷೇತ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರುವುದು ನಿಮ್ಮ ಜೀವನದ ಪುಣ್ಯದ ಕ್ಷಣಗಳು. ವೈವಾಹಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಪರಸ್ಪರ ಸಮಾನವಾಗಿ ಹಚ್ಚಿಕೊಳ್ಳಬೇಕು ಹಾಗೂ ಈ ಕ್ಷೇತ್ರದ ಶಾಸಕರು ಕ್ಷೇತ್ರದ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳನ್ನೂ ಒದಗಿಸುವ ಕನಸು ನನಸಾಗಲಿ ಎಂದು ಶುಭ ಹಾರೈಸಿ ಇಂದು ವಿವಾಹವಾಗಿರುವ ಜೋಡಿಗಳಿಗೆ ಶ್ರೀ ಮಹದೇಶ್ವರ ಆಶೀರ್ವಾದವಿರಲಿ ಎಂದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಮಲೆಮಹದೇಶ್ವರ ಬೆಟ್ಟವು ಧಾರ್ಮಿಕ ಯಾತ್ರಾ ಸ್ಥಳವಾಗಿದ್ದು, ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಇಲ್ಲಿನ ಮಾದಪ್ಪನ ಮಹಿಮೆಯಿಂದ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ.
ಇಲ್ಲಿ ಮದುವೆಯಾದ ದಂಪತಿಗಳು ಇದುವರೆಗೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಮದುವೆ ಎನ್ನುವುದು ಜೀವನದ ಪವಿತ್ರ ಬಂಧವಾಗಿದ್ದು, ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಆದರೆ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುವುದೇ ನಿಜವಾದ ಬದುಕು , ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಳ್ಳುವುದು ವ್ಯರ್ಥ, ಸರಳವಾಗಿ ಸಾಮೂಹಿಕ ವಿವಾಹವಾಗುವುದು ನಮ್ಮ ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮೆಟ್ಟೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸದಾಶಿವಂ, ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಚಂದ್ರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೂತ್, ಡಿ.ವೈ.ಎಸ್. ಪಿ. ಧರ್ಮೇಂದ್ರ, ತಾಲೂಕು ದಂಡಾಧಿಕಾರಿ ಚೈತ್ರಾ ಹಾಗೂ ಸಾರಿಗೆ ಇಲಾಖೆ ವ್ಯವಸ್ಥಾಪಕರಾದ ಅಶೋಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್



















